ಪ್ರಾತರುತ್ಥಾನ

posted in: Articles | 0

ಪ್ರಾತರುತ್ಥಾನವೆಂದರೆ ಬೆಳಿಗ್ಗೆ ಏಳುವುದು. ಇದನ್ನೇ ಪ್ರಬೋಧ ಎನ್ನುವುದಾಗಿಯೂ ಕರೆಯುತ್ತಾರೆ. *ಬ್ರಾಹ್ಮೇ ಮುಹೂರ್ತೇ ಚೋತ್ಥಾಯ, ಬ್ರಾಹ್ಮೇ ಮುಹೂರ್ತೇ ಬುಧ್ಯೇತ*, *ಬ್ರಾಹ್ಮೇ ಮುಹೂರ್ತೇ ವಿಬುಧ್ಯೇತ್* ಎಂಬುದಾಗಿ ಉತ್ಥಾನಕ್ಕೆ ಬ್ರಾಹ್ಮಮುಹೂರ್ತದ ಕಾಲನಿರ್ದೇಶನವನ್ನು ಮಾಡಿದ್ದಾರೆ. ಸೂರ್ಯೋದಯಕ್ಕಿಂತ ಮೊದಲು ಬ್ರಾಹ್ಮೀಮುಹೂರ್ತದಲ್ಲಿ ಏಳಬೇಕು. 

ಬ್ರಾಹ್ಮಮುಹೂರ್ತದ ನಿರ್ಣಯವು ಶಾಸ್ತ್ರದಲ್ಲಿ ಒಂದೇ ರೀತಿಯಾಗಿ ಹೇಳಲ್ಪಟ್ಟಿಲ್ಲ. ಧರ್ಮಶಾಸ್ತ್ರಗ್ರಂಥಗಳಲ್ಲಿ ಸಾಮಾನ್ಯವಾಗಿ ಮೂರ್ನಾಲ್ಕು ರೀತಿಯ ಕಾಲಕ್ಕೆ ಬ್ರಾಹ್ಮಮುಹೂರ್ತವೆಂದು ಕರೆದಿದ್ದಾರೆ. 

ಸೂರ್ಯೋದಯದ ಹಿಂದಿನ ಎರಡು ಮುಹೂರ್ತದ ಕಾಲವು ಬ್ರಾಹ್ಮಮುಹೂರ್ತವೆಂಬುದು ಒಂದು ಪಕ್ಷ. (ಆಧಾರ-ಕಾಲಮಾಧವೀಯ) 

ಒಂದು ಮುಹೂರ್ತವೆಂದರೆ ಎರಡು ಘಟಿಯಷ್ಟು ಕಾಲ. ಎರಡು ಮುಹೂರ್ತಕ್ಕೆ ನಾಲ್ಕು ಘಟಿಗಳು. ಒಂದು ಘಟಿಗೆ ಇಪ್ಪತ್ತನಾಲ್ಕು ನಿಮಿಷಗಳಂತೆ ನಾಲ್ಕು ಘಟಿಗಳಿಗೆ ತೊಂಬತ್ತಾರು ನಿಮಿಷಗಳಾಯಿತು. ಸೂರ್ಯೋದಯಕ್ಕಿಂತ ಮೊದಲು ತೊಂಬತ್ತಾರು ನಿಮಿಷಗಳ ಕಾಲವು ಬ್ರಾಹ್ಮ ಮುಹೂರ್ತ. 

ಬ್ರಾಹ್ಮ ಮುಹೂರ್ತವನ್ನು ಬೇರೊಂದು ರೀತಿಯಲ್ಲಿಯೂ ಹೇಳಿದ್ದಾರೆ. ಪಶ್ಚಿಮೇರ್ಧಪ್ರಹರೇ ಪ್ರಬುಧ್ಯ, ರಜನೀ ಪ್ರಾಂತಯಾಮಾರ್ಧಂ ಬ್ರಾಹ್ಮಃ ಸಮಯ ಉಚ್ಯತೇ ಎಂಬ ವಚನಗಳ ಆಧಾರದಂತೆ ತೊಂಬತ್ತು ನಿಮಿಷಗಳು. (ಆಧಾರ- ಮಿತಾಕ್ಷರಾ, ವೀರಮಿತ್ರೋದಯದ ಕಾಶೀಖಂಡವಚನ).

