ದೇವರ ಪೂಜೆ, ಜಪ ಮತ್ತು ಧ್ಯಾನಗಳಲ್ಲಿ ಆನಂದದ ಅನುಭವವಾಗಬೇಕು.ಹೀಗೆ ಆನಂದದ ಅನುಭವ ಪಡುವವರು ಜೀವನದಲ್ಲಿ ಗೆಲ್ಲುತ್ತಾರೆ. ಅಷ್ಟೇ ಅಲ್ಲ ಪರದಲ್ಲಿಯೂ ಉತ್ತಮ ಗತಿಯನ್ನು ಹೊಂದುತ್ತಾರೆ.
ಮನುಷ್ಯನಿಗೆ ಎರಡು ರೀತಿಯ ಆನಂದದ ಅನುಭವಕ್ಕೆ ಅವಕಾಶವಿದೆ. ಇಂದ್ರಿಯಗಳ ಮೂಲಕ ವಿಷಯಸುಖವೆಂಬ ಆನಂದ ಮತ್ತು ವಿಷಯಸುಖಗಳಿಂದ ದೂರವಿರುವ ಮನಸ್ಸಿನಿಂದ ದೇವರ ಚಿಂತನೆಯಲ್ಲಿ ಸಿಗುವ ಆನಂದ. ವಿಷಯಸುಖಗಳಲ್ಲಿಯೇ ನಿಂತವನು ಜೀವನದಲ್ಲಿ ಸೋಲುತ್ತಾನೆ. ಯಾಕೆಂದರೆ ಅವನ ಶರೀರ, ಇಂದ್ರಿಯ, ಮನಸ್ಸುಗಳು ದುರ್ಬಲಗೊಳ್ಳುತ್ತವೆ. ಪರದಲ್ಲಿ ಸದ್ಗತಿಯ ವಿಷಯವಂತೂ ಅವನಿಗೆ ತುಂಬಾ ದೂರವೇ ಆಗಿದೆ. ದೇವರ ಪೂಜಾ-ಜಪ-ಧ್ಯಾನಗಳಲ್ಲಿ ಸಹಜವಾದ ಆನಂದವನ್ನು ಪಡೆಯುವವನು ಗೆಲ್ಲುತ್ತಾನೆ. ಯಾಕೆಂದರೆ ಅವನ ಶರೀರೇಂದ್ರಿಯ ಮನಸ್ಸುಗಳು ದುರ್ಬಲಗೊಳ್ಳುವುದಿಲ್ಲ. ಶ್ರೀ ಶಂಕರ ಭಗವತ್ಪಾದರು ಹೇಳಿದ್ದಾರೆ – “ಯಸ್ಯಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ” ಪರಮಾತ್ಮನ ಯಾವುದಾದರೂ ಒಂದು ರೂಪದಲ್ಲಿ ಯಾವಾತನ ಮನಸ್ಸು ಆನಂದಿಸುತ್ತದೆಯೋ ಅವನು ಸುಖವಾಗಿರುತ್ತಾನೆ. ಕಷ್ಟಗಳು ಬಂದಾಗ, ಚಿಂತೆಗಳು ಬಂದಾಗ, ಮನಸ್ಸು ಅಲ್ಲೋಲಕಲ್ಲೋಲವಾದಾಗಲೆಲ್ಲಾ ತನ್ನ ದೇವರಲ್ಲಿ ಪ್ರಯತ್ನ ಪೂರ್ವಕವಾಗಿ ಮನಸ್ಸಿಡುವುದರ ಮೂಲಕ ಕಷ್ಟಗಳನ್ನು, ಚಿಂತೆಯನ್ನು, ಅಲ್ಲೋಲಕಲ್ಲೋಲ ಸ್ಥಿತಿಯನ್ನು ದಾಟುತ್ತಾನೆ. ಅವನ ಕಷ್ಟಗಳು ಮತ್ತು ಚಿಂತೆಗಳು ಆಯಾದಿವಸವೇ ಕರಗಿಹೋಗುತ್ತವೆ.
