ಮನುಷ್ಯನಿಗೂ ಪ್ರಾಣಿಗಳಿಗೂ ಏನು ಅಂತರ ? ಈ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಒಂದು ಪ್ರಮುಖವಾದ ಉತ್ತರ- ಧರ್ಮ. ಮನುಷ್ಯನಿಗೆ ಇರುವ ಧರ್ಮವೇ ಅವನನ್ನು ಇತರ ಪ್ರಾಣಿಗಳಿಗಿಂತ ಬೇರೆಯಾಗಿಡುತ್ತದೆ. “ಆಹಾರನಿದ್ರಾಭಯಮೈಥುನಾನಿ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ | ಧರ್ಮೋಹಿ ತೇಷಾಂ ಅಧಿಕೋ ವಿಶೇಷಃ ಧರ್ಮೇಣ ಯೇನಃ ಪಶುಭಿಃ ಸಮಾನಃ ||” ಈ ಶ್ಲೋಕವು ಧರ್ಮದ ಮೂಲಕವೇ ಮನುಷ್ಯನ ಮನುಷ್ಯತ್ವ ಪಶುತ್ವಕ್ಕಿಂತ ಬೇರೆಯಾಗಿರುತ್ತದೆ ಎಂಬುದನ್ನು ಹೇಳುತ್ತಿದೆ.
ಈ ಶ್ಲೋಕದಲ್ಲಿ ಹೇಳಿರುವ ನಾಲ್ಕು ಅಂಶಗಳನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳೋಣ.
೧) ಆಹಾರ : ಪ್ರಾಣಿಗಳು ಹಸಿವೆಯನ್ನು ನೀಗಿಸಿಕೊಳ್ಳಲು ಆಹಾರವನ್ನು ಹುಡುಕಿಕೊಂಡು ತಿನ್ನುತ್ತವೆ. ನಾಲಿಗೆಯ ರುಚಿಯ ಕಾರಣದಿಂದ ಆಹಾರ ತಿನ್ನುವುದು ಉಂಟು. ಮನುಷ್ಯನಿಗೂ ಇವೆರಡೂ ಉಂಟು. ಆದರೆ ಮನುಷ್ಯನು ತಾನು ಸ್ವೀಕರಿಸಿದ ಆಹಾರದಿಂದ ಪರಮಾತ್ಮನಿಗೆ ತೃಪ್ತಿಯಾಗಲಿ ಎಂಬ ಭಾವದೊಂದಿಗೆ ಆಹಾರ ಸ್ವೀಕರಿಸಬಲ್ಲ. ಊಟವನ್ನು ಯಜ್ಞದೃಷ್ಟಿಯಿಂದ ಮಾಡಬಲ್ಲ. ಈ ದೃಷ್ಟಿ ಭೇದವೇ ಆಹಾರ ಸ್ವೀಕರಿಸುವಿಕೆಯಲ್ಲಿ ಮಹದಂತರವನ್ನು ಉಂಟುಮಾಡುತ್ತದೆ.
೨) ನಿದ್ರೆ : ಆಯಾಸಗೊಂಡಾಗ ಉಳಿದ ಪ್ರಾಣಿಗಳಂತೆ ಮನುಷ್ಯನು ನಿದ್ರೆ ಮಾಡುತ್ತಾನೆ. ಗಾಢವಾದ ನಿದ್ರೆಯಲ್ಲಿ ತಾನೊಬ್ಬ ಮನುಷ್ಯ ಎಂಬುದುಕೂಡಾ ಮರೆತು ಹೋಗುತ್ತದೆ. ಇದು ಉಳಿದ ಪ್ರಾಣಿಗಳಲ್ಲಿಯೂ ಇದೇ ರೀತಿ ಇರುತ್ತದೆ. ಆದರೆ ನಿದ್ರೆಗೆ ಹೋಗುವುದಕ್ಕಿಂತ ಮೊದಲು ದೇವರ ಚಿಂತನೆ ಮಾಡಲು ಉಳಿದ ಪ್ರಾಣಿಗಳಿಗೆ ಸಾಧ್ಯವಾಗುವುದಿಲ್ಲ. ಮನುಷ್ಯನು ಶ್ರದ್ಧಾ-ಭಕ್ತಿ ಪೂರ್ವಕವಾಗಿ ದೇವರನ್ನು ಧ್ಯಾನಿಸುವ ಮೂಲಕ ನಿದ್ರೆಯನ್ನು ಸಾತ್ವಿಕ ನಿದ್ರೆಯನ್ನಾಗಿ ಗುರುತಿಸಿಕೊಳ್ಳಬಲ್ಲ. ‘ಆಹಾ ! ಎಂಥಾ ಸುಖಮಯ ನಿದ್ರೆ, ಮಲಗಿದ್ದು ಗೊತ್ತು, ಎದ್ದಿದ್ದು ಗೊತ್ತು ಮತ್ತೇನೂ ಗೊತ್ತಿಲ್ಲ’ ಎಂಬುದಾಗಿ ಮೆಲಕು ಹಾಕುವ ನಿದ್ರೆಯೇ ಸಾತ್ವಿಕ ನಿದ್ರೆ.
