ವೃದ್ಧಾಪ್ಯವನ್ನು ಎದುರಿಸುವ ಬಗೆ

posted in: Gurubodhe | 0

 ವೃದ್ಧಾಪ್ಯವನ್ನು ಕುರಿತು ಹೇಳುವ ಸಂಸ್ಕೃತ ಸುಭಾಷಿತವೊಂದು ಹೀಗಿದೆ. “ರೂಪಸ್ಯ ಹಂತ್ರೀ ವ್ಯಸನಂ ಬಲಸ್ಯ ಶೋಕಸ್ಯ ಯೋನಿಃ ನಿಧನಂ ರತೀನಾಮ್ | ನಾಶಃ ಸ್ಮೃತೀನಾಂ ರಿಪುರಿಂದ್ರಿಯಾಣಾಂ ಏಷಾ ಜರಾ ನಾಮ ಯಯೈಷ ಭಗ್ನಃ ||” ಮುಪ್ಪು ಪ್ರಾರಂಭವಾಯಿತೆಂದರೆ ಎಷ್ಟೇ ಸುಂದರನಾಗಿದ್ದ ವ್ಯಕ್ತಿಯಾಗಿದ್ದರೂ ಅವನ  ಅಥವಾ ಅವಳ ರೂಪವು ಕುರೂಪವಾಗಲು ಪ್ರಾರಂಭವಾಗುತ್ತದೆ. ಅನೇಕ ದಶಕಗಳಷ್ಟು ಹಿಂದೆ ವಿಶ್ವ ಸುಂದರಿಯ ಪಟ್ಟಕ್ಕೇರಿದ ಮಹಿಳೆಯು ಮುದುಕಿಯಾಗಿದ್ದ ಚಿತ್ರ ಒಮ್ಮೆ ಪತ್ರಿಕೆಯಲ್ಲಿ ಬಂದಿತ್ತು. ಆದ್ದರಿಂದ ಭೌತಿಕ ಶರೀರದ ಸೌಂದರ್ಯಕ್ಕೆ ವೃದ್ದಾಪ್ಯವು ಅಂತ್ಯವನ್ನುಂಟುಮಾಡುತ್ತದೆ. ಶರೀರದ ಬಲ ಕುಂದಿ ಹೋಗುತ್ತದೆ. ಬಾಹ್ಯ ಸೌಂದರ್ಯವಷ್ಟೇ ನಾಶವಾಗಿದ್ದರೂ ಶರೀರದ ಬಲ ಹಾಗೇ ಉಳಿದಿದ್ದರೆ ಪರವಾಗುತ್ತಿರಲಿಲ್ಲ. ಆದರೆ ವೃದ್ದಾಪ್ಯದಿಂದ ಶರೀರದ ಬಲ ಕ್ಷೀಣವಾಗುತ್ತದೆ. ರೂಪ ಬಲಗಳೆರಡೂ ಕಳೆದರೂ ಮನಸ್ಸಿಗೆ ನೆಮ್ಮದಿ ಉತ್ಸಾಹಗಳಿರುತ್ತಿದ್ದರೆ ಹೇಗಾದರೂ ಸಹಿಸಿಕೊಳ್ಳಬಹುದಿತ್ತು.ಆದರೆ ಮನಸ್ಸಿಗೆ ವಿವಿಧ ಶೋಕಗಳು ಚುಚ್ಚುತ್ತವೆ.  ವಿಷಯ ಸುಖಗಳ ಆನಂದವಂತೂ ಮೊದಲೇ ಸತ್ತು ಹೋಗುತ್ತದೆ. ಯಾವುದಾರೂ ಕೆಲಸಗಳಲ್ಲಿ ತೊಡಗಿಕೊಂಡು ಅದರಲ್ಲಿಯೇ ಆನಂದವನ್ನು ಕಾಣಬೇಕೆಂದುಕೊಂಡರೆ ಆಗೊಮ್ಮೆ ಈಗೊಮ್ಮೆ ಕಾಡುವ ವಿಸ್ಮೃತಿ ಕೆಲಸಕ್ಕೆ ಅಡ್ಡಿಯಾಗುತ್ತದೆ. ಮಾಡಿದ ಕೆಲಸವನ್ನೇ ಮತ್ತೆ ಮಾಡುವಂತೆ, ಹೇಳಿದ ಮಾತನ್ನೇ ಮತ್ತೆ ಹೇಳುವಂತೆ ಆಗಿ ಬಿಡುತ್ತದೆ. ಎಲ್ಲ ಇಂದ್ರಿಯಗಳ ಶಕ್ತಿಗಳು ಶೋಚನೀಯವಾದ ರೀತಿಯಲ್ಲಿ ಕಡಿಮೆಯಾಗುತ್ತವೆ. ವೃದ್ಧಾಪ್ಯ ಎಂದರೆ ಹೀಗಿರುತ್ತದೆ.         