ವೇದಾಂತದ ಎಲ್ಲ ಸಿದ್ಧಾಂತಗಳ ಸಾರ ಏನು?

posted in: Gurubodhe | 0

ಪರಮಾತ್ಮ ನಮಗೆ ಅತ್ಯಂತ ಹತ್ತಿರದಲ್ಲಿದ್ದಾನೆ, ಶರೀರಕ್ಕಿಂತ ಹತ್ತಿರದಲ್ಲಿದ್ದಾನೆ. ಅವನನ್ನು ಭಕ್ತಿಯ ಮೂಲಕ, ಜ್ಞಾನದ ಮೂಲಕ, ಉಪಾಸನೆಯ ಮೂಲಕ ಅಥವಾ ಕರ್ಮದ ಮೂಲಕ ಗಟ್ಟಿಯಾಗಿ ಹಿಡಿಯಬೇಕು – ಇದೇ ವೇದಾಂತದ ಎಲ್ಲ ಸಿದ್ಧಾಂತಗಳ ಸಾರ.

ಉಪನಿಷತ್ತುಗಳೇ ವೇದಾಂತಗಳು. ಅವುಗಳನ್ನು ಮೂರು ಆಚಾರ್ಯರು ಮೂರು ರೀತಿಗಳಲ್ಲಿ ಅರ್ಥೈಸಿದ್ದಾರೆ. ಉಪನಿಷತ್ತುಗಳ ಅರ್ಥ ಅದ್ವೈತ ಎಂಬುದಾಗಿ ಶ್ರೀ ಶಂಕರಾಚಾರ್‍ಯರು, ವಿಶಿಷ್ಟಾದ್ವೈತ ಎಂಬುದಾಗಿ ಶ್ರೀ ರಾಮಾನುಜಾಚಾರ್‍ಯರು, ದ್ವೈತ ಎಂಬುದಾಗಿ ಶ್ರೀ ಮಧ್ವಾಚಾರ್‍ಯರು ಅರ್ಥೈಸಿದ್ದಾರೆ. ಈ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಶಬ್ದಗಳು ನಮ್ಮ (ಜೀವಾತ್ಮ) ಮತ್ತು ಪರಮಾತ್ಮನ ನಡುವಿನ ಸಂಬಂಧವನ್ನು ಹೇಳುತ್ತವೆ. ಪರಮಾತ್ಮನು ಅತ್ಯಂತ ಹತ್ತಿರದಲ್ಲಿದ್ದಾನೆ ಎಂಬುದು ಈ ಮೂರೂ ಸಿದ್ಧಾಂತಗಳ ಒಕ್ಕೊರಲಿನ ಘೋಷಣೆಯಾಗಿದೆ. ಅವನು ಶರೀರಕ್ಕಿಂತ ಹತ್ತಿರದಲ್ಲಿದ್ದಾನೆ. ಏಕೆಂದರೆ ಜೀವಾತ್ಮನಿಗೆ ಶರೀರವು ಹೊರಗಿರುವ ಆವರಣವಾದರೆ, ಪರಮಾತ್ಮನು ಒಳಗಿನ ಮೂಲ ಸ್ತಂಭವಾಗಿದ್ದಾನೆ. ಶರೀರದ್ದು ಒಂದು ಜನ್ಮದ ಸಂಬಂಧವಾಗಿದ್ದರೆ, ಪರಮಾತ್ಮನ ಜೊತೆಗಿನದು ಎಲ್ಲ ಜನ್ಮಗಳ ಸಂಬಂಧವಾಗಿದೆ. ಮೋಕ್ಷ ಎಂಬ ಸ್ಥಿತಿಯಲ್ಲಿ ಶರೀರವೇ ಇರುವುದಿಲ್ಲ. ಆಗಲೂ ಪರಮಾತ್ಮನ ಸಂಬಂಧವಿರುತ್ತದೆ.

ಭಕ್ತಿ, ಜ್ಞಾನ ಮುಂತಾದ ಯಾವುದಾದರೂ ಒಂದು ಉಪಾಯದ ಮೂಲಕ ಪರಮಾತ್ಮನನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಕೋತಿಯ ಮರಿಯು ತಾಯಿ ಕೋತಿಯನ್ನು ಬಲವಾಗಿ ಹಿಡಿದುಕೊಳ್ಳುವಂತೆ ಹಿಡಿದುಕೊಳ್ಳಬೇಕು. ಅಥವಾ ತಾಯಿ ಬೆಕ್ಕು ತನ್ನ ಮರಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ರೀತಿಯಲ್ಲಿ ಪರಮಾತ್ಮನೇ ನಮ್ಮನ್ನು (ಜೀವಾತ್ಮನನ್ನು) ಹಿಡಿದುಕೊಳ್ಳುವಂತೆ ಭಕ್ತಿಯ ಮೂಲಕ ಮಾಡಿಕೊಳ್ಳಬೇಕು. ಜ್ಞಾನಮಾರ್ಗಕ್ಕೆ ಕೋತಿಯ ಮರಿ ಉದಾಹರಣೆಯಾದರೆ (ಮರ್ಕಟಕಿಶೋರ ನ್ಯಾಯ) ಭಕ್ತಿಮಾರ್ಗಕ್ಕೆ ಉದಾಹರಣೆ (ಮಾರ್ಜಾರಕಿಶೋರ ನ್ಯಾಯ) ಬೆಕ್ಕಿನ ಮರಿಯದು. ಪರಮಾತ್ಮನನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಶರೀರ ಮರೆತುಹೋಗುತ್ತದೆ. ಶರೀರ ಮರೆತುಹೋಗುವಿಕೆಯೇ ಪರಮಾತ್ಮನನ್ನು ಹಿಡಿದುಕೊಂಡಿರುವುದು ಗಟ್ಟಿಯಾಗಿದೆ ಎಂಬುದರ ಲಕ್ಷಣ. ಗಾಢ ನಿದ್ದೆ ಅಥವಾ ಮೂರ್ಛಾವಸ್ಥೆಯಲ್ಲಿ ಶರೀರ ಮರೆತುಹೋಗುತ್ತದೆ. ಆದರೆ ಅಲ್ಲಿ ತಮೋಗುಣದಿಂದ ಶರೀರ ಮರೆತುಹೋಗುತ್ತದೆ. ಜಾಗೃದವಸ್ಥೆಯಲ್ಲಿ ಇರುವಾಗಲೇ ಪರಮಾತ್ಮನನ್ನು ಹಿಡಿದುಕೊಳ್ಳುವ ಮೂಲಕ ಶರೀರ ಮರೆತುಹೋದರೆ ಅದು ಸತ್ತ್ವಗುಣದಿಂದ ಆಗಿರುತ್ತದೆ.

ಹೀಗೆ ಜಾಗೃದವಸ್ಥೆಯಲ್ಲಿಯೇ ಶರೀರವನ್ನು ಮರೆಯುವವರು ಧನ್ಯರು. ಅವರೇ ಮಹಾತ್ಮರು. ಆದರೆ ಅದಕ್ಕೆ ಭಕ್ತಿಯಲ್ಲಿ, ಜ್ಞಾನದಲ್ಲಿ ಗಟ್ಟಿತನ ಬೇಕು. ಪರಮಾತ್ಮನನ್ನು ನಂಬಿಯೂ ನಂಬದಿರುವ ಇಬ್ಬಂದಿ ಮನಃಸ್ಥಿತಿಯವರೆಲ್ಲ ಈ ಗಟ್ಟಿತನವನ್ನು ಪಡೆಯಲು ಪ್ರಯತ್ನಿಸಬೇಕು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