
ನಮ್ಮ ಮಾನಸಿಕ ಮತ್ತು ದೈಹಿಕ ಸರ್ವತೋಮುಖ ಬೆಳವಣಿಗೆ ಮತ್ತು ಪೋಷಣೆಗೆ ಆಹಾರ ಅತ್ಯವಶ್ಯಕ ಅಂಶ. ಸ್ವಸ್ಥ ಆರೋಗ್ಯದಲ್ಲಿ ಪ್ರತಿನಿತ್ಯ ನಾವು ಸೇವಿಸುವ ಸಮತೋಲಿತ ಆಹಾರವೇ ಮುಖ್ಯ ಎಂಬುದು ತಿಳಿದಿದ್ದರೂ ಎಷ್ಟೋ ಬಾರಿ ಕಡೆಗಣಿಸಲ್ಪಡುವ ವಿಚಾರವೂ ಅದೇ ಆಗಿದೆ. ಕೆಲಸದ ಒತ್ತಡದಲ್ಲಿಯೋ ಅಥವಾ ಇನ್ಯಾವುದೊ ಸಂದರ್ಭದಲ್ಲಿ ಊಟ-ಉಪಹಾರ ತ್ಯಜಿಸುವುದು, ಊಟದ ಸಮಯ ಬದಲಾವಣೆ, ಹೊಟ್ಟೆ ತುಂಬಿದರಾಯಿತಲ್ಲ ಯಾವುದಾದರೇನು ಎಂದು ಜಂಕ್ ಫುಡ್ ತಿನ್ನುವುದು ಹೀಗೆ ಅನೇಕ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತೇವೆ.
ಇಂದು ದೇಶ ಎಲ್ಲಾ ವಿಭಾಗದಲ್ಲಿ ಮುಂದುವರೆಯುತ್ತಿದೆ…ಜನ ವಿದ್ಯಾವಂತರಾಗುತ್ತಿದ್ದಾರೆ…ಹಣವಂತರಾಗುತ್ತಿದ್ದಾರೆ..ಇವೆಲ್ಲ ಸಂತೋಷ ಪಡುವ ವಿಚಾರವೇ ಸರಿ.ಆದರೆ, ಅಷ್ಟೇ ಆರೋಗ್ಯ ಸಮಸ್ಯೆಗಳೂ ಕೂಡ ಹೆಚ್ಚಾಗುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಬರುವ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ ಮುಂತಾದವುಗಳಿಗೆ ನಮ್ಮ ತಪ್ಪಾದ ಆಹಾರಾಭ್ಯಾಸ ಮತ್ತು ಜೀವನಶೈಲಿಯೇ ಮೂಲಕಾರಣಗಳು ಎಂದು ಅನೇಕ ಅಧ್ಯಯನಗಳಿಂದಲೇ ಸಾಬೀತಾಗಿದೆ.
ಎಲ್ಲೇ ಹೋದರೂ ಆ ಪ್ರದೇಶಕ್ಕೆ ಅದರದೇ ಆದ ಆಹಾರ ಸಂಸ್ಕೃತಿ ಇರುತ್ತದೆ. ಆಹಾರವೇ ಔಷಧವಾದ ನಮ್ಮ ಭಾರತೀಯ ಆಹಾರ ಪದ್ಧತಿ ವಿಭಿನ್ನ ಮತ್ತು ಉತ್ಕೃಷ್ಟವಾದುದು. ನಮ್ಮ ಪೂರ್ವಜರು ವಾತಾವರಣಕ್ಕೆ ತಕ್ಕಂತೆ, ಋತುಮಾನಕ್ಕೆ ತಕ್ಕಂತೆ ದೇಹಕ್ಕೆ ಒಗ್ಗುವ ಆಹಾರಗಳನ್ನು ಪರಿಚಯಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಜನ ನಾವು ಮುಂದುವರೆದಿದ್ದೇವೆ ಎಂಬ ಭ್ರಮೆಯಲ್ಲಿ , ಸಮಯ ಉಳಿಸುವ ನೆಪದಲ್ಲಿ ನೈಸರ್ಗಿಕವಾಗಿ ದೊರೆಯುವ ತಿನಿಸುಗಳನ್ನು ಬಿಟ್ಟು ಅತಿಯಾಗಿ ಸಂಸ್ಕರಿಸಿದ ‘ರೆಡಿ ಟು ಈಟ್’, ಪ್ಯಾಕೇಜ್ಡ್ ಆಹಾರಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ ನಮ್ಮ ದೇಹಕ್ಕೆ ಹಾನಿ ಉಂಟು ಮಾಡುವ ಪ್ರಮಾಣದಲ್ಲಿ ಸಕ್ಕರೆ/ಉಪ್ಪು/ರುಚಿ ಹೆಚ್ಚಿಸಲು ರಾಸಾಯನಿಕ ಅಂಶಗಳನ್ನೊಳಗೊಂಡ ಪದಾರ್ಥಗಳನ್ನು ಸೇರಿಸಿರುವುದರಿಂದ ನಿಧಾನವಾಗಿ ನಮ್ಮ ಅನಾರೋಕ್ಕೆ ಕಾರಣವಾಗುತ್ತದೆ.
ಹಾಗಾದರೆ ಉತ್ತಮ ಆಹಾರ ಏನನ್ನು ಒಳಗೊಂಡಿರಬೇಕು?
