ಭಗವಂತನು 13ನೇ ಅಧ್ಯಾಯದಲ್ಲಿ ಜ್ಞಾನ ಸಾಧನಗಳ ಒಂದು ಪಟ್ಟಿಯನ್ನು ಕೊಟ್ಟಿದ್ದಾನೆ. ಅಮಾನಿತ್ವ(ತನ್ನ ಬಗ್ಗೆ ಅತಿಯಾದ ಗೌರವ ಭಾವನೆ ಇಲ್ಲದಿರುವಿಕೆ), ಅದಂಭಿತ್ವ(ಡಾಂಬಿಕತನ ಇಲ್ಲದಿರುವಿಕೆ), ಅಹಿಂಸೆ ಮುಂತಾದ ಪಟ್ಟಿಯಲ್ಲಿ “ವಿವಿಕ್ತ ದೇಶ ಸೇವಿತ್ವಂ ಅರತಿರ್ಜನ ಸಂಸದಿ” ಎಂಬ ಸಾಲು ಬರುತ್ತದೆ. ವಿವಿಕ್ತ ದೇಶ ಎಂದರೆ ಏಕಾಂತ ಸ್ಥಳ. ತಪಸ್ಸಿಗೆ, ಧರ್ಮಾಚರಣೆಗೆ ಅದು ಪ್ರಶಸ್ತವಾದ ಸ್ಥಳ. ಏಕಾಂತ ಸ್ಥಳದಲ್ಲಿ ಇರವಿಕೆ ಜ್ಞಾನಸಾಧನಗಳಲ್ಲಿ ಒಂದು. ಜನಸಮೂಹದಲ್ಲಿ ಆಸಕ್ತಿ ಇಲ್ಲದಿರುವಿಕೆಯನ್ನು ‘ಅರತಿರ್ಜನಸಂಸದಿ’ ಎಂಬಲ್ಲಿ ಹೇಳಿದ್ದಾನೆ. ಇದೂ ಕೂಡಾ ಒಂದು ಜ್ಞಾನಸಾಧನ. ಇವೆರಡೂ ಜ್ಞಾನಸಾಧನಗಳು ಒಂದೇ ಅಂಶದ ಎರಡು ಮುಖಗಳು. ಆದರೂ ಇವೆರಡರ ಬಗ್ಗೆಯೂ ಪ್ರಯತ್ನವಿರಲಿ ಎಂಬ ಕಾರಣಕ್ಕೋಸ್ಕರ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.
ಇವೆರಡು ಏಕಾಂತ ಸ್ಥಳದ ಬಗ್ಗೆ ಪ್ರೀತಿ ಮತ್ತು ಅಜ್ಞಾನಿ ಜನಗಳ ಸಮೂಹದ ಬಗ್ಗೆ ಪ್ರೀತಿಯಿಲ್ಲದಿರುವಿಕೆ-ಜ್ಞಾನಸಾಧನೆಗಳಂತೆಯೇ ಧರ್ಮಸಾಧನಗಳೂ ಆಗಿವೆ. ಅಂದರೆ ಏಕಾಂತ ಸ್ಥಳದಲ್ಲಿ ಕೂರುವುದು, ಅಜ್ಞಾನಿ ಜನಸಮೂಹದಿಂದ ದೂರ ಇರುವುದು, ಇವುಗಳಿಂದ ಪರಮಾತ್ಮ ಜ್ಞಾನಕ್ಕೇ ಅನುಕೂಲವಾಗುವಂತೆ, ಧರ್ಮಾಚಣೆಗೂ ಅನುಕೂಲವಾಗುತ್ತದೆ. ಹಾಗೆ ನೋಡಿದರೆ ಭಗವಂತ ಈ ಅಧ್ಯಾಯದಲ್ಲಿ ಕೊಟ್ಟಿರುವ ಅಮಾನಿತ್ವ, ಅದಂಭಿತ್ವ ಮುಂತಾದ ಎಲ್ಲವೂ ಧರ್ಮಸಾಧನಗಳೂ ಆಗಿವೆ. ಧರ್ಮಾನುಷ್ಠಾನಕ್ಕೆ ಇವುಗಳು ತುಂಬಾ ಬಲವನ್ನು ತುಂಬುತ್ತವೆ.
