*ಪೂರ್ವಚಿಂತನ*
ಮನುಷ್ಯನಿಗೆ ವೇದಶಾಸ್ತ್ರಗಳು ಪ್ರವೃತ್ತಿಮಾರ್ಗ ಹಾಗೂ ನಿವೃತ್ತಿಮಾರ್ಗವೆಂಬುದಾಗಿ ಎರಡು ಮಾರ್ಗಗಳನ್ನು ಉಪದೇಶಿಸಿವೆ. ಪ್ರವೃತ್ತಿಮಾರ್ಗದಿಂದ ಧರ್ಮಾರ್ಥಕಾಮಗಳನ್ನು ಹಾಗೂ ನಿವೃತ್ತಿಮಾರ್ಗದಿಂದ ಮೋಕ್ಷವನ್ನೂ ಸಾಧಿಸಬೇಕಾದದ್ದು ಮನುಷ್ಯರೆಲ್ಲರ ಕರ್ತವ್ಯವಾಗಿದೆ. ಈ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಹಾಗೂ ಅವುಗಳ ಸಾಧನೋಪಾಯವನ್ನೂ ವೇದ–ಶಾಸ್ತ್ರಗಳು ಉಪದೇಶಿಸಿವೆ. ಆ ಉಪಾಯವೇ ಕರ್ಮಾಚರಣೆ ಹಾಗೂ ಜ್ಞಾನಸಂಪಾದನೆ. ಕರ್ಮಾಚರಣೆಯಿಂದ ಧರ್ಮಾರ್ಥಕಾಮಗಳು ಹಾಗೂ ಜ್ಞಾನದಿಂದ ಮೋಕ್ಷವೂ ಸಿದ್ಧಿಸುವವು.
ಕರ್ಮಾಚರಣೆಯು ಎಲ್ಲರಿಗೂ ಸಾರ್ವತ್ರಿಕವಾಗಿ ಒಂದೇ ರೀತಿಯಲ್ಲಿ ಹೇಳಲ್ಪಟ್ಟಿಲ್ಲ. ಆಶ್ರಮ, ವರ್ಣ, ದೇಶ, ಕಾಲ ಮುಂತಾದ ಭೇದಗಳಿಂದ ಕರ್ಮಾಚರಣೆಯೂ ಭಿನ್ನವಾಗಿದೆ. ಹಾಗೆಯೇ ನಿತ್ಯ ನೈಮಿತ್ತಿಕ, ಕಾಮ್ಯ ಎಂಬುದಾಗಿಯೂ ಕರ್ಮಗಳನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಈ ಮೂರೂ ವಿಧದ ಕರ್ಮಗಳನ್ನು ಸರಿಯಾದ ಕ್ರಮದಂತೆ ಅನುಷ್ಠಾನ ಮಾಡಲು ಶಾಸ್ತ್ರದ ಜ್ಞಾನವು ಹಾಗೂ ಶಿಷ್ಟಾಚಾರದ ಪರಿಕಲ್ಪನೆಯು ಅವಶ್ಯವಾಗಿ ಬೇಕು. ಕರ್ಮದ ಸ್ವರೂಪ, ಮಹತ್ವ, ವಿಧಿ, ನಿಷೇಧ ಮುಂತಾದವುಗಳನ್ನು ಸರಿಯಾಗಿ ತಿಳಿದು ಅನುಷ್ಠಾನವನ್ನು ಮಾಡಿದರೆ ಆ ಕರ್ಮಾನುಷ್ಠಾನದಿಂದ ಸಿಗುವ ಫಲವೂ ಅಧಿಕವಾದದ್ದಾದ್ದರಿಂದ ಶಾಸ್ತ್ರದ ತಿಳಿವಳಿಕೆ ಹಾಗೂ ಲೋಕಾಚಾರದ ಕಲ್ಪನೆಗಳನ್ನು ತಿಳಿಸಲು *”ಧರ್ಮಶಾಸ್ತ್ರ-ಆಚಾರಚಿಂತನ”* ಎಂಬ ಹೆಸರಿನಿಂದ ಈ ಉಪಕ್ರಮ.
ಪ್ರತಿ ತೃತೀಯಾ (ತದಿಗೆ ) ಯ ದಿನದಂದು ಹದಿನೈದೈ ದಿನಕ್ಕೆ ಒಂದೊಂದು ವಿಷಯದ ಕುರಿತಾಗಿ ಲೇಖನಗಳಿರುತ್ತವೆ.
* ಲೇಖನದ ಶಬ್ದವೈಶಾಲ್ಯವು ವಿಷಯವನ್ನು ಅವಲಂಬಿಸಿರುತ್ತದೆ.
* ಈ ಸರಣಿಯಲ್ಲಿ ಮೊದಲಿಗೆ ಆಹ್ನಿಕಕರ್ಮಗಳ ಕುರಿತಾಗಿ ಲೇಖನಗಳಿರುತ್ತವೆ.
* ಲೇಖನದ ಪರಿಮಿತಿಗೊಳಪಟ್ಟು ವಿಷಯಸಂಕೋಚವನ್ನು ಮಾಡುವಾಗ ಕೆಲವು ವಿಷಯಗಳು ಅನಿವಾರ್ಯವಾಗಿ ಬಿಟ್ಟುಹೋಗಬಹುದಾಗಿದ್ದು, ಇಲ್ಲಿ ಹೇಳಿದ ವಿಚಾರಗಳ ಹೊರತಾದ ವಿಚಾರಗಳೂ ಇದ್ದೇ ಇರುವ ಕಾರಣ ವಿಶೇಷಜಿಜ್ಞಾಸುಗಳು ಮೂಲಗ್ರಂಥಗಳ ಸಮಗ್ರ ಅವಲೋಕನವನ್ನು ಮಾಡುವುದು ಒಳಿತು.