 ಅರ್ಧಪ್ರಹರ ಅಥವಾ ಅರ್ಧ ಯಾಮವೆಂದರೆ ತೊಂಬತ್ತು ನಿಮಿಷಗಳು. ಈ ತೊಂಬತ್ತು ನಿಮಿಷಗಳ ಮೊದಲನೆಯ ಅರ್ಧಭಾಗವನ್ನು ಬ್ರಾಹ್ಮಮುಹೂರ್ತವೆಂದು, ಅನಂತರದ ಅರ್ಧಭಾಗವನ್ನು ರೌದ್ರಮುಹೂರ್ತವೆಂದೂ ಪರಾಶರಮಾಧವೀಯದಲ್ಲಿ ಹೇಳಿದ್ದಾರೆ. ಈ ಪಕ್ಷದಲ್ಲಿ ಸೂರ್ಯೋದಯಕ್ಕಿಂತ ಮೊದಲು ತೊಂಬತ್ತು ನಿಮಿಷಗಳ ಕಾಲವು ಬ್ರಾಹ್ಮಮುಹೂರ್ತ.

ಮತ್ತೊಂದು ರೀತಿಯ ಬ್ರಾಹ್ಮಮುಹೂರ್ತದ ನಿರ್ವಚನವೂ ಇದೆ. ರಾತ್ರೇಸ್ತು ಪಶ್ಚಿಮೋ ಯಾಮೋ ಮುಹೂರ್ತೋ ಬ್ರಾಹ್ಮ ಉಚ್ಯತೇ, ಯಾಮಿನ್ಯಾಃ ಪಶ್ಚಿಮೇ ಯಾಮೇ, ರಾತ್ರ್ಯಾಂ ತ್ರಿಭಾಗಶಿಷ್ಟಾಯಾಂ ಈ ಮುಂತಾದ ವಚನಗಳಿಂದ ರಾತ್ರಿಯ ಉತ್ತರಾರ್ಧವು ಬ್ರಾಹ್ಮಮುಹೂರ್ತವೆಂದು ಕರೆಯಲ್ಪಡುತ್ತದೆ. (ಆಧಾರ-ಸ್ಮೃತಿಚಂದ್ರಿಕೆಯ ಪಿತಾಮಹವಚನ, ವೀರಮಿತ್ರೋದಯದ ವ್ಯಾಸವಚನ, ಆಶ್ವಲಾಯನಸ್ಮೃತಿ, ದಕ್ಷಸ್ಮೃತಿ, ಮನ್ವರ್ಥಮುಕ್ತಾವಲೀವ್ಯಾಖ್ಯಾ ಮುಂತಾದವು). 

ರಾತ್ರಿಯನ್ನು ಎರಡು ಭಾಗಗಳಾಗಿ ಮಾಡಿದಾಗ ಎರಡನೆಯ ಭಾಗದಲ್ಲಿ ಏಳಬೇಕು. ಈ ಪಕ್ಷದಲ್ಲಿ ಮುಹೂರ್ತಶಬ್ದವು ಕಾಲವನ್ನು ಮಾತ್ರ ಹೇಳುತ್ತದೆಯೇ ಹೊರತು ಪಾರಿಭಾಷಿಕವಾದ ಮುಹೂರ್ತವಾಚಕವಾಗಿರುವುದಿಲ್ಲ. (ಈ ಪಕ್ಷವು ವಿಶೇಷವಾಗಿ ವೇದಾಭ್ಯಾಸವೇ ಮೊದಲಾದ ದೀರ್ಘಕಾಲಸಾಧ್ಯವಾದ ಪ್ರಾತಃಕೃತ್ಯಗಳನ್ನು ಮಾಡುವವರಿಗೆ ಹೇಳಿದ್ದಾಗಿದೆ). ರಾತ್ರಿಯು ಸಾಮಾನ್ಯವಾಗಿ ಹನ್ನೆರಡು ಗಂಟೆಗಳ ಕಾಲದ್ದಾಗಿದ್ದು ಅದರ ಉತ್ತರಾರ್ಧವೆಂದರೆ ಆರು ಗಂಟೆಗಳು. ಈ ಪಕ್ಷದಲ್ಲಿ ಸೂರ್ಯೋದಯಕ್ಕಿಂತ ಮೊದಲು ಆರು ಗಂಟೆಗಳ ಕಾಲವು ಬ್ರಾಹ್ಮಮುಹೂರ್ತವು. 

