ನರನು ಸಿಂಹನಾಗಬಲ್ಲ

posted in: Gurubodhe | 0

ಭಗವಂತನು ಅನೇಕ ಅವತಾರಗಳನ್ನು ಸ್ವೀಕರಿಸಿ ಬಂದ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ನಿಗ್ರಹಿಸಿದ ಇತಿಹಾಸ ನಮ್ಮ ದೇಶದಲ್ಲಿ ತುಂಬಾ ಇದೆ. ಆ ಎಲ್ಲ ಅವತಾರಗಳಲ್ಲಿ ನರಸಿಂಹಾವತಾರ ಅತ್ಯಂತ ವಿಶಿಷ್ಟವಾದದ್ದು. ಏಕೆಂದರೆ ಹತ್ತು ಅವತಾರಗಳಲ್ಲಿ ಇನ್ನುಳಿದ ಅವತಾರಗಳು ಒಂದೋ ಪ್ರಾಣಿಗಳ ರೂಪದ ಅವತಾರಗಳು, ಇಲ್ಲವೋ ಮನುಷ್ಯಾಕೃತಿಯ ಅವತಾರಗಳೂ.  ಮನುಷ್ಯ ಮತ್ತು ಮೃಗ ಎರಡೂ ಸೇರಿಕೊಂಡಿರುವ ಅವತಾರ ಈ ನರಸಿಂಹಾವತಾರ. ಕೆಳಗೆ ಮನುಷ್ಯ ಮೇಲೆ ಸಿಂಹ ಹೀಗೆ ವಿಚಿತ್ರವಾದ ಸಂಯೋಜನೆಯುಳ್ಳ ರೂಪವನ್ನು ಧರಿಸಲು ಭಗವಂತನಿಗೆ ಆಲೋಚನೆ ಹೇಗೆ ಬಂದಿತೋ ಅರ್ಥವಾಗದು. ಆದರೆ ಈ ಸಂಯೋಜನೆ ತಾತ್ವಿಕವಾದ ಅರ್ಥವಿದೆ.

ಮನುಷ್ಯನು ಕೆಳಮಟ್ಟದಲ್ಲಿ ಇದ್ದಾಗ ಮಾತ್ರವೇ ಮನುಷ್ಯನಾಗಿರುತ್ತಾನೆ, ಮೇಲ್ಮಟ್ಟದಲ್ಲಿ ಅವನು ಸಿಂಹ. ಇಲ್ಲಿ ಕೆಳಮಟ್ಟ ಎಂದರೆ ಉಳಿದ ಪ್ರಾಣಿಗಳಂತೆ ಬದುಕುವಿಕೆ. ಅಂದರೆ ಆಹಾರ, ನಿದ್ರೆ ಮೊದಲಾದ ಸಹಜಕ್ರಿಯೆಗಳಲ್ಲಷ್ಟೇ ತೊಡಗಿದ್ದರೆ ಅವನು ಎಲ್ಲರಂತೆಯೆ ಒಬ್ಬ ಮನುಷ್ಯ. ಸಾಧನೆಯಿಂದ ಮೇಲ್ಮಟ್ಟಕ್ಕೆ ಹತ್ತಿದರೆ ಅವನೇ ಸಿಂಹನಾಗುತ್ತಾನೆ. ಸಿಂಹವೆAಬುದು ಶಕ್ತಿ, ಧೈರ್ಯ, ನಾಯಕತ್ವ ಮುಂತಾದ ಧೀರಗುಣಗಳ ಪ್ರತೀಕ. ಕೆಲವರಿಗೆ ಈ ಗುಣಗಳು ಹುಟ್ಟುವಾಗಲೇ ಬಂದಿರುತ್ತದೆ. ಮತ್ತೆ ಕೆಲವರು ಈ ಗುಣಗಳನ್ನು ಸಾಧನೆಯಿಂದ ತಮ್ಮದಾಗಿಸಿಕೊಳ್ಳುತ್ತಾರೆ. ಮನುಷ್ಯನಾಗಿ ಹುಟ್ಟಿ ಧೀರ ಸಾಧನೆಯನ್ನು ಮಾಡಿದ ವ್ಯಕ್ತಿಗಳು ನರಸಿಂಹರು.