ವೃದ್ಧಾಪ್ಯದ ಈ ದುಃಸ್ಥಿತಿಯನ್ನು ಹೀಗೆ ಎದುರಿಸಬೇಕು ? ಚಿಕ್ಕ ವಯಸ್ಸಿನಿಂದಲೇ ತಯಾರಿ ನಡೆಸುವ ಮೂಲಕ ಇದನ್ನು ಎದುರಿಸಬೇಕು. ಯೌವ್ವನದಲ್ಲಿರುವಾಗಲೇ ವೃದ್ಧಾಪ್ಯದ ದುಃಸ್ಥಿತಿಗಳನ್ನು ಚನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು. ವೃದ್ಧಾಪ್ಯದ ಜೊತೆಗೆ ಅನಂತರ ಬರುವ ಮರಣ ಮತ್ತು ಅದಾದ ನಂತರ ಬರುವ ಪುನರ್ಜನ್ಮಗಳ ನೋವುಗಳನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು.ಈ ಮಾತನ್ನು ಭಗವಂತನು ಜ್ಞಾನಸಾಧನಗಳನ್ನು ಹೇಳುವಾಗ  ಉಲ್ಲೇಖಿಸಿದ್ದಾನೆ._ “ಜನ್ಮ_ ಮೃತ್ಯು_ಜರಾ_ವ್ಯಾಧಿ_ದುಃಖ ದೋಷಾನುದರ್ಶನಮ್”ಈ ನೋವುಗಳನ್ನು ಮನಸ್ಸಿನ ಹೊರತಾಗಿ ಬೇರೆ ಯಾವುದರಿಂದಲೂ ಅಳತೆ ಮಾಡಲು ಸಾಧ್ಯವಿಲ್ಲ. ಈ ನೋವುಗಳನ್ನು ತೂಕ ಮಾಡಲು ಬರುವುದಿಲ್ಲ,ಅಳತೆ ಮಾಡಲೂ ಬರುವುದಿಲ್ಲ.ಅನುಭವಾತ್ಮಕ ಆಳ ದೃಷ್ಟಿಯಿಂದ ಮಾತ್ರವೇ ಮನಸ್ಸು ಅರ್ಥಮಾಡಿಕೊಳ್ಳಲು ಸಾಧ್ಯವಿದೆ.ಮುಂದೆ ಬರಲಿಕ್ಕಿರುವ ಗಹನವಾದ ದುಃಖವು ಮೊದಲೇ ಅರ್ಥವಾದಾಗ ಅದನ್ನು ತಪ್ಪಿಸಿಕೊಳ್ಳವ ಪ್ರಯತ್ನ ಆಗಲೇ ಶುರುವಾಗುತ್ತದೆ.ದೇವರನ್ನು ಭಕ್ತಿಯ ಮೂಲಕ ಗಟ್ಟಿಯಾಗಿ ಹಿಡಿದುಕೊಂಡು ಕರ್ಮ_ಭಕ್ತಿ_ಧ್ಯಾನಯೋಗಗಳ ಮೂಲಕ ಮುಪ್ಪಿನ ದುಃಖಗಳನ್ನು ಎದುರಿಸಲು ಮತ್ತು ದಾಟಲು ಸಾಧ್ಯವಿದೆ.ಅದೇ ಸಾಧನೆ. “ ಜರಾ ಮರಣ ಮೋಕ್ಷಾಯ ಮಾಂ ಆಶತ್ಯಯತಂತಿಯೆ……..”ಈ ಸಾಧನೆಯಲ್ಲಿ ಮುಂದುವರಿದವರು ಜ್ಞಾನಿಯಾಗುತ್ತಾರೆ,ಎಲ್ಲಾ ದುಃಖಗಳನ್ನು ದಾಟುತ್ತಾರೆ.