ಒಬ್ಬ ವಿದ್ಯಾರ್ಥಿ ಪ್ರವಚನಕ್ಕೆ ಬಂದ ಸ್ವಾಮೀಜಿಯ ಬಳಿ ಒಂದು ಪ್ರಶ್ನೆ ಕೇಳಿದ “ಸ್ವಾಮೀಜಿ! ನೀವು ಹೇಳಿದಂತಹ ದೇವರು ನನಗೆ ಎಲ್ಲಿಯೂ ಕಾಣುತ್ತಿಲ್ಲ. ಆದ್ದರಿಂದ ದೇವರಿದ್ದಾನೆ ಎಂದು ನನಗೆ ಅನಿಸುವುದಿಲ್ಲ. ದೇವರಿಲ್ಲ ಎಂಬುದಾಗಿಯೇ ನಾನು ನಿರ್ಧರಿಸಿದ್ದೇನೆ.” ಸ್ವಾಮೀಜಿ ಪಟಕ್ಕನೆ ಹೇಳಿದರು “ಹಾಗದರೆ ನಿನಗೆ ಬುದ್ಧಿಯಿಲ್ಲ. ನಿನ್ನ ಬುದ್ಧಿಯನ್ನು ಎಲ್ಲಿಯಾದರೂ ನೋಡಿದ್ದಿಯೋ? ನೋಡಿಲ್ಲಾ ತಾನೆ ? ಅಂದ ಮೇಲೆ ನಿನಗೆ ಬುದ್ಧಿಯಿಲ್ಲ ಎಂಬುದಾಗಿ ನಾನು ನಿರ್ಧರಿಸಿದ್ದೇನೆ.” ವಿದ್ಯಾರ್ಥಿ ತಿರುಗಿ ಕೇಳಿದ. “ನನಗೆ ನಿಮ್ಮ ಮಾತು ಅರ್ಥವಾಗಲಿಲ್ಲ.” ಆಗ ಸ್ವಾಮೀಜಿ ವಿವರಿಸಿದರು “ ನಮ್ಮ ಬುದ್ಧಿಯು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ ಆದರೂ ಅದು ಇದ್ದೇ ಇದೆ. ಅದು ಇಲ್ಲದಿದ್ದರೆ ಯಾವ ಕೆಲಸವೂ ನಡೆಯುವುದಿಲ್ಲ. ನೀನು ಹೀಗೆ ಪ್ರಶ್ನೆ ಕೇಳುವುದಾಗಲಿ ಅಥವಾ ನಾನು ಹೇಳೀದ್ದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗಲಿ ಬುದ್ಧಿಯಿಲ್ಲದಿದ್ದರೆ ಸಾಧ್ಯವಿಲ್ಲ. ಆದ್ದರಿಂದ ಅದು ಕಾಣದಿದ್ದರೂ ಕಾಣುತ್ತಿರುವ ಕೆಲಸದ ಮೂಲಕ ಅದು ಇದ್ದೇ ಇದೆ ಎಂದು ನಿರ್ಣಯಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬುದ್ಧಿ ಮತ್ತು ಪ್ರಾಣಗಳು ಕೆಲಸ ಮಾಡುತ್ತಿರುವುದರಿಂದ ಆ ಬುದ್ಧಿ ಪ್ರಾಣಗಳಿಗೆ ಪ್ರೇರಕನಾದ ಚೇತನನೊಬ್ಬನು ಒಳಗೆ ಇದ್ದೇ ಇದ್ದಾನೆಂದು ನಿರ್ಣಯಿಸಬೇಕಾಗುತ್ತದೆ. ಆದ್ದರಿಂದ ಬುದ್ದಿಯು ಜ್ಞಾನ ಶಕ್ತಿಯಿಂದ ಕೆಲಸ ಮಾಡುತ್ತಿರುವುದಕ್ಕೆ ಕಾರಣವಾದ ಚೇತನನೇ ದೇವರು ‘ಯೋ ಬುದ್ಧೇಃ ಪರತಸ್ತು ಸಃ’ ಸ್ವಾಮೀಜಿ ಮತ್ತೊಮ್ಮೆ ಚಿಕ್ಕ ಪ್ರವಚನವನ್ನೇ ಮಾಡಿದರು. ಬುದ್ಧಿಯೆಂದರೆ ತಲೆ ಬುರುಡೆಯೊಳಗಿರುವ ಮಾಂಸಖಂಡ ಎಂಬದಾಗಿ ಅನೇಕರು ಅಂದುಕೊಂಡಿದ್ದಾರೆ. ಹಾಗೆಯೇ ಪ್ರಾಣ ಎಂದರೆ ಹೊರಗೆ ಬೀಸುತ್ತಿರುವ ಗಾಳಿಯಂತೆಯೇ ಶರೀರದ ಒಳಗೆ ಒಡಾಡುತ್ತಿರುವ ಗಾಳಿ ಎಂಬುದಾಗಿ ಅನೇಕರು ಭಾವಿಸಿಕೊಂಡಿದ್ದಾರೆ. ಬುದ್ಧಿಯು ಕಂಪ್ಯೂಟರಿನಂತೆ ತನ್ನೊಳಗೆ ಶೇಖರೆಣೆಯಾಗಿರುವ ವಿಷಯಗಳಿಗೆ ಸ್ಪಂದಿಸದೇ ಹೊಸ ವಿಷಯಗಳಿಗೂ ಸ್ಪಂದಿಸುತ್ತದೆ. ಅಂದರೆ ಚೈತನ್ಯದಂತೆ ಕೆಲಸ ಮಾಡುತ್ತದೆ. ಜಡದಂತಲ್ಲ. ಬುದ್ಧಿಗೆ ಈ ಚೈತನ್ಯ ಛಾಯೆ ಎಲ್ಲಿಂದ ಬಂತು ? ಹೊರಗೆ ಬೀಸುತ್ತಿರುವ ಗಾಳಿಯೇ ಶರೀರದ ಒಳಗಿನ ಪ್ರಾಣವಾಗಿದ್ದರೆ, ಮರಣೋನ್ಮುಖನಾಗಿರುವ ವ್ಯಕ್ತಿಯ ಬಾಯಿಗೆ ಆರೋಗ್ಯವಂತ ಮನುಷ್ಯನು ತನ್ನ ಬಾಯನ್ನು ಹಚ್ಚಿ ಗಾಳಿಯನ್ನು ತುಂಬುವ ಮತ್ತು ಎಳೆಯುವ ಪ್ರಯತ್ನವನ್ನು ಮಾಡಿದರೂ ಅವನ ಉಸಿರಾಟ ಸಕ್ರಿಯಗೊಳ್ಳುವುದಿಲ್ಲ ಏಕೆ? ಅಥವಾ ಮರಣವಾದ ನಂತರ ಶರೀರದ ಒಳಗೆ ಹೊರಗಿನ ಗಾಳಿ ತುಂಬಿಕೊಂಡು ಬಲೂನಿನಂತೆ ಉಬ್ಬಿದರೂ ಉಸಿರಾಟ ಮತ್ತೆ ಪ್ರಾರಂಭವಾಗುವುದಿಲ್ಲ. ಅದಕ್ಕೆ ಕಾರಣವೇನು ? ಬುದ್ಧಿ ಮತ್ತು ಪ್ರಾಣಗಳನ್ನು ಕುರಿತಾದ ಈ ಪ್ರಶ್ನೆಗಳನ್ನೇ ಎತ್ತಿಕೊಂಡು ಉತ್ತರವನ್ನು ತಿಳಿಸುವ ಮೂಲಕ ಒಳಗಿರುವ ಪರಮಾತ್ಮನನ್ನು ಕೇನೋಪನಿಷತ್ತು ತೋರಿಸಿಕೊಡುತ್ತದೆ “ಕೇನೇಷಿತಂ ಪತತಿ ಪ್ರೇಕ್ಷಿತಂ ಮನಃ ಕೇನ ಪ್ರಾಣ ಪ್ರಥಮಃ ಪ್ರೈತಿ ಯುಕ್ತಃ” ಒಳಗಿರುವ ಪರಮಾತ್ಮ ಚೈತನ್ಯವೇ ಬುದ್ಧಿ ಪ್ರಾಣಗಳಿಗೆ ಪ್ರೇರಕ ಶಕ್ತಿ. ಅವನು ಪ್ರೇರಣೆ ಮಾಡದಿದ್ದರೆ ಅಥವಾ ಅವನ ಚೈತನ್ಯದ ಛಾಯೆ ಇಲ್ಲದಿದ್ದರೆ ಬುದ್ಧಿ ಇಷ್ಟೋಂದು ಜ್ಞಾನ ಶಕ್ತಿಯಿಂದ ವಿವರಿಸಲು ಸಾಧ್ಯವಿಲ್ಲ. ಹಾಗೆಯೆ ಅವನ ಚೈತನ್ಯದ ಛಾಯೆ ಇಲ್ಲದಿದ್ದರೆ ಉಸಿರಾಟ ಹೊರಗಿನ ಗಾಳಿಗಿಂತಲೂ ವಿಭಿನ್ನವಾಗಿ ಕ್ರಿಯಾ ಶಕ್ತಿಯ ಮೂಲಕ ಶರೀರದ ಒಳಗೆ ಸಂಚರಿಸುತ್ತಿರಲಿಲ್ಲ. ಈ ಅರ್ಥದಲ್ಲಿ ಪರಮಾತ್ಮನು ಪ್ರಾಣಕ್ಕೆ ಪ್ರಾಣ ಬುದ್ಧಿಗೆ ಬದ್ಧಿ. “ಮನಸೋ ಮನೋ ಪ್ರಾಣಸ್ಯ ಪ್ರಾಣಃ”. ಅವನ ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳೇ ಬುದ್ಧಿ ಮತ್ತು ಪ್ರಾಣಗಳ ಮೂಲಕ ನಮಗೆ ಗೋಚರಿಸುತ್ತದೆ. ಇವೆರಡು ಶಕ್ತಿಗಳಿಗಿಂತಲೂ ಹೊರತಾಗಿ ಇಚ್ಛಾ ಶಕ್ತಿ ಎಂಬ ಇನ್ನೊಂದು ಶಕ್ತಿ ಅವನಿಗಿದೆ. ಆದ್ದರಿಂದಲೇ ನಮ್ಮೊಳಗೇ ಅವನಿದ್ದರೂ ಅವನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ ನಿಶ್ಚಿತವಾಗಿ ಅವನಿದ್ದಾನೆ.