ಕಲಸೇ ಗುರುಗಳನ್ನು ಅರಿತುಕೊಳ್ಳುವುದು ಸುಲಭದ ವಿಷಯವಲ್ಲ. ಅವರ ಪವಾಡಗಳೂ ಅಷ್ಟೇ ವಿಶೇಷ. ನನ್ನ ಅನುಭವಕ್ಕೆ ಬಂದ ಕೆಲವು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ .ಕೇವಲ ಅವರು ದೇಹದೊಳಗೆ ಇರುವಾಗಲೊಂದೇ ಅಲ್ಲ, ದೇಹ ತ್ಯಜಿಸಿದ ನಂತರವೂ ಅವರ ಪವಾಡ ನಿಂತಿಲ್ಲ. ಅದರಲ್ಲಿ ಕೆಲವೇ ಕೆಲವನ್ನು ಹೇಳಿಕೊಳ್ಳುತ್ತೇನೆ. ಅವರ ಒಂದು ಕಣ್ಣಿನ ದೃಷ್ಟಿ ಕಾಣುತ್ತಿರಲಿಲ್ಲ ಎಂಬುದು. ಅದಕ್ಕೂ ಒಂದು ಕಾರಣವಿದೆ, ಅವರ ಅಸಾಧ್ಯ ಸಾಧನೆಯಿದೆ. ನಾವೇನೋ ಸೂರ್ಯನಮಸ್ಕಾರವೆಂದರೆ ಹನ್ನೆರಡು ಆಸನಗಳನ್ನೋ ಅಥವಾ ಉದ್ದಂಡ ಪ್ರಣಾಮವನ್ನೋ ಮಾಡಿ ಸೂರ್ಯ ನಮಸ್ಕಾರ ಮಾಡುತ್ತೇವೆ. ಆದರೆ ಕಲಸೇ ಗುರುಗಳ ಕಠೋರ ಸೂರ್ಯನಮಸ್ಕಾರವೊಂದಿದೆ, ಹೇಗೆ ಗೊತ್ತೇ? ಅದೇ ಅಬ್ಬ ಎಂದು ಹುಬ್ಬೇರಿಸುವಂಥದ್ದು. ನೇರ ದೃಷ್ಟಿ, ಬರಿಗಣ್ಣಿನಿಂದ ಕೆಲಕಾಲ ಅಂದರೆ 10 ನಿಮಿಷವೂ ಆಗಬಹುದು ಅರ್ಧ ಗಂಟೆಯಾದರೂ ಆಗಬಹುದು, ಸೂರ್ಯನನ್ನು ದಿಟ್ಟಿಸಿ ನೋಡಿ ದಂಡವತ್ಪ್ರಣಾಮ ಮಾಡುವುದು. ಅರುಣಕಿರಣಗಳನ್ನೇ ನೋಡಲಾರದ ನಾವು ಆ ತೇಜಃಪುಂಜವನ್ನು ನೋಡುವ ಸಾಧಕರ ಬಗ್ಗೆ ಹೇಳುವುದೇನು
ಅನುಷ್ಠಾನವೆಂಬುದು ತಮಾಷೆಗಲ್ಲ. ತಮಾಷೆ ಮಾಡುವವರ ಹುಟ್ಟಡಗಿಸುವಂಥಹ ಅನುಷ್ಠಾನ ನಮ್ಮ ಕಲಸೇ ಗುರುಗಳದು. ಒಂದುತಾಸು ಸರಿಯಾಗಿ ಕುಳಿತುಕೊಳ್ಳಲೂ ಅಸಾಧ್ಯರು ನಾವು, ಆದರೆ ಮನಸ್ಸು ತೃಪ್ತವಾಗುವವರೆಗೂ ಏಳದ ಅನುಷ್ಠಾನಿಕರು ಗುರುಗಳು. ಹಠಯೋಗದ ಅತಿಹಠ ಸಾಧಕರು. ಖೇಚರಿ ಅಥವಾ ಲಂಬಿಕಾ ವಿದ್ಯೆಯ ಮಹಾಸಾಧಕರು ಅವರು. ನಾನು ಕೇಳಿರುವಂತೆ ಸುಮಾರು ಮೂರು ದಶಕಗಳಿಗೂ ಹೆಚ್ಚುಕಾಲ ಅನ್ನವನ್ನು ತ್ಯಜಿಸಿದ ಪ್ರತ್ಯಾಹಾರಿಗಳು. ಕೇವಲ ಹಸಿ ಶೇಂಗ ಹಾಗೂ ನೀರನ್ನು ಕುಡಿದು ತಪವನ್ನಾಚರಿಸಿದವರು.