ಕರ್ಮದ ಮರ್ಮವನ್ನರಿತು ಶ್ರದ್ಧೆಯಿಂದ ಮತ್ತು ಏಕಾಗ್ರತೆಯಿಂದ ಕರ್ಮಗಳನ್ನು ಮಾಡಿದರೆ ಕರ್ಮಗಳಿಗೆ ಅಥವಾ ಧರ್ಮಾಚರಣೆಗೆ ಹೆಚ್ಚು ಬಲಬರುತ್ತದೆ. “ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ ತದೇವ ವೀರ್ಯವತ್ತರಂ ಭವತಿ” ಎಂಬುದಾಗಿ ಉಪನಿಷತ್ತು ಇದನ್ನೇ ಹೇಳಿದೆ. ಏಕಾಂತ ಸ್ಥಳದಲ್ಲಿ, ಹೆಚ್ಚು ಜನಜಂಗುಳಿ ಇಲ್ಲದ ಸ್ಥಳದಲ್ಲಿ ಕುಳಿತು ಧರ್ಮಾಚರಣೆ ಮಾಡಿದಾಗ ಇವುಗಳು ಹೆಚ್ಚು ಜಾಗೃತವಾಗುತ್ತದೆ. ಉದಾಹರಣೆಗೆ ತುಂಬಾ ಜನಗಳು ಸೇರಿದ ಸಭಾಂಗಣದಲ್ಲಿ ಪೂಜೆಗೆ ಕುಳಿತುಕೊಳ್ಳುವುದಕ್ಕಿಂತ ಜನಗಳಿಲ್ಲದ ದೇವರ ಕೋಣೆಯಲ್ಲಿ ಪೂಜೆಗೆ ಕುಳಿತರೆ ಶ್ರದ್ಧೆ-ಏಕಾಗ್ರತೆಗಳು ಹೆಚ್ಚು ಬರುತ್ತವೆ. ಆಗ ಪೂಜೆಯಿಂದ ಆಗುವ ಪರಿಣಾಮ ಹೇಚ್ಚುತ್ತದೆ. ಇದೇ ರೀತಿ ಎಲ್ಲಾ ಧರ್ಮಾಚರಣೆಗಳಲ್ಲಿಯೂ ಜನಗಳು ಕಡಿಮೆ ಇದ್ದಷ್ಟು ಧರ್ಮಕ್ಕೆ ಬಲ ಹೆಚ್ಚು. ಯಾಕೆಂದರೆ ಧರ್ಮಾಚರಣೆಯ ಬಲಾಬಲಗಳು ಮನಸ್ಸನ್ನು ಹೆಚ್ಚು ಅವಲಂಬಿಸಿವೆ. ಆದರೆ ನಮ್ಮ ಜನಗಳಿಗೆ ಜಾತ್ರೆ-ಜನಜಂಗುಳಿಯು ಹೆಚ್ಚು ಪ್ರಿಯವಾಗಿವೆ. ಜನಸಮೂಹವನ್ನು ಸೇರಿಸುವ ಉತ್ಸವ ಮುಂತಾದವುಗಳು ನಿಷ್ಪ್ರಯೋಜನ ಎಂಬುದು ನಮ್ಮ ಮಾತಿನ ತಾತ್ಪರ್ಯವಲ್ಲ. ಉತ್ಸವಗಳಿಂದ ಒಂದು ರೀತಿಯ ಧರ್ಮಜಾಗೃತಿ ಉಂಟಾಗುತ್ತದೆ. ಆದರೆ ಧರ್ಮಾಚರಣೆಗೆ ನಿಜವಾದ ಬಲ ಬರುವುದು ಏಕಾಂತ ಸ್ಥಳಗಳಲ್ಲಿಯೇ.