ಇವೆಲ್ಲಾ ಆಗಬೇಕಿದ್ದರೆ ದೇವರ ಧ್ಯಾನದಲ್ಲಿ ಸಹಜವಾದ ಆನಂದದ ಅನುಭವ ಆಗುವ ಮಟ್ಟಕ್ಕೆ ಹತ್ತಬೇಕಾಗುತ್ತದೆ. ಅದು ಭಕ್ತಿ, ಏಕಾಗ್ರತೆಗಳ ಬೆಳವಣಿಗೆಯಾದ ನಂತರವೇ ಬರುತ್ತದೆ. ಹಾಗಾಗಿ ಇದು ಸಾಧ್ಯವಿಲ್ಲದಿದ್ದರೆ ದೇವರ ಚಿಂತನೆಯಲ್ಲಿ ಏಕಾಗ್ರತೆಯನ್ನಾದರೂ ಪಡೆಯಬೇಕು. ಅಂದರೆ ಉಳಿದೆಲ್ಲಾ ವಿಷಯಗಳು ಮರೆತು ಹೋಗುವ ಸ್ಥಿತಿ ಬರಬೇಕು. ಆರಂಭದಲ್ಲಿ ಬೇರೆ ವಿಷಯಗಳು ಮನಸ್ಸಿನಲ್ಲಿ ಸುಳಿದರೂ ಮುಕ್ತಾಯದ ಹೊತ್ತಿಗಾದರೋ ಬೇರೆ ಎಲ್ಲಾ ವಿಷಯಗಳು ಮರೆತು ಹೋಗುವ ಸ್ಥಿತಿ ಬರಬೆಕು. ಇದು ಇಲ್ಲಿ ಹೇಳಿರುವ ಏಕಾಗ್ರತೆ.
ಇಂತಹ ಏಕಾಗ್ರತೆ ಸಾಧ್ಯವಿಲ್ಲದಿದ್ದರೆ ಪೂಜಾದಿಗಳಲ್ಲಿ ನಿಷ್ಠೆಯನ್ನಾದರೂ ಬೆಳೆಸಿಕೊಳ್ಳಬೇಕು. ಬೇರೆ ವಿಷಯಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೂ ತಾನು ಮಾಡಬೇಕಾದ ಪೂಜಾ-ಜಪ-ಧ್ಯಾನಗಳನ್ನು ನಿಯಮಿತವಾದ ಸಮಯದಲ್ಲಿ ತಪ್ಪದೇ ಮಾಡುತ್ತಾಹೋಗಬೇಕು, ಇದು ನಿಷ್ಠೆ. ನಿಷ್ಠೆಯೇ ದೀರ್ಘಕಾಲದ ಅಭ್ಯಾಸದಿಂದ ಏಕಾಗ್ರತೆಯನ್ನು ತಂದುಕೊಡುತ್ತದೆ. ಏಕಾಗ್ರತೆಯ ಅಭ್ಯಾಸ ದೀರ್ಘಕಾಲವಾದಾಗ ಮತ್ತು ಭಕ್ತಿಯ ಸೇರ್ಪಡೆಯಾದಾಗ ಹಿಂದೆ ಹೇಳಿದ ಸಹಜ ಆನಂದ ಬರುತ್ತದೆ. ದಿನಾಲೂ ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಕುಳಿತುಕೊಂಡು ಪೂಜಾ-ಜಪ-ಧ್ಯಾನಗಳಲ್ಲಿ ತೊಡಗುವುದು ಇದೆಲ್ಲದಕ್ಕಿಂತಲೂ ಮೊದಲು ಬರಬೇಕು.
ಒಟ್ಟಾರೆ ಇಂದ್ರಿಯಗಳಿಂದ ಆಗಬೇಕಾದ ಕರ್ತವ್ಯಗಳನ್ನು ಬೇಗ ಮುಗಿಸಿಕೂಂಡು ಇಂದ್ರಿಯಾತೀತ ಸುಖದ ಕಡೆಗೆ ಹೆಜ್ಜೆ ಹಾಕಬೇಕು.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