* ಶಾಸ್ತ್ರನಿರ್ಣಯದಲ್ಲಿ ವೇದಗಳು, ವೇದಾಂಗಗಳು, ಸ್ಮೃತಿಗಳು, ಧರ್ಮಶಾಸ್ತ್ರನಿಬಂಧಗ್ರಂಥಗಳು, ಕಾರಿಕೆಗಳು, ಶಿಷ್ಟಾಚಾರಗಳು ಉಪಕಾರಕಗಳಾಗಿವೆ.
* ಈ ಲೇಖನಸರಣಿಯಲ್ಲಿ ಲೇಖಕರ ಪ್ರಮಾದದಿಂದಾಗಬಹುದಾದ ತಪ್ಪಾದ ನಿರ್ಣಯಗಳು ಹೇಳಲ್ಪಟ್ಟರೆ ಸೂಚನೆಗನುಸಾರ ಪುನಃ ಪರಿಶೀಲಿಸಲಾಗುವುದು.
*ಆಹ್ನಿಕಕರ್ಮಗಳು*
ಆಹ್ನಿಕಕರ್ಮಗಳೆಂದರೆ ದೈನಂದಿನವಾಗಿ ನಡೆಸುವ ಮಾಡಲೇಬೇಕಾದ ಕರ್ಮಗಳು. ದಿನವೆಂದರೆ ಹಗಲು ಮತ್ತು ರಾತ್ರಿಗಳಿಂದ ಕೂಡಿದ ಕಾಲ. ದಿನವನ್ನು ಕಾಲಾನುಗುಣವಾಗಿ ವಿಭಾಗಿಸಿ ಆಯಾಯ ಕಾಲಗಳಲ್ಲಿ ಮಾಡಬೇಕಾದ ಕರ್ಮಗಳನ್ನು ಹೇಳಿದ್ದಾರೆ. ಬ್ರಾಹ್ಮಮುಹೂರ್ತದಲ್ಲಿ ಉತ್ಥಾನದಿಂದ ಪ್ರಾರಂಭಿಸಿ ರಾತ್ರಿಯ ಶಯನದವರೆಗಿನ ಎಲ್ಲ ಕರ್ಮಗಳೂ ಆಹ್ನಿಕಕರ್ಮಗಳೆಂದು ಕರೆಯಲ್ಪಡುತ್ತವೆ. *”ಉದಯಾಸ್ತಮಯಂ ಯಾವತ್ ನ ವಿಪ್ರಃ ಕ್ಷಣಿಕೋ ಭವೇತ್“* ಎನ್ನುವುದು ದಕ್ಷವಚನ. ಕ್ಷಣಿಕವೆಂದರೆ ನಿರ್ವ್ಯಾಪಾರಸ್ಥಿತಿ. ಕ್ರಿಯಾಶೂನ್ಯತೆ ಎಂದರ್ಥ. ಬೆಳಗಿನಿಂದ ರಾತ್ರಿಯವರೆಗೆ ಕ್ರಿಯಾಶೂನ್ಯನಾಗಿರದೆ ಶಾಸ್ತ್ರವಿಹಿತಕರ್ಮಗಳನ್ನು ಆಚರಿಸಬೇಕೆಂದು ತಾತ್ಪರ್ಯ.
ಉತ್ಥಾನ, ಶೌಚ, ದಂತಧಾವನ, ಸ್ನಾನ, ವಸ್ತ್ರಧಾರಣ, ಭಸ್ಮಲೇಪನ, ಸಂಧ್ಯಾವಂದನ, ಪ್ರಾತರ್ಹೋಮ, ಅಧ್ಯಯನ, ಮಧ್ಯಾಹ್ನಸ್ನಾನ, ಮಾಧ್ಯಾಹ್ನಿಕಜಪಾದಿಗಳು, ಬ್ರಹ್ಮಯಜ್ಞ, ತರ್ಪಣ, ದೇವಪೂಜಾ, ವೈಶ್ವದೇವ-ಬಲಿಹರಣ, ಅತಿಥಿಸತ್ಕಾರ, ಭೋಜನ, ಸಾಯಂಸಂಧ್ಯಾ, ಸಾಯಂಕಾಲೀನ ಹೋಮ, ಶಯನ….. ಮುಂತಾದವು ಆಹ್ನಿಕಕರ್ಮಗಳು. ಧರ್ಮಶಾಸ್ತ್ರಕಾರರು ಇನ್ನೂ ಅನೇಕ ಕರ್ಮಗಳನ್ನೂ ಹೇಳಿದ್ದಿದೆ. ಅವುಗಳಲ್ಲಿ ಉತ್ಥಾನದಿಂದ ಪ್ರಾರಂಭಿಸಿ ಒಂದೊಂದೇ ಕರ್ಮದ ವಿಚಾರಗಳನ್ನು ತಿಳಿಯೋಣ.
ಮುಂದುವರಿಯುವುದು.
ಲೇಖನ – ಶ್ರೀಗೋಪಾಲಕೃಷ್ಣಕವಡೀಕೆರೆ.
ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