ಪರರ ವಸ್ತು ಪಾಶಾಣಕ್ಕೆ ಸಮ ಎಂಬ ಮಾತು ಕೇಳಿರಬೇಕು. ಗುರುಗಳ ವಿಷಯದಲ್ಲಿ ಆ ಕುರಿತು ಹೇಳುವುದಾದರೆ ನನಗೆ ಯಾರೋ ಹೇಳಿದ ವಿಷಯ ಇದು ಅದನ್ನೆ ಹೇಳುತ್ತೇನೆ. ಗುರುಗಳುಗೆ ಯಾರೋ ಒಬ್ಬರು ಸವಾರಿಗೆ ಹೋಗುವಾಗ ಅವರ ದೇವರನ್ನೆಲ್ಲ ಇಟ್ಟುಕೊಂಡು ಹೋಗುವುದಕ್ಕೆ ಒಂದು ಕಬ್ಬಿಣದ ಟ್ರಂಕ ಕೊಟ್ಟರಂತೆ. ಇದು ನನ್ನ ಸೇವೆ ಎಂದು ಅವರು ಕೊಟ್ಟರೂ ಕೇಳದ ಗುರುಗಳು ಈ ಋಣ ನನ್‌ನಮೇಲಿರಬಾರದು ಎಂದು ಮುಂದೊಂದು ದಿನ ಕೊಟ್ಟವರ ಅನಾರೋಗ್ಯ ಸಂದರ್ಭದಲ್ಲಿ ಅವರ ಕುರಿತು ಹಲವುದಿನ ಜಪ ಮಾಡಿ ಅವರ ಅನಾರೋಗ್ಯವನ್ನು ಶಮನಗೊಳಿಸಿದ್ದರಂತೆ.
ಮರಣದಲ್ಲೇ ಉತ್ಕೃಷ್ಟ ಮರಣವೆಂದು ಪರಿಗಣಿಸಲ್ಪಟ್ಟಿದೆ ಇಚ್ಛಾಮರಣ. ನಮ್ಮ ಗುರುಗಳು ಇಚ್ಛಾಮರಣಿಗಳು ಎಂಬುದಕ್ಕೆ ಸಾಕ್ಷಾತ್ ನನ್ನ ಕಣ್ಣೆದುರೇ ನಡೆದ ಘಟನೆ ಒಂದಾದರೆ ನನ್ನನ್ನು ಉದ್ದೇಶಿಸಿ ನಡೆದ ಘಟನೆ ಮತ್ತೊಂದು. ಪೂಜ್ಯ ಗುರುಗಳು ದೇಹ ತ್ಯಜಿಸುವ ಎರಡುದಿನ ಮೊದಲು ಅಂದರೆ ತ್ರಯೋದಶಿಯ ದಿನ ನಡೆದ ಒಂದು ಘಟನೆ. ನಾನು ಪಾಠಶಾಲೆಯ ವಿದ್ಯಾರ್ಥಿ ಹಾಗೂ ಮೊದಲು ಸಂವತ್ಸರಗಳಕಾಲ ಅವರ ಸೇವಾಭಾಗ್ಯ ಪಡೆದವನು. ನನ್ನ ಒಂದು ರೂಢಿ ಎಂದರೆ ನಾನು ಅನಧ್ಯಯನಕ್ಕೆ ಮನೆಗೆ ಹೋಗುವುದಾದರೆ ಕಲಸೇ ಗುರುಗಳ ಬಳಿ ಹೇಳಿ ಹೋಗುವ ಪದ್ದತಿ. ಆಸಲವೂ ಹೋಗಿ ಹೇಳಿದೆ ಗುರುಗಳೆ ಮನೆಗೆ ಹೋಗಿಬರುತ್ತೇನೆ. ಅದಕ್ಕೆ ಅವರು ” ಈಸರಿ ನೀನು ಮನೆಗೆ ಹೋಪದು ಬ್ಯಾಡ, ಹುಣ್ಣಮೆ ಸ್ನಾನ ಮಾಡ್ಸವು. ಈಗ(ಸೇವೆಗೆ) ಇದ್ದವು ಹೊಸಬ್ರು ಗೊತ್ತಾಗ್ತಿಲ್ಲೆ ಅವ್ಕೆ. ಈಸರಿ ಹುಣ್ಣಮೆ ಸ್ನಾನ ವಿಶೇಷ ಇದ್ದು, ಹೋಗಡಾ ನೀನು” ಸರಿ ಗುರುಗಳ ಆದೇಶ ಮಠದಲ್ಲೇ ಉಳಿದೆ. ಚತುರ್ದಶಿಯ ದಿನ ರಾತ್ರಿ ಅವರ ರೂಮಿನಲ್ಲೇ ಹೋಗಿ ಮಲಗಿದೆ. ಆದರೆ ಬೆಳಿಗ್ಗೆ ನಡೆದದ್ದೇ ಬೇರೆ😢😢
ಮತ್ತೊಂದು ಘಟನೆ ನನ್ನೆದುರಲ್ಲಿ ಚತುರ್ದಶಿಯ ದಿನ ನಡೆದದ್ದು. ದೇಹ ತ್ಯಜಿಸಲು ಆತ್ಮಕ್ಕೆ ಏನಾದರೊಂದು ಕಾರಣ ಬೇಕಂತೆ. ಅದಕ್ಕೆ ಪೂರಕವೆಂಬಂತೆ ಸಾಯಂಕಾಲದ ಸಮಯ ಇನ್ನೂ ಬಿಸಿಲು ಭೂತಳ ಸೇರಿರಲಿಲ್ಲ. ಚಳಿಕಾಯಿಸಿಕೊಳ್ಳಲು ಗುರುಗಳು ಕ್ಷೇತ್ರಪಾಲ ಗುಡಿಯ ಹತ್ತಿರ ಬಿಸಿಲಲ್ಲಿ ಕುಳಿತಿದ್ದರು. ಅನಾರೋಗ್ಯವೆಂಬಂತೆ ಸ್ವಲ್ಪ ಕೆಮ್ಮು, ಕಫ ಆಗಿತ್ತು ಗುರುಗಳಿಗೆ. ಆ ಸಮಯದಲ್ಲಿ ಬಂದ ಮಠದ ವ್ಯವಸ್ಥಾಪಕರು ಗುರುಗಳೇ ಔಷಧ ಸೇವಿಸಿ ಕಡಿಮೆ ಆಗುತ್ತದೆ ಎಂದರು. ಅದಕ್ಕೆ ಗುರುಗಳು “ನೋಡನ ನಾಳೆ ಸೂರ್ಯೋದಯ ನೋಡದ್ರೆ ಔಷಧಿ ತಗತ್ತಿ” ಎಂದು ಹೇಳಿದ್ದರು. ಮಂದಬುದ್ಧಿಯ ನಮಗೆಲ್ಲಿ ತಿಳಿಯಬೇಕು ಅಲ್ಲವೆ. ಈ ಎರಡೂ ಘಟನೆಯಲ್ಲಿ ಅವರು ಹೇಳಿದ್ದು ಒಂದೇ, ಅದೇ ನಾನು ಪೌರ್ಣಮಿಯ ಬ್ರಾಹ್ಮೀಮುಹೂರ್ತದಲ್ಲಿ ದೇಹ ತ್ಯಜಿಸುತ್ತೇನೆ ಎಂದು. ಆದರೆ ನಮಗದು ಅರ್ಥವಾಗಲೇ ಇಲ್ಲ. ಪೌರ್ಣಮೀ ಪ್ರಾತಃಕಾಲ ಸುಮಾರು 