೩) ಭಯ : ತಮಗೆ ಅಪಾಯವನ್ನು ಉಂಟುಮಾಡುವ ವ್ಯಕ್ತಿ ಅಥವಾ ವಸ್ತು ಎದುರಿಗೆ ಬಂದಾಗ ಎಲ್ಲ ಪ್ರಾಣಿಗಳು ಭಯಪಡುತ್ತವೆ, ಮನುಷ್ಯನೂ ಹಾಗೆಯೇ ಭಯ ಪಡುತ್ತಾನೆ. ಆದರೆ ತನ್ನಿಂದ ಆದ ಅಧರ್ಮಗಳನ್ನು ನೆನಪಿಸಿಕೊಂಡು ಭಯಪಡಲು ಉಳಿದ ಪ್ರಾಣಿಗಳಿಗೆ ಗೊತ್ತಾಗುವುದಿಲ್ಲ.ಅಧರ್ಮದಿಂದ ತಕ್ಷಣಕ್ಕೆ ಯಾವುದೇ ಭಯವಿಲ್ಲದಿರಬಹುದು ಆದರೆ ಮುಂದೆ ದೀರ್ಘಕಾಲದ ನಂತರ ಮಹದುಃಖವಾಗಿ ಅದು ಪರಿಣಮಿಸುತ್ತದೆ.ಉದಾಹರಣೆಗೆ – ಹಿಂಸೆ, ಯಾವ ಪ್ರಾಣಿಯನ್ನು ಈಗ ತಾನು ಹಿಂಸಿಸುತ್ತಿದ್ದೇನೆಯೋ ಮುಂದೆ ಅದೇ ಪ್ರಾಣಿಯಿಂದಲೇ ತನಗೆ ಪ್ರತಿಯಾಗಿ ಹಿಂಸೆಯಾಗಲಿಕ್ಕಿದೆ.ಇದನ್ನು ಚೆನ್ನಾಗಿ ಅರಿತುಕೊಂಡರೆ ಈಗ ತನ್ನಿಂದ ಆಗುತ್ತಿರುವ ಹಿಂಸೆಯ ಬಗ್ಗೆ ಭಯ ಉಂಟಾಗುತ್ತದೆ. ಅಸತ್ಯ ವಚನದಿಂದಲೂ ಇದೇ ರೀತಿ ದುಷ್ಪರಿಣಾಮ ಉಂಟಾಗುತ್ತದೆ.ಅದನ್ನು ಅರ್ಥಮಾಡಿಕೊಂಡವನಿಗೆ ಈಗಲೇ ಭಯವಾಗುತ್ತದೆ. ಹೀಗೆ ಭಯವನ್ನು ಧರ್ಮಮಾರ್ಗಕ್ಕೆ ಅನುಸಾರವಾಗಿ ಪರಿವರ್ತಿಸಿಕೊಳ್ಳಬಲ್ಲ ಸಾಮರ್ಥ್ಯ ಮನುಷ್ಯನಿಗೆ ಇದೆ,ಉಳಿದ ಪ್ರಾಣಿಗಳಿಗೆ ಇಲ್ಲ.
೪) ಮೈಥುನ : ಎಲ್ಲ ಪ್ರಾಣಿಗಳು ಸಂತಾನೋತ್ಪತ್ತಿಯನ್ನು ಮಾಡುತ್ತವೆ.ಆದರೆ ಮನುಷ್ಯನು ಸಂತಾನವನ್ನು ಉತ್ಪಾದಿಸುವಲ್ಲಿ ಧರ್ಮವಿರುತ್ತದೆ, ಇರಬೇಕಾಗುತ್ತದೆ.ಕಾಲ,ದೇಶ,ವ್ಯಕ್ತಿ ಮುಂತಾದವುಗಳನ್ನು ಚಿಂತನೆಯಲ್ಲಿಟ್ಟುಕೊಂಡು ಸಂತಾನೋತ್ಪತ್ತಿಯನ್ನು ಮಾಡುವ ವಿವೇಚನೆ ಮನುಷ್ಯನಿಗೆ ಇರುತ್ತದೆ. “ ಧರ್ಮವಿರುದ್ಧೊ ಭೂತೇಷು ಕಾಮೋಸ್ಮಿ” ಎಂಬ ಗೀತಾವಚನವನ್ನು ಇಲ್ಲಿ ನೆನಪಿಸಿಕೊಳ್ಳಬೇಕು.ಯಾರು ಯಾರಲ್ಲಿ ಸಂತಾನೋತ್ಪತ್ತಿ ಮಾಡಬೇಕೊ, ಯಾರಲ್ಲಿ ಮಾಡಬಾರದೊ ಎಂಬ ಬಗ್ಗೆ ದೊಡ್ಡ ವಿಜ್ಞಾನವೇ ಇದೆ. (ಧರ್ಮಪ್ರಜಾ ಉತ್ಪತ್ತಿಯ ಹೊರತಾಗಿ ಬೇರೆ ಯಾವುದೇ ಉದ್ದೇಶದಿಂದ ಶಾರೀರಿಕ ಸಂಪರ್ಕವನ್ನು ಮಾಡಬಾರದು.) ಮನುಷ್ಯನು ಮಾತ್ರವೇ ಇದನ್ನು ಅರಿತುಕೊಂಡು ಅನುಸರಿಸಬಲ್ಲ. ಹೀಗೆ ಪ್ರಾಣಿ ಸಹಜವಾದ ನಡೆಗಳಲ್ಲಿಯೂ ಧರ್ಮವನ್ನು ತಂದು ಅದರಂತೆಯೇ ನಡೆದುಕೊಳ್ಳುವಿಕೆ ಮನುಷ್ಯನ ಮನುಷ್ಯತ್ವ.