ಮಧುರ ಸಮಾಗಮ

posted in: Kavan | 0

ಆನಂದದಿಂದಲಿ ನಲಿದಾಡಿದನು
ಆನಂದಬೋಧೇಂದ್ರ ಶ್ರೀ ಯತಿವರನು
ಆನಂದಮೂರುತಿ ಶ್ರೀಮದ್ಗಂಗಾಧರೇಂದ್ರರ
ಶಿಷ್ಯಸ್ವೀಕೃತಿಯಿಂದ ಕುಣಿಕುಣಿದಾಡುತಾ||

ಗುರುಶಿಷ್ಯರ ಈ ಮಧುರ ಸಮಾಗಮ
ಶಿಷ್ಯಕೋಟಿಗದುವೇ ಬಲು ಸಂಭ್ರಮ
ಶಾಲ್ಮಲೆಯೇ ತಾನುಕ್ಕಿಹರಿದಳೋ
ಎಂಬ ತೆರದಿ ಜನ ಸಾಗರ ಸಂಗಮ
ಕಾಣುತ ಅರಳಿದ ನೋಟ ವಿಹಂಗಮ||

ವೀರಪುರದ ಶ್ರೀ ಗಂಗೆಯ ಮನೆಯಲಿ
ಪತಿ ಗಣಪತಿ ಕುಲದೇವ ನೃಸಿಂಹರ
ಕರುಣದಿ ಭುವನೇಶ್ವರಿಯುದರದಲಿ
ಫಣಿ ನಾಮದಿ ನಿಜ ವೈರಾಗ್ಯದ ಗಣಿ
ಉದಯಿಸಿ ಅರಳಿತು ಸ್ವರ್ಣಲತೆಯಲಿ||

ರಾಜರಾಜೇಶ್ವರೀ ಚಂದ್ರಮೌಳೀಶ್ವರ
ದೇವರೆದುರು ಗುರು ಗಂಗಾಧರೇಂದ್ರರ
ಪ್ರಾರ್ಥನೆ ಮಠದುನ್ನತಿಗೆ ನಿರಂತರ
ಶಿಷ್ಯೋತ್ಸವ ಸಂಭ್ರಮದಿ ಸಾಕಾರ
ಗುರುಮನವರಳಿತು ದಿಗಂತರ||

ಗಣಪತಿ ಮೆಣಸುಮನೆ.