5.15 ರ ಸಮಯ. ನನ್ನ ಜೊತೆಯಲ್ಲೇ ಆಗತಾನೇ ಅವರ ಸೇವೆಗೆ ಸೇರಿದ ವಿದ್ಯಾರ್ಥಿ. ಸುಬ್ಬಣ್ಣ ಸುಬ್ಬಣ್ಣ ಗುರುಗಳು ಮಾತನಾಡುತ್ತಿಲ್ಲ ಬಾ ನೋಡು ಎಂದ. ನಾನು ಹೋಗಿ ನೋಡಿದೆ. ಯಾಕೋ ಎದೆಬಡಿತ ಹೆಚ್ಚಾಗಿತ್ತು. ಜವಾಬ್ದಾರಿಯೂ ಇತ್ತು. ಏನೇನೋ ಹೇಳುವಂತೆಯೂ, ಬೇರೆಯವರನ್ನು ಗಾಬರಿಪಡಿಸುವಂತೆಯೂ ಇರಲಿಲ್ಲ. ಗುರುಗಳನ್ನು ಕರೆದೆ ಇಲ್ಲ. ಕೈ ನಡುಗುತ್ತಿತ್ತು. ಹೇಗೋ ಸಾವರಿಸಿಕೊಂಡು ಅವರ ಬಟ್ಟೆಯ ಒಂದು ದಾರ ತೆಗೆದು ಅವರ ಮೂಗಿನ ಬಳಿ ಹಿಡಿದೆ. ದಾರ ಸ್ಥಿರವಾಗಿಯೇ ಇತ್ತು. ಆ ಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯದೆ ಮಠದ ಕಾರ್ಯಾಲಯ ಸಿಬ್ಬಂಧಿಯೋರ್ವರಿಗೆ ಬರಹೇಳಿ ಕಳಿಸಿದೆ. ನಾನು ಗುರುಗಳ ಬಳಿಯೇ ಕುಳಿತೆ. ಅವರು ಬಂದವರು ನನಗೆ ಯಾಕೋ ಅನುಮಾನವಿದೆ ಎಂದವರೇ ಗುರುಗಳನ್ನು ಪದ್ಮಾಸನದಲ್ಲಿ ಕುಳ್ಳಿರಿಸಿದರು. ಆದರೆ ನಮ್ಮ ದುರದೃಷ್ಟವೇ ಸರಿ ಮುಂದೆ ಸದೇಹಿಗಳಾಗಿ ನಾವು ಅವರನ್ನು ನೋಡುವ ಭಾಗ್ಯವನ್ನು ಕಳೆದುಕೊಂಡಿದ್ದೆವು. ಆದರೆ ಸೇವೆ ಮಾಡಿದ ಪುಣ್ಯಫಲದಿಂದ ದೇಹತ್ಯಾಗದ ಆ ಸಂದರ್ಭದಲ್ಲಿ ಮತ್ತಾರಿಗೂ ಸಿಗದ ಮಹಾ ಭಾಗ್ಯ, ಅವರ ಸನ್ನಿಧಾನದಲ್ಲೇ ಇರುವ ಭಾಗ್ಯ ನನಗೆ ಲಭಿಸಿತ್ತು. ಅವರೇ ನೀನು ಮನೆಗೆ ಹೋಗಬೇಡ ಎಂದು ಅವರ ಬಳಿಯೇ ನನ್ನನ್ನು ಉಳಿಸಿಕೊಂಡಿದ್ದು ನನ್ನ ಪುಣ್ಯ ಫಲವೇ ಸರಿ.