( ಇವುಗಳ ಜೊತೆಗೆ ಮತ್ತೊಂದು ರೀತಿಯ ವಿಭಾಗವೂ ಇದೆ. “ಷೋಢಾ ವಿಭಜ್ಯ ರಜನೀಂ ಚರಮಾಂಶೇ ಪ್ರಬೋಧಿತಃ” ಈ ವಾಕ್ಯದಂತೆ ರಾತ್ರಿಮಾನವನ್ನು ಆರು ಭಾಗಗಳಾಗಿ ವಿಭಾಗಿಸಿ ಕೊನೆಯ ಭಾಗದಲ್ಲಿ ಪ್ರಬೋಧವನ್ನು ಹೇಳಿದ್ದಾರೆ. ಅಂದರೆ ಸೂರ್ಯೋದಯಕ್ಕಿಂತ ಎರಡು ಘಂಟೆಯ (ತಾಸು) ಮೊದಲು ಏಳಬೇಕು. ಈ ಪಕ್ಷವು ಸ್ಮೃತಿಮುಕ್ತಾಫಲದಲ್ಲಿ ಸ್ಮೃತ್ಯಂತರವಚನವನ್ನು ಆಧರಿಸಿ ಹೇಳಲ್ಪಟ್ಟಿದೆ. ನಿರ್ದಿಷ್ಟಸ್ಮೃತಿನಿರ್ದೇಶನವಿಲ್ಲ.)  ಹೀಗೆ ಪ್ರಧಾನವಾದ ಮೂರು ಪಕ್ಷಗಳಿದ್ದರೂ ಮೂರನೆಯ ಪಕ್ಷವು (ರಾತ್ರಿಯ ಉತ್ತರಾರ್ಧವು) ವೇದಾಭ್ಯಾಸಿಗಳಿಗೆ ಹೇಳಿದ ಬ್ರಾಹ್ಮಮುಹೂರ್ತವಾದ್ದರಿಂದ ಮೊದಲಿನ ಎರಡು ಪಕ್ಷಗಳು ಹೇಳಿದ ಬ್ರಾಹ್ಮಮುಹೂರ್ತವು ಸಾಮಾನ್ಯರ ವಿಷಯದಲ್ಲಿ ಉತ್ಥಾನಕ್ಕೆ ಹೇಳಿದ ಕಾಲವಾಗಿದೆ. ಅಂದರೆ ಸೂರ್ಯೋದಯಕ್ಕಿಂತ ಮುಂಚೆ ಒಂದೂವರೆ ಘಂಟೆಯ ಮೊದಲಿನ ಬ್ರಾಹ್ಮಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮೇ ಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ ಎಂಬುದಾಗಿ ಬ್ರಾಹ್ಮಮುಹೂರ್ತದಲ್ಲಿ ನಿದ್ರೆಯ ನಿಂದೆಯಿರುವುದರಿಂದ ಬ್ರಾಹ್ಮಮುಹೂರ್ತವು ಪ್ರಾರಂಭವಾಗುವ ಕಾಲದಲ್ಲಿಯೇ ಏಳಬೇಕು.  

