ನಮ್ಮ ಇಂದ್ರಿಯಗಳ ಸಾಮರ್ಥ್ಯ ಪರಿಮಿತವಾಗಿದೆ. ಅವುಗಳಿಗೆ ಅತ್ಯಂತ ಸೂಕ್ಷ್ಮವಾದದ್ದನ್ನೂ ಅತ್ಯಂತ ವ್ಯಾಪಕವಾದದ್ದನ್ನೂ ಗ್ರಹಿಸುವ ಶಕ್ತಿ ಇಲ್ಲ. ಕಣ್ಣು, ಕಿವಿ ಮೊದಲಾದ ಇಂದ್ರಿಯಗಳಿರಲಿ, ಅವುಗಳಿಗೆ ಹಿನ್ನೆಲೆಯಾದ ಮನಸ್ಸಿರಲಿ, ಎಲ್ಲವೂ ಯಾವುದೋ ಒಂದು ಪರಿಮಿತಿಯಲ್ಲಿ ಮಾತ್ರವೇ ವಿಷಯವನ್ನು ಗ್ರಹಿಸುತ್ತವೆ.
ಭೌತಶಾಸ್ತ್ರ ಪ್ರಯೋಗಾಲಯದಲ್ಲಿ ಒಂದು ಯಂತ್ರವಿರುತ್ತದೆ. ಅದು ಶಬ್ದಗಳ ತರಂಗಾಂತರವನ್ನು ವ್ಯತ್ಯಾಸಗೊಳಿಸಬಲ್ಲದು. ಆ ವ್ಯತ್ಯಾಸ ತೋರಿಸುವ ಮಾಪಕವೂ ಆ ಯಂತ್ರದಲ್ಲಿರುತ್ತದೆ. ಈ ಯಂತ್ರದಿಂದ ಶಬ್ದ ತರಂಗಗಳ ಅಂತರವನ್ನು ಕಡಿಮೆಗೊಳಿಸಿದರೆ ಧ್ವನಿ ಏರುತ್ತಾ ಹೋಗುತ್ತದೆ. ತರಂಗಾಂತರವನ್ನು ಅತೀ ದೀರ್ಘಗೊಳಿಸಿದಾಗ ಅತೀ ಸೂಕ್ಷ್ಮಗೊಳಿಸಿದಾಗ ಶಬ್ದ ನಮ್ಮ ಕಿವಿಗೆ ಕೇಳಿಸದು. ಯಂತ್ರದ ಮಾಪಕವು ತರಂಗಾಂತರವನ್ನು ಸೂಚಿಸುತ್ತಿದ್ದರೂ, ಕಿವಿ ಮಾತ್ರ ಶಬ್ದವನ್ನು ಗ್ರಹಿಸಲಾರದು. ಈ ದೀರ್ಘ ವಾದ ತರಂಗಾಂತರವುಳ್ಳ ಶಬ್ದಗಳೇ ರೇಡಿಯೋ ತರಂಗಗಳು. ಅವುಗಳನ್ನು ಗುರುತಿಸುವುದು ನಮ್ಮ ಕಿವಿಗೆ ಸಾಧ್ಯವಿಲ್ಲ. ಅವುಗಳನ್ನು ನಮ್ಮ ಕಿವಿಗಳು ಗ್ರಹಿಸಲು ಅನುಕೂಲವಾಗುವಂತೆ ಏರ್ಪಾಟು ಮಾಡಿಕೊಡುವ “ರೇಡಿಯೋ” ಎಂಬ ಸಾಧನ ಬೇಕಾಗುತ್ತವೆ. ಆದ್ದರಿಂದಲೇ ಅತ್ಯಂತ ಸೂಕ್ಷ್ಮವೂ ವ್ಯಾಪಕವೂ ಆದ ಅನೇಕ ವಸ್ತುಗಳು ನಮ್ಮ ಅಕ್ಕಪಕ್ಕಗಳಲ್ಲೇ ಇದ್ದರೂ ನಮ್ಮ ಇಂದ್ರಿಯಗಳು ಅವನ್ನು ಗ್ರಹಿಸಲಾರವು.
ಪರಬ್ರಹ್ಮ ಪರಮಾತ್ಮನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳಿಗೆ ಕಾರಣನಾದ್ದರಿಂದ ಅತ್ಯಂತ ಸೂಕ್ಷ್ಮ ಮತ್ತು ವ್ಯಾಪಕ. ಇಲ್ಲಿ ಕಾಣುವ ವಸ್ತುಗಳನ್ನು ಐದಾಗಿ ವಿಭಾಗಿಸಿದ್ದಾರೆ. ಮೊದಲನೆಯದು ಪೃಥಿವಿ. ಅಂದರೆ ಕಠಿಣವಾದ, ಹೆಚ್ಚು ನಿಬಿಡವಾದ ಅಣುಗಳ ಜೋಡಣೆ ಉಳ್ಳದ್ದು. ಇವುಗಳಿಗಿಂತ ನೀರು ಮೊದಲಾದ ದ್ರವ ಪದಾರ್ಥಗಳು ಸೂಕ್ಷ್ಮ ಯಾಕೆಂದರೆ ಪೃಥಿವಿಯಲ್ಲಿರುವ ಎಲ್ಲ ಗುಣಗಳೂ ನೀರಿನಲ್ಲಿ ಇರುವುದಿಲ್ಲ. ನೀರಿಗಿಂತ ಸೂರ್ಯ, ತೇಜಸ್ಸು, ಬೆಂಕಿ ಮೊದಲಾದ ಪ್ರಕಾಶಗಳು ಇನ್ನೂ ಸೂಕ್ಷ್ಮ. ತೇಜಸ್ಸಿಗಿಂತ ವಾಯು ಮತ್ತೂ ಸೂಕ್ಷ್ಮ ಹಾಗೂ ವ್ಯಾಪಕ. ವಾಯುವಿಗಿಂತ ಆಕಾಶ ಇನ್ನೂ ಸೂಕ್ಷ್ಮ ಹಾಗೂ ವ್ಯಾಪಕ. ಈ ಆಕಾಶವೂ ಪರಬ್ರಹ್ಮದಿಂದಲೇ ಹುಟ್ಟಿ ಬಂದಿದೆ. ಅಂದರೆ ಆಕಾಶಕ್ಕಿಂತಲೂ ಅವನು ಸೂಕ್ಷ್ಮ ಹಾಗೂ ವ್ಯಾಪಕ ಎಂದಾಯಿತು. ಅವನನ್ನು ನಮ್ಮ ಇಂದ್ರಿಯಗಳು ತಲುಪಲಾರವು. ಆದ್ದರಿಂದಲೇ ಅವನು ನಮ್ಮ ಒಳಹೊರಗೆಲ್ಲಾ ವ್ಯಾಪಿಸಿದ್ದರೂ ಅವನನ್ನು ಗುರುತಿಸುವ ಶಕ್ತಿ ನಮಗಿಲ್ಲ. ರೇಡಿಯೊ ತರಂಗಗಳನ್ನು ರೇಡಿಯೋ ಸಾಧನದ ಮೂಲಕ ಹೇಗೆ ಕೇಳಿಸಿಕೊಳ್ಳುತ್ತೇವೆಯೋ ಹಾಗೆಯೇ ಭಗವಂತನನ್ನು ಮೂರ್ತಿಯಲ್ಲಿ, ಮಹಾತ್ಮರಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಆತ ಸರ್ವಾಧಾರನೂ ಸರ್ವಮೂಲನೂ ಆದರೂ, ಮೂರ್ತಿ ಮೊದಲಾದವುಗಳಲ್ಲಿ ಸನ್ನಿಹಿತನಾಗಿರುತ್ತಾನೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು
ನಾರಾಯಣ ನಾರಾಯಣ ನಾರಾಯಣ