ಮನುಷ್ಯನು ಅಜ್ಞಾನದ ಆವರಣವನ್ನು ಬಿಟ್ಟು ಮೇಲಕ್ಕೆ ಎದ್ದರೆ ಸಿಂಹನಾಗುತ್ತಾನೆ. ಜೀವಾತ್ಮನು ಸಾಧನೆಯ ಮೂಲಕ ಅವಿದ್ಯೆಯ ಆವರಣವನ್ನು ಕಳೆದುಕೊಂಡರೆ ಪರಮಾತ್ಮಾನಾಗುತ್ತಾನೆ. ಇಂತಹ ಸಾಧನೆ ಮನುಷ್ಯ ಜನ್ಮದಲ್ಲಿಸಾಧ್ಯ. ಈ ಅರ್ಥದಲ್ಲಿ ಅವಿದ್ಯೆಯ ಆವರಣದಲ್ಲಿದ್ದಾಗ ನರನಗಿದ್ದವನು ಆ ಆವರಣವನ್ನು ಮೀರಿ ಮೇಲಕ್ಕೆ ಎದ್ದಾಗ ಸಿಂಹನಾಗಿತ್ತಾನೆ. ಮೇಲಕ್ಕೆ ಏಳುವುದು ಎಂದರೆ ಏನು ? “ಉದ್ದರೇತ್ ಆತ್ಮಾನಮ್” ಎಂಬ ಗೀತಾವಾಕ್ಯದ ಭಾಷ್ಯದಲ್ಲಿ ಶ್ರೀ ಶಂಕರರು ಹೇಳಿದ ಮಾತು ಇಲ್ಲಿ ಉಲ್ಲೇಖನೀಯ. “ಯೋಗಾರೂಢತಾಮ್ ಆಪಾದಯೇತ್”– ಧ್ಯಾನ ಯೋಗಕ್ಕೆ ತನ್ನನು ತಾನು ಹತ್ತಿಸಿಕೊಳ್ಳಬೇಕು. ಧ್ಯಾನಯೋಗದ ಸಂದರ್ಭದಲ್ಲಿ ಈ ಮಾತು ಬಂದಿದೆಯಾದ್ದರಿAದ ಇಲ್ಲಿರುವ ಯೋಗ ಶಬ್ದಕ್ಕೆ ಧ್ಯಾನಯೋಗ ಎಂಬುದಾಗಿ ಅರ್ಥ. ಬಾಹ್ಯ ಸಾಧನಗಳ ಮೂಲಕ ಮತ್ತು ಅಂತರAಗದ ಸಾಧನಗಳ ಮೂಲಕ ಏಕಾಗ್ರತೆಯನ್ನು ಮನಸ್ಸಿಗೆ ತಂದುಕೊAಡು ಏಕಾಗ್ರತೆಯಿಂದ ಪರಮಾತ್ಮನ ಧ್ಯಾನದಲ್ಲಿ ತೊಡಗಬೇಕು.  ಹೀಗೆ ತೊಡಗಿಕೊಂಡ ನರನು ಸಿಂಹನಾಗುತ್ತಾನೆ. ಸಂಸ್ಕöÈತ ವ್ಯಾಕರಣ ದೃಷ್ಟಿಯಿಂದ ಸಿಂಹ ಶಬ್ದಕ್ಕೆ ಬಂಧನವನ್ನು ನಾಶಮಾಡುವವನು ಎಂಬುದಾಗಿ ಅರ್ಥ. ತನ್ನ ಅವಿದ್ಯಾ ಆವರಣವೆಂಬ ಬಂಧನವನ್ನು ನಾಶಮಾಡಿಕೊಂಡವನು ನರನಾಗಿದ್ದರೂ ಸಿಂಹ. ಅವನೇ ನರಸಿಂಹ.