ಬ್ರಾಹ್ಮಮುಹೂರ್ತದಲ್ಲಿ ದೇವತೆಗಳು ಹಾಗೂ ಪಿತೃಗಳ ಸಾನ್ನಿಧ್ಯವು ಇರುತ್ತದೆ. ಆ ಸಮಯದಲ್ಲಿ ಏಳುವುದು ಪಿತೃಗಳನ್ನು ಗೌರವಿಸಿದಂತೆ. (ಬ್ರಾಹ್ಮೇ ಮುಹೂರ್ತೇ ದೇವಾನಾಂ ಪಿತೄಣಾಂ ಚ ಸಮಾಗಮಃ| ಜಾಗರಸ್ತತ್ರ ಕರ್ತವ್ಯಃ ಪಿತೃಸಂಮಾನನಂ ಹಿ ತತ್||)

 ಆ ಸಮಯದಲ್ಲಿ ಚಿತ್ತವು ಶಾಂತವಾಗಿರುವ ಕಾರಣ ತತ್ತ್ವಾವಬೋಧಕ್ಕೆ ಯೋಗ್ಯವಾಗಿರುತ್ತದೆ. “ಬೇಗ ಮಲಗು ಬೇಗ ಏಳು” ಎಂಬ ಹಿಂದಿನವರ ಮಾತೂ ಕೂಡ ಈ ಉದ್ದೇಶದಿಂದಲೇ ಹೇಳಿದ್ದು. ಬ್ರಾಹ್ಮ ಮುಹೂರ್ತದಲ್ಲಿ ಏಳುವುದರಿಂದ ಶುದ್ಧ ವಾತಾವರಣದ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. 

ಬ್ರಾಹ್ಮಮುಹೂರ್ತದಲ್ಲಿ ಮಲಗಿರುವುದು ಶಾಸ್ತ್ರರೀತ್ಯಾ ದೋಷ. *”ಬ್ರಾಹ್ಮೇ ಮುಹೂರ್ತೇ ಸೇವೇತಾಂ ಶಯನಂ ಯತ್ರ ದಂಪತೀ| ಶ್ಮಶಾನತುಲ್ಯಂ ತದ್ವೇಶ್ಮ ಪಿತೃಭಿಃ ಪರಿವರ್ಜ್ಯತೇ||”* *”ಬ್ರಾಹ್ಮೇ ಮುಹೂರ್ತೇ ಯಾ ನಿದ್ರಾ ಸಾ ಪುಣ್ಯಕ್ಷಯಕಾರಿಣೀ| ತಾಂ ಕರೋತಿ ತು ಯೋ ಮೋಹಾತ್ ಪಾದಕೃಚ್ಛ್ರೇಣ ಶುದ್ಧ್ಯತಿ||”* *”ನಿದ್ರಾಂ ಚ ಕುರುತೇ ಸರ್ವದಾ ತು ಯಃ| ಅಶುಚಿಂ ತಂ ವಿಜಾನೀಯಾತ್ ಅನರ್ಹಃ ಸರ್ವಕರ್ಮಸು||”* ಎಂಬುದಾಗಿ ಬ್ರಾಹ್ಮಮುಹೂರ್ತದ ನಿದ್ರೆಯನ್ನು ನಿಂದಿಸಿದ್ದಾರೆ. ಬ್ರಾಹ್ಮಮುಹೂರ್ತದಲ್ಲಿ ಮಾಡುವ ನಿದ್ರೆಯಿಂದ ಮನೆಯು ಶ್ಮಶಾನಸದೃಶವಾಗಿ ಪಿತೃಗಳಿಗೆ ವರ್ಜ್ಯವಾಗುತ್ತದೆ. ಪುಣ್ಯಕ್ಷಯವಾಗಿ ಪಾಪವು ಉಂಟಾಗುತ್ತದೆ. ಪ್ರಾತಃಕಾಲದಲ್ಲಿ ಯಾವಾಗಲೂ ನಿದ್ರಿಸುತ್ತಿರುವವನು ಸದಾ ಅಶುಚಿಯು ಆಗಿರುವುದರಿಂದ ಕರ್ಮಗಳನ್ನು ಮಾಡಲು ಆತನಿಗೆ ಅರ್ಹತೆಯಿರುವುದಿಲ್ಲ. ಆದ್ದರಿಂದ ಈ ಎಲ್ಲ ದೋಷಗಳು ಬಾರದಿರಲು ಬ್ರಾಹ್ಮಮುಹೂರ್ತದಲ್ಲಿಯೇ ಏಳಬೇಕು.

ಲೇಖನ – ಶ್ರೀ ಗೋಪಾಲಕೃಷ್ಣ ಕವಡೀಕೆರೆ 

ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ.