ಅದು ೨೦೧೪ ಅಗಸ್ಟ್ ತಿಂಗಳು,ನಾನು ಶ್ರೀ ಮಠದ ಮೆತ್ತಿಯಲ್ಲಿ ಪೂಜ್ಯ ಶ್ರೀಗಳ ಬರುವಿಕೆಗಾಗಿ ಕಾಯುತ್ತ ಕೂತಿದ್ದೆ,ಒಂದು ಪ್ರಮುಖವಾದ ವಿಷಯದ ಬಗ್ಗೆ ಮಾತನಾಡಲು.ಶ್ರೀಗಳವರು ಬಂದು ಪೀಠದಲ್ಲಿ ಆಸೀನರಾಗಿ ಎಂದಿನ ತಮ್ಮ ತೇಜಸ್ಸಿನ ದರ್ಶನ ಭಾಗ್ಯ ನೀಡಿ ಮುಗುಳ್ನಗುತ್ತಾ ” ಲಕ್ಷ್ಮೀಶಾ ಏನು ವಿಷಯ” ಎಂದರು.ಆಗ ನಾನು ಗುರುಗಳಲ್ಲಿ ಒಂದು ಪ್ರಾರ್ಥನೆ ಇದೆ,ಅದೇನೆಂದರೆ ನಾವು ಮಠದ ವತಿಯಿಂದ ಒಂದು ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮಾಡೋಣ, ಜೊತೆಗೆ ನಮ್ಮ ಭಾಗದ ಅತ್ಯಂತ ಪರಾಕ್ರಮಿ ಮತ್ತು ವಿದ್ವಾಂಸ ದೊರೆಯಾಗಿದ್ದ ಸದಾಶಿವರಾಯನ ಹೆಸರಿನಲ್ಲಿ ಇತಿಹಾಸತಜ್ಞರೋರ್ವರಿಗೆ ಪ್ರಶಸ್ತಿಯನ್ನು ಕೊಡೋಣ,ಇದಕ್ಕೆ ತಮ್ಮ ಅನುಮತಿಯನ್ನು ಅಪೇಕ್ಷಿಸಿ ಬಂದಿದ್ದೇನೆ ಎಂದೆ.ಆಗ ಪೂಜ್ಯ ಶ್ರೀಗಳು ನಗುತ್ತಾ ” ಆಗಲಿ ಎಂದೋ ಆಗಬೇಕಾದ ಕಾರ್ಯಕ್ಕೆ ಈಗಲಾದರೂ ಸಮಯ ಬಂತಲ್ಲ,ಖಂಡಿತ ಮಾಡೋಣ,ಜೊತೆಗೆ ನಮ್ಮಸೋಂದಾದ ಮೂರು ಮಠಗಳು ಹಾಗು ಜಾಗೃತವೇದಿಕೆಯ ಸಹಯೋಗದಲ್ಲಿ ಇದನ್ನು ಆಯೋಜಿಸೋಣ ” ಎಂದು ತುಂಬಾ ಪ್ರೀತಿಯಿಂದ ಒಪ್ಪಿಗೆ ನೀಡಿದ್ದರು.ಅಲ್ಲಿಂದ ಮುಂದೆ ಇತಿಹಾಸ ಸಮ್ಮೇಳನ ಪ್ರತಿವರ್ಷ ನಡೆಯುತ್ತಾ ಅವರೇ ಹೇಳಿದ ಹಾಗೆ ಇತಿಹಾಸ ಸಮ್ಮೇಳನವೇ ಒಂದು ಹೊಸ ಇತಿಹಾಸ ನಿರ್ಮಿಸಿದ್ದೂ ಒಂದು ಇತಿಹಾಸವೇ!!! ನಿಜ..ನಮ್ಮ ಹೆಮ್ಮೆಯ ಸ್ವರ್ಣವಲ್ಲೀ ಶ್ರೀಗಳವರ ಇತಿಹಾಸದೆಡೆಗಿನ ಪ್ರೀತಿ ನಿಜಕ್ಕೂ ಅನನ್ಯ.ನನಗೆ ಪೂಜ್ಯ ಶ್ರೀಗಳವರ ನಿಕಟ ಒಡನಾಟ ಪ್ರಾರಂಭವಾಗಿ ಸುಮಾರು ೧೭ ವರ್ಷವೇ ಆಗಿರಬಹುದು.ಶ್ರೀಮಠದ ಮತ್ತು ಸೋಂದಾದ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳನ್ನೂ ಪೂಜ್ಯರು ಬಹಳ ಗಂಭೀರವಾಗಿ,ಆಮೂಲಾಗ್ರವಾಗಿ ತಲಸ್ಪರ್ಷಿಯಾಗಿ ಯೋಚಿಸುತ್ತಾರೆ,ಚರ್ಚಿಸುತ್ತಾರೆ.ಇತಿಹಾಸ ಎಂಬುದು ವರ್ತಮಾನ ಮತ್ತು ಭವಿಷ್ಯದ ದಿಕ್ಸೂಚಿ ಎಂದು ಭಾವಿಸಿದವರವರು.