ದೇಹತ್ಯಾಗದ ನಂತರ ನಡೆದ ಎರಡು ಘಟನೆ. ಚಿಕ್ಕದಾಗಿ ಹೇಳಿ ಮುಗಿಸುತ್ತೇನೆ. ದೇಹತ್ಯಾಗ ಅಲ್ಲಿಂದ ಮೃತ್ತಿಕಾ ಲಿಂಗ ಇತ್ಯಾದಿ ಶಾಸ್ತ್ರೋಕ್ತ ವಿಧಾನಗಳೇನೋ ನಡೆದವು. ಆದರೆ ಅವರ ಇಚ್ಛೆಯಂತೆ ಶಿಷ್ಯರೇ ತನ್ನ ಸಮಾಧಿ ಮಂದಿರವನ್ನು ನಿರ್ಮಿಸಬೇಕು ಹಾಗೂ ಅದರಲ್ಲಿ ತಾನು ಸಾಕ್ಷಾತ್ತಾಗಿದ್ದು ಭಕ್ತರ ಇಚ್ಛೆಗಳನ್ನು ನೆರವೇರಿಸುತ್ತೇನೆ ಎಂದಿದ್ದರು. ಸಮಾಧಿ ಮಂದಿರ ಕಟ್ಟಡಕ್ಕೆ ಹಣದ ಅಭಾವ. ಒಂದುದಿನ ನನ್ನ ಕನಸಿನಲ್ಲಿ ಗುರುಗಳು ಕೋಪೀನ ಧಾರಿಗಳಾಗಿ ದಂಡ ಹಿಡಿದು ಎತ್ತರದ ಜಾಗದಲಿ ನಿಂತು ಕೆಳಗಿರುವ ನನ್ನನ್ನು ಕರೆದು ಶಿಷ್ಯರೊಬ್ಬರು ಹಣ ಕೊಡುತ್ತಿದ್ದಾರೆ ಎಂದು ಹೇಳಿದಂತಾಯಿತು. ನಿದ್ದೆಯಿಂದ ಎದ್ದವನೇ ಮಠದ ಸಿಬ್ಬಂದಿ ರಾಘಣ್ಣನ ಬಳಿ ಕನಸಿನ ವೃತ್ತಾಂತ ಹೇಳಿದೆ. ಅವನು ನೋಡೋಣ ಇದು ಗುರುಗಳ ಸೂಚನೆ ಇದ್ದರೂ ಇರಬಹುದು ಎಂದ. ನಾವು ಅಲ್ಲಿಗೆ ಆ ವಿಷಯವನ್ನು ಬಿಟ್ಟೆವು. ಆದರೆ ರಾಘಣ್ಣ ಕೆಲದಿನಗಳ ನಂತರ ಗುರುಗಳ ಸಮಾಧಿ ಮಂದಿರ ನಿರ್ಮಾಣಕ್ಕಾಗಿ ಯಾರೋ ಅಷ್ಟು ಹಣ ಸಲ್ಲಿಸಿದ್ದಾರೆ ಎಂಬ ಮಾತನ್ನು ಹೇಳಿದ. ಆಗ ನನಗೆ ಅನಿಸಿದ್ದು, ಗುರುಗಳು ನನ್ನ ಕನಸಿನಲ್ಲಿ ಇದನ್ನೇ ಹೇಳಿರಬೇಕು ಎಂದು. ಮತ್ತೊಂದು ಘಟನೆ. ಮಠದ ಹೊಸ ಕಟ್ಟಡ ಗುತ್ತಿಗೆದಾರರಿಗೆ ಹಣದ ವಿಷಯದಲ್ಲಿ ತೊಡಕಾಗಿತ್ತು. ಕಲಸೆ ಗುರುಗಳ ಸಮಾಧಿ ಮಂದಿರಕ್ಕೆ ಹೋಗಿ ಕಾಯಿ ಇಟ್ಟು ಪ್ರಾರ್ಥಿಸಿಕೊಂಡಿದ್ದರು ಅವರು. ಕೆಲ ದಿನಗಳಲ್ಲಿ ಅವರ ಹಣದ ಸಮಸ್ಯೆ ಬಹುತೇಕ ಪರಿಹಾರವಾಯಿತೆಂದು ಹೇಳಿದ್ದು ಕೇಳಿದ್ದೇನೆ.
ಹೀಗೆ ಕಲಸೀ ಸ್ವಾಮಿಗಳ ಕೃಪಾಶೀರ್ವಾದಕ್ಕೆ ನಾನು ಪಾತ್ರನಾಗಿದ್ದೇನೆ. ಎಂಬುದು ನನ್ನ ಭಾಗ್ಯವೇ ಸರಿ. ಶಿಷ್ಯಹಿತ ನಿರತಂ ಸದ್ಗುರುಂ ನಮಾಮಿ.
✍️ ಶ್ರೀ ಸುಬ್ರಹ್ಮಣ್ಯ ಜೋಶಿ ಕೋಡಿಗಾರ್