ನಾವು ನಿತ್ಯ ಮಾಡುವ ಕೆಲಸಗಳಿಗೆ ಹಾಗೂ ದೇಹದ ಆಂತರಿಕ ಕ್ರಿಯೆಗಳಿಗೂ ಕೂಡ ಶಕ್ತಿಯ ಅಗತ್ಯತೆ ಇದೆ. ಅಂತಹ ಪುಷ್ಟಿಯನ್ನು ನೀಡಲು ಕಾರ್ಬೋಹೈಡ್ರೇಟ್ (ಪಿಷ್ಟ), ಬೆಳವಣಿಗೆ ,ಶರೀರದ ಕೋಶ ರಚನೆಗೆ ಮತ್ತು ಪುನರುತ್ಪತ್ತಿಗೆ ಬೇಕಾಗುವ ಪ್ರೋಟೀನ್, ಮೆದುಳು-ಮೂಳೆಯ ಆರೋಗ್ಯ ಮುಂತಾದವುಗಳಿಗೆ ಒಳ್ಳೆಯ ಕೊಬ್ಬು, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಮತ್ತಿತರೆ ಪೋಷಣೆ ನೀಡುವಂತಹ ವಿಟಮಿನ್, ಖನಿಜಾಂಶ ಹಾಗೂ ನಾರಿನಂಶ..ಹೀಗೆ ಇವೆಲ್ಲವುಗಳನ್ನು ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ದೊರೆಯುವಂತಹ ಆಹಾರಗಳನ್ನು ಸೇವಿಸಿದರೆ ಅದುವೇ ಸಮತೋಲಿತ ಪೌಷ್ಟಿಕ ಆಹಾರ.
ಹಾಗೆಯೇ ನಾವು ತಿನ್ನುವ ಆಹಾರದ ಮೂಲವಸ್ತು ಯಾವುದು, ಎಲ್ಲಿಂದ ದೊರೆಯುತ್ತದೆ ಮತ್ತು ಹೇಗೆ ತಯಾರಾಗಿದೆ ಎಂದು ತಿಳಿದು ತಿನ್ನುವುದು ಒಳಿತು..ಏಕೆಂದರೆ ಇತ್ತೀಚಿಗೆ ‘ನ್ಯುಟ್ರಿಷನ್’ ಹೆಸರಿನಲ್ಲಿ ಸಾವಿರಾರು ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಲೇ ಇರುತ್ತವೆ.ಅವುಗಳಲ್ಲಿ ನೈಸರ್ಗಿಕ ಪದಾರ್ಥಗಳು ಎಷ್ಟಿವೆ, ರಾಸಾಯನಿಕ ವಸ್ತುಗಳಿಂದ ತಯಾರಾಗಿವುದು ಯಾವುದು ಎಂದು ಅರಿತರೆ ಒಳ್ಳೆಯದು. ತೂಕ ಕಡಿಮೆಮಾಡಿಕೊಳ್ಳಬೇಕು, ಹೆಚ್ಚಿಸಿಕೊಳ್ಳಬೇಕು, ಸೌಂದರ್ಯ ಹೆಚ್ಚಿಸುವುದು ಅಥವಾ ಇನ್ನಾವುದೇ ಆರೋಗ್ಯ ತೊಂದರೆಗಳಿದ್ದಾಗ ಸಾಮಾನ್ಯರ ದೌರ್ಬಲ್ಯವೇ ಎಷ್ಟೋ ಕಂಪನಿಗಳ ಆದಾಯವಾಗಿರುತ್ತದೆ. ಅತೀ ಕಡಿಮೆ ಅವಧಿಯಲ್ಲಿ ತೂಕ ಹೆಚ್ಚು-ಕಡಿಮೆ ಮಾಡಿಕೊಳ್ಳುವ ಆಸೆಯಿಂದ ಅಂತಹ ಉತ್ಪನ್ನಗಳನ್ನು ಬಳಸಿ ಅವುಗಳಿಂದ ಅಡ್ಡಪರಿಣಾಮ ಅನುಭವಿಸಿರುವವರು ಅನೇಕರಿದ್ದಾರೆ. ನೆನಪಿಡಿ, ಯಾವುದೋ ಒಂದೇ ‘ಸೂಪರ್ ಫುಡ್’ ನಿಂದ ಎಲ್ಲ ರೀತಿಯ ಪೋಷಕಾಂಶಗಳು ಸಿಗಲಾರದು.ಆರೋಗ್ಯ ಸಮಸ್ಯೆಗಳ ಸೂಚನೆಗಳಿದ್ದರೆ ಸಂಬಂಧಿಸಿದ ತಜ್ಞರನ್ನು ಅಥವಾ ವೈದ್ಯರನ್ನು ಬೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕೇ ವಿನ: ಬೇರೆ ಶಾರ್ಟ್ ಕಟ್ ಗಳು ಬೇಡ.
ಮೇಲೆ ತಿಳಿಸಿದ ಅಂಶಗಳನ್ನು ಹೊಂದಿರುವಂತಹ ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ಸರಿಯಾದ ನಿದ್ರೆ ಇವುಗಳಿಂದ ಮಾತ್ರ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು.. ಆಹಾರ- ಆರೋಗ್ಯ ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ಮುಂದಿನ ಲೇಖನಗಳಲ್ಲಿ ನೀಡಲಾಗುವುದು.
ಲೇಖನ: ಪೂರ್ಣಿಮಾ ಲಾಲ್ಗುಳಿ
ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