ಸೋಂದಾದ ಸ್ಮಾರಕಗಳ ರಕ್ಷಣೆಗಾಗಿ ಜಾಗೃತ ವೇದಿಕೆ ಎಂಬ ಸಂಸ್ಥೆಯನ್ನು ಮೂರು ದಶಕಗಳ ಹಿಂದೆಯೇ ಸ್ಥಾಪಿಸಿ ಸೋಂದಾದ ಪ್ರಾಚೀನ ದೇವಾಲಯಗಳಿಗೆ ನೂತನ ಕಾಯಕಲ್ಪ ನೀಡಿದ ಕೀರ್ತಿ ಪರಮಪೂಜ್ಯರದು.ಪೂಜ್ಯರೂ ಪೀಠಕ್ಕೆ ಬರುವ ಮೊದಲು ಮಠದ ಇತಿಹಾಸ ಸಂಕ್ಷಿಪ್ತವಾಗಿ ಉಲ್ಲೇಖವಾಗಿತ್ತು,ಅದನ್ನು ಗ್ರಹಿಸಿದ ಶ್ರೀಗಳು ನನ್ನ ಗುರುಗಳಾದ ಡಾ.ಎ.ಕೆ ಶಾಸ್ತ್ರಿಯವರಿಂದ ಕ್ರಮಬದ್ಧವಾಗಿ ಶ್ರೀ ಮಠದ ಇತಿಹಾಸವನ್ನು ಬರೆಸಿದರು.ಈಗ ಮಠದ ಇತಿಹಾಸಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೊಸ ಶಾಸನಗಳು,ಹೊಸ ವಿಷಯಗಳು ಸಿಕ್ಕ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಷ್ಕೃತ ಆವೃತ್ತಿಯ ರಚನೆಯ ಕೆಲಸವನ್ನು ನನಗೆ ನೀಡಿದ್ದಾರೆ.ಆ ಕಾರ್ಯ ಪ್ರಗತಿಯಲ್ಲಿದೆ.
ಪ್ರತಿ ವರ್ಷದ ಸೋಂದಾ ಇತಿಹಾಸೋತ್ಸವದಲ್ಲೂ ತುಂಬಾ ಪ್ರೀತಿ,ಕಾಳಜಿ,ಆಸಕ್ತಿಯಿಂದ ಪಾಲ್ಗೊಳ್ಳುವ ಶ್ರೀಗಳು ಸ್ವತಃ ಆಸಕ್ತಿ ವಹಿಸಿ ಇತಿಹಾಸ ಸಮ್ಮೇಳನದಲ್ಲಿ ಕಿಂಚಿತ್ತು ಲೋಪ ಬರದಂತೆ ಆಯೋಜನೆಯಾಗಬೇಕೆಂದು ಹೇಳುವ ಅವರ ಆ ತುಡಿತದಲ್ಲಿ ಅದೆಷ್ಟು ಆಳವಾದ ಇತಿಹಾಸದೆಡೆಗಿನ ಪ್ರೀತಿ ಇದೆ ಎಂಬುದನ್ನು ನಾವು ತಿಳಿಯಬೇಕು.ಧರ್ಮ ,ಸಂಸ್ಕೃತಿ,ಭಾಷೆ,ಸಂಪ್ರದಾಯ, ಆಚರಣೆ, ಆಧ್ಯಾತ್ಮ ಎಲ್ಲವೂ ಅರಿಕೆಗೆ ಬರುವುದು ಇತಿಹಾಸದ ಗರ್ಭದಿಂದಲೇ ಆದುದರಿಂದ ಆ ಕುರಿತಾದ ಚಿಕಿತ್ಸಕ ಪ್ರಜ್ಞೆಯ ಅಗತ್ಯತೆಯನ್ನ ಶ್ರೀಗಳು ಅರಿತು ಅನುಷ್ಠಾನಕ್ಕೆ ತರುವ ಪರಿ ನಿಜಕ್ಕೂ ಅದ್ಭುತವೇ ಸರಿ.ಕಳೆದ ಸೋಂದಾ ಇತಿಹಾಸೋತ್ಸವದ ನಂತರ ನಾಡಿನ ಖ್ಯಾತ ಇತಿಹಾಸ ತಜ್ಞರಲ್ಲೊಬ್ಬರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರರು ನನಗೆ ಒಂದು ಮಾತು ಹೇಳಿದ್ದರು,” ಗೋಷ್ಠಿಯ ಸಂದರ್ಭದಲ್ಲಿ ಮಂಡನಾಕಾರರು ವೇದಿಕೆಯ ಮೇಲೆ ವಿಷಯ ಮಂಡನೆ ಮಾಡುವಾಗ ಸಾಮಾನ್ಯ ಪ್ರೇಕ್ಷಕರ ಹಾಗೆ ವೇದಿಕೆಯ ಮುಂಭಾಗದಲ್ಲಿ ಕುಳಿತು ಗೋಷ್ಠಿಯಲ್ಲಿ ಪಾಲ್ಗೊಳ್ಳುವ ಗುರುಗಳನ್ನು ನಾನು ಎಲ್ಲಿಯೂ ಕಂಡಿಲ್ಲ ” ಎಂದು! ಇದು ಪೂಜ್ಯ ಶ್ರೀಗಳ ಇತಿಹಾಸದ ಪ್ರೀತಿ ಮತ್ತು ಸರಳ ಪಾಲ್ಗೊಳ್ಳುವಿಕೆಗೆ ಪರಮೋಚ್ಛ ನಿದರ್ಶನ.ಪೂಜ್ಯರ ಜೊತೆಗೆ ಇತಿಹಾಸದ ಕುರಿತಾದ ವಿಷಯಗಳನ್ನು ಚರ್ಚಿಸುವಾಗ ಬಹಳ ಸಲ ಗಮನಿಸಿದ ಹಾಗೆ ಅವರಲ್ಲೊಬ್ಬ ಶ್ರೇಷ್ಠ ಸಂಶೋಧಕನೂ ಇದ್ದಾನೆ,ನಾವು ಹೇಳಿದ್ದನ್ನೆಲ್ಲಾ ಕುರುಡಾಗಿ ಸ್ವೀಕರಿಸುವ,ನಂಬುವ ಜಾಯಮಾನ ಶ್ರೀಗಳದ್ದಲ್ಲ,ಅದು ಹೀಗ್ಯಾಕೆ,ಅದು ಹಾಗಲ್ಲವೇ ಎಂಬ ಕುತೂಹಲ ಮತ್ತು ಚಿಂತನೆ ಅವರ ವೈಜ್ಞಾನಿಕ ಇತಿಹಾಸ ಪ್ರಜ್ಞೆಗೆ ಸಾಕ್ಷಿ.ಶಾಸನಗಳು,ಶಿಲ್ಪಗಳು, ದೇವಾಲಯ ವಾಸ್ತು ಎಲ್ಲದರ ಕುರಿತಾದ ಅಪಾರ ಜ್ಞಾನವೂ ಅವರಲ್ಲಿದೆ.ಅದೆಷ್ಟೋ ಬಾರಿ ನಮಗೆ ಕಂಡುಬರದ ವಿಷಯಗಳು,ದೋಷಗಳು ಅವರಿಗೆ ಕಂಡದ್ದಿದೆ,ನಿಜಕ್ಕೂ ಇಂತಹ ಒಬ್ಬ ಇತಿಹಾಸದೆಡೆಗಿನ ಪ್ರಜ್ಞೆ,ಪ್ರೀತಿಯುಳ್ಳ ಶ್ರೀಗಳನ್ನು ಪಡೆದಿರುವುದು ನಮ್ಮ ಅಹೋಭಾಗ್ಯ.ಶ್ರೀ ಸ್ವರ್ಣವಲ್ಲೀ ಮಠದ ೧೨೦೦ ವರ್ಷಗಳ ಇತಿಹಾಸದಲ್ಲಿ ಅನೇಕ ಯತಿಗಳು ಪೀಠವನ್ನಲಂಕರಿಸಿ ಧಾರ್ಮಿಕವಾಗಿ,ಆಧ್ಯಾತ್ಮಿಕವಾಗಿ,ಸಾಂಸ್ಕೃತಿಕವಾಗಿ ಸಾಧನೆ,ಸಿದ್ಧಿ ಮಾಡಿಕಾಲವಾಗಿದ್ದಾರೆ,ಆದರೆ ಸರ್ವತೋಮುಖ ಅಭಿವೃದ್ಧಿ ಅಂತ ಬಂದರೆ ಅಕ್ಷರಶಃ ಸಾಧನೆಯ ಉತ್ತುಂಗಕ್ಕೆ ಶ್ರೀ ಮಠ ತಲುಪಿದ್ದು ನಮ್ಮ ಹೆಮ್ಮೆಯ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಕಾಲದಲ್ಲಿಯೇ ಎಂಬುದು ಅಪ್ಪಟ ಸತ್ಯ.ಹೀಗೆ ಮಠದ ಪೀಠಾಧಿಪತಿಗಳಾಗಿ ಶ್ರೇಷ್ಠ ಕಾರ್ಯಸಾಧನೆಯಲ್ಲಿ ನೂತನ ಇತಿಹಾಸವನ್ನೇ ಸೃಷ್ಟಿಸಿದವರು ಇತಿಹಾಸದೆಡೆಗೆ ತೋರಿಸುತ್ತಿರುವ ಪ್ರೀತಿ ನಿಜಕ್ಕೂ ಮಾದರಿಯೇ ಸರಿ.
ಲೇಖಕರು – ಡಾ.ಲಕ್ಷ್ಮೀಶ್ ಸೋಂದಾ
( ಇತಿಹಾಸಕಾರರು ಮತ್ತು ಸದಸ್ಯರು ನ್ಯಾಶನಲ್ ಫೆಲೋಶಿಪ್ ಕಮಿಟಿ ದೆಹಲಿ)
ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