ಚಿತ್ತ ಸ್ವಾಸ್ಥ್ಯ

posted in: Gurubodhe | 0

ಚಿತ್ತದ ಸ್ವಾಸ್ಥ್ಯವನ್ನು ಪಡೆಯಲು ಅನೇಕ ಉಪಾಯಗಳಿವೆ. ಅಸ್ವಾಸ್ಥ್ಯಕ್ಕೆ ಕಾರಣಗಳೇನಿವೆಯೋ ಅವನ್ನು ತೆಗೆದುಹಾಕಿಬಿಟ್ಟರೆ ಸಹಜವಾಗಿಯೇ ಸ್ವಾಸ್ಥ್ಯ ಬಂದುಬಿಡುತ್ತದೆ. ಸ್ವಾಸ್ಥ್ಯ ಶಬ್ದದ ಅರ್ಥವೇ ಹಾಗೆ, ನಿಜಸ್ಥಿತಿಯಲ್ಲಿ ಇರುವುದು ಎಂದು. ಚಿತ್ತದ ಅಸ್ವಾಸ್ಥ್ಯಕ್ಕೆ ಒಂದು ಪ್ರಮುಖ ಕಾರಣ ದ್ವಂದ್ವ.

ದ್ವಂದ್ವಗಳೆಂದರೆ ಸುಖ-ದುಃಖ, ಶೀತೋಷ್ಣ, ರಾಗ-ದ್ವೇಷ ಮುಂತಾದ ಎರಡೆರಡರ ಗುಂಪು. ಇವು ಮನಸ್ಸಿನೊಳಗೆ ಗೊಂದಲವನ್ನು, ಅಸ್ವಾಸ್ಥ್ಯವನ್ನು ಉಂಟುಮಾಡುತ್ತವೆ. ಅನೇಕರು ಯಾವಾಗಲೂ ಈ ಗೊಂದಲದಲ್ಲಿಯೇ ಇರುತ್ತಾರೆ. ಬಹುಶಃ ಅವರಿಗೆ ಸ್ವಾಸ್ಥ್ಯದ ಪರಿಚಯವೇ ಇರುವುದಿಲ್ಲ. ಗಾಢವಾದ ನಿದ್ರೆಯ ಹೊರತಾಗಿ, ಎಚ್ಚರದಲ್ಲಿರುವಾಗ ಅವರಿಗೆ ಸ್ವಾಸ್ಥ್ಯದ ಗಂಧವೇ ಇರುವುದಿಲ್ಲ. ಸುಖ ದುಃಖ, ಶೀತೋಷ್ಣಗಳಿಗಿಂತಲೂ ರಾಗದ್ವೇಷಗಳು ನಮ್ಮನ್ನು ಹೆಚ್ಚು ಗೊಂದಲಕ್ಕೆ ಸಿಲುಕಿಸುತ್ತವೆ. ಒಂದು ಗಾದೆ ಮಾತಿದೆ. ಎತ್ತು ಏರಿಗೆ ಎಳೆಯಿತು; ಕೋಣ ನೀರಿಗೆ ಎಳೆಯಿತು ಎಂದು. ಒಬ್ಬ ರೈತ ಹೊಲಕ್ಕೆ ಉಳುಮೆ ಮಾಡಲು ಹೊರಟಿದ್ದ. ಎತ್ತು ಮತ್ತು ಕೋಣದ ಜೊತೆಗೆ ನೇಗಿಲನ್ನು ಕಟ್ಟಿಕೊಂಡು ಹೊರಟಿದ್ದ. ದಾರಿಯಲ್ಲಿ ಒಂದು ಕಡೆ ಚೆನ್ನಾಗಿ ಮೇವಿರುವ ಬೆಟ್ಟ ಕಂಡಿತು. ಇನ್ನೊಂದು ಕಡೆ ಕೆಸರಿನಿಂದ ಕೂಡಿದ ಕೆರೆ ಕಂಡಿತು. ಕೋಣನಿಗೆ ಕೆಸರೆಂದರೆ ತುಂಬಾ ಪ್ರೀತಿ, ಮೇವಿನ ಬಗ್ಗೆ ಅಷ್ಟಿಲ್ಲ. ಎತ್ತಿಗೆ ಮೇವಿನ ಮೇಲೆ ಆಸೆ, ಕೆಸರಿನ ಬಗ್ಗೆ ಇಲ್ಲ. ಆ ಎತ್ತು ಮತ್ತು ಕೋಣ ಒಂದೊಂದೂ ಒಂದೊಂದು ಕಡೆ ಎಳೆಯಲಾರಂಭಿಸಿದವು. ಆ ರೈತ ಹೊಲವನ್ನು ತಲುಪುವುದು ಸಾಧ್ಯವೇ? ಹೊಲ ಉಳಲು ಸಾಧ್ಯವೇ? ಹಾಗೆಯೇ ನಮ್ಮ ಮನಸ್ಸಿನಲ್ಲಿ ಅನೇಕ ಬೇಕು-ಬೇಡಗಳು ಇರುತ್ತವೆ. ಅವನ್ನು ರಾಗದ್ವೇಷಗಳೆನ್ನುವರು. ಒಂದಷ್ಟು ವಿಷಯಗಳ ಬಗ್ಗೆ ಬೇಕುಬೇಕೆಂಬ ಆಸೆ, ಒಂದಷ್ಟು ವಿಷಯಗಳ ಬಗ್ಗೆ ಬೇಡವೆಂಬ ದ್ವೇಷ, ಕೆಲವರ ಬಗ್ಗೆ ಪ್ರೀತಿ, ಕೆಲವರ ಬಗ್ಗೆ ದ್ವೇಷ. ಇವುಗಳಿದ್ದರೆ ಮನಸ್ಸು ಸದಾ ಆಚೆ ಈಚೆ ತಾಕಲಾಟದಲ್ಲಿಯೇ ಬಿದ್ದಿರುತ್ತದೆ. ಈ ರೀತಿಯ ಮನಸ್ಸಿರುವವನಿಂದ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ. ಆದ್ದರಿಂದ ದ್ವಂದ್ವಗಳನ್ನು ಗೆದ್ದರೆ ಅಥವಾ ಅವು ನಮ್ಮ ಮನಸ್ಸಿನಲ್ಲಿ ಹುಟ್ಟದಂತೆ ಎಚ್ಚರಿಕೆ ವಹಿಸಿದರೆ, ಆತ ತುಂಬಾ ಕೌಶಲದಿಂದ ಸಾಧನೆಗಳನ್ನು ಮಾಡಬಲ್ಲ. ಭಗವಂತ ಹೇಳಿದ್ದಾನೆ- “ನಿರ್ದ್ವಂದ್ವೋಹಿ ಮಹಾ ಬಾಹೋ ಸುಖಂ ಬಂಧಾತ್ ಪ್ರಮುಚ್ಯತೆ”. ಯಾವಾತನ ಮನಸ್ಸು ದ್ವಂದ್ವಗಳಿಗೆ ಸಿಲುಕಿಕೊಳ್ಳುವುದಿಲ್ಲವೋ ಅಂಥವನು ಬಹಳ ಸುಲಭವಾಗಿ ಗುರಿಸಾಧನೆ ಮಾಡುತ್ತಾನೆ.

ದ್ವಂದ್ವಗಳಿಗೆ ಸಿಲುಕಿಕೊಂಡು ಅನಂತರ ಅವುಗಳಿಂದ ತಪ್ಪಿಸಿಕೊಳ್ಳುವುದು ಬೇರೆ, ಅವುಗಳಿಗೆ ಸಿಲುಕದೇ ಇರುವಂತೆ ಇರುವುದು ಬೇರೆ. ದ್ವಂದ್ವಗಳಿಗೆ ಸಿಲುಕಿಕೊಂಡ ನಂತರ ಅದರಿಂದ ಪಾರಾಗುವುದು ತುಂಬ ಪ್ರಯಾಸವೇ ಸರಿ. ಸಾಧ್ಯವಿಲ್ಲವೆಂದೇನೂ ಅರ್ಥವಲ್ಲ. ಆದರೆ ದ್ವಂದ್ವಗಳು ಹುಟ್ಟದೇ ಇರುವಂತೆ ಮಾಡಿಕೊಳ್ಳುವುದರಲ್ಲಿಯೇ ಬುದ್ಧಿವಂತಿಕೆ ಇದೆ. ಅಂದರೆ, ಪ್ರಪಂಚದ ಯಾವ ವ್ಯಕ್ತಿಗಳ ಅಥವಾ ವಸ್ತುಗಳ ಕುರಿತಾಗಿಯೂ ಅತಿಯಾದ ಪ್ರೀತಿಯನ್ನೋ, ದ್ವೇಷವನ್ನೋ ಇಟ್ಟುಕೊಳ್ಳದೇ ಇರುವಂಥ ಒಂದು ರೂಢಿ, ಚಿಕ್ಕ ವಯಸ್ಸಿನಿಂದಲೇ ಬರಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮನಸ್ಸು ಇಂತಹ ಶಿಕ್ಷಣಕ್ಕೆ ಒಗ್ಗುತ್ತದೆ, ಬಗ್ಗುತ್ತದೆ. ಪ್ರೌಢವಾದ ನಂತರ ಮನಸ್ಸು ಒಗ್ಗುವುದು ಸ್ವಲ್ಪ ಕಷ್ಟವೇ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ? ಆದ್ದರಿಂದ ಚಿಕ್ಕ ವಯಸ್ಸಿನಲ್ಲಿ ಬೇಕು, ಬೇಡಗಳ ಕಡೆ ಮನಸ್ಸು ಹರಿಯದೇ ನೇರ ಸಾಧನೆಗಳ ಕಡೆಗೆ ಮನಸ್ಸನ್ನು ಹರಿಸುವುದು ಬಹಳ ಮುಖ್ಯ. ಯಾವುದೇ ಸಾಧನೆ ಇರಲಿ, ಓದುವುದಿರಲಿ, ತಪಸ್ಸಿರಲಿ, ಕ್ರೀಡೆಯಿರಲಿ ರಾಗದ್ವೇಷಗಳಿಗೆ ಒಳಗಾಗದಂತೆ ಸಾಧನೆಯಲ್ಲೇ ಪೂರ್ಣ ನಿಷ್ಠೆ ಇಟ್ಟುಕೊಳ್ಳುವ ಮನಸ್ಥಿತಿ ಚಿಕ್ಕ ವಯಸ್ಸಿನಲ್ಲೇ ಬಂದರೆ, ಅವನಿಗೆ ಬೇಕು-ಬೇಡಗಳನ್ನು ಗೆಲ್ಲುವುದು ಸುಲಭ. ಅವನಿಗೆ ದ್ವಂದ್ವಗಳು ಬರುವುದೇ ಕಡಿಮೆ. ಅಂಥವನು ಮಾನಸಿಕ ಸ್ವಾಸ್ಥ್ಯವನ್ನು ಹೊಂದುತ್ತಾನೆ. ಆರೋಗ್ಯವನ್ನು ಹೊಂದುತ್ತಾನೆ. ವಿಶಿಷ್ಟ ಸಾಧನೆಗಳನ್ನು ಕೂಡ ಮಾಡುತ್ತಾನೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ನಾರಾಯಣ ನಾರಾಯಣ ನಾರಾಯಣ