ಕಲಸೀಸದ್ಗುರು…! ಖೇಚರೀಯೋಗಿ…!

posted in: Articles | 0

ಪ್ರಪಂಚವೇ ಹಾಗೆ ಕೆಲವು ಸುವರ್ಣಕ್ಷಣಗಳು ಗತಿಸಿಹೋದಮೇಲೆ ನಾವು ಚಿಂತಿಸುತ್ತಾ ಬೇಸರಿಸುತ್ತೇವೆ, ನಮ್ಮಿಂದ ಸುವರ್ಣಘಳಿಗೆಯೊಂದು ಕೈತಪ್ಪಿ ಹೋಯಿತಲ್ಲ.. ! ಎಂದು. ಜೀವನದಲ್ಲಿ ಕೆಲವೊಮ್ಮೆ ಮಾತ್ರ ಘಟಿಸುವ ಮಹಾಪುರುಷರ ಸಮಾಗಮವೂ ಅದೇ ರೀತಿಯದ್ದು. ಅವರ ಸಮೀಪದಲ್ಲಿರುವಾಗ ಅವರ ಘನತೆ, ತಪೋಬಲವನ್ನು ನಾವು ಅರಿಯದೇ ಅವರ ಸಾಮೀಪ್ಯದಿಂದ ದೂರವಾದಮೇಲೆ ಅವರ ವರ್ಚಸ್ಸು ಗಮನಕ್ಕೆ ಬರುತ್ತದೆ. ಆದರೆ ಸಮಯ ಕಳೆದುಹೋಗಿರುತ್ತದೆ. ಆದ್ದರಿಂದ ಮಹಾತ್ಮರ ಸಾನ್ನಿಧ್ಯ ಸಿಕ್ಕಿದಾಗ ನಾವು ಪೂರ್ಣವಾಗಿ ಅಂತಹ ಮಹನೀಯರಿಗೆ ಅರ್ಪಿತವಾಗಬೇಕು. ಇಲ್ಲಿ ಇನ್ನೊಂದು ವಿಶೇಷವಿದೆ. ಕಲವು ವ್ಯಕ್ತಿಗಳು ತಾವು ಮಹಾತ್ಮರು ಎಂಬ ವಿಷಯವನ್ನು ತೋರ್ಪಡಿಸುವುದೇ ಇಲ್ಲ. ಅಂತಹ ಮಹಾತ್ಮರ ಸಾಮೀಪ್ಯದಿಂದ ಅರ್ಜಿತವಾದ ಪುಣ್ಯವಿಶೇಷ ನಮ್ಮ ಜೀವನದಲ್ಲಿ ಯಾವುದೋ ಕಾಲಘಟ್ಟದಲ್ಲಿ ಮಹತ್ತಾದ ಫಲ ಕೊಡುವ ಸನ್ನಿವೇಶಗಳೂ ಇವೆ

                ತಮ್ಮನ್ನು ತಾವು ಪ್ರಕಟಪಡಿಸಿಕೊಳ್ಳುವ ವಿಷಯದಲ್ಲಿ ಅಷ್ಟಾಗಿ ಆಸಕ್ತಿ ತೋರದೇ, ಶಿಷ್ಯ-ಭಕ್ತರ ಮಹಾಸಮಸ್ಯೆಗಳನ್ನು ಪರಿಹಾರ ಪಡಿಸುತ್ತಾ, ಅನೇಕ ಜನರ ಜೀವನದ ಜೀವನಾಡಿಯಾಗಿದ್ದವರು ಶ್ರೀ ನೃಸಿಂಹಾನಂದ ಸರಸ್ವತೀ ಸ್ವಾಮಿಗಳು. ತಮ್ಮ ಪೂರ್ವಾಶ್ರಮದಲ್ಲಿ ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಲಸಿ ಊರಿನವರಾದ ಇವರು “ಕಲಸಿ ಸ್ವಾಮಿಗಳು” ಎಂದೇ ಪ್ರಸಿದ್ಧರು. 

                 ಕಲಸೀ ಸ್ವಾಮಿಗಳು ಎಂದರೆ ಜೀರ್ಣಾವಸ್ಥೆಗೆ ತಲುಪಿದ ಶರೀರ. ಪುಟ್ಟ ಮಗುವಿನಂತೆಯೇ ಅವರ ಭಾವ. ಅವರ ವಿಶ್ರಾಂತಿ ಹಾಗೂ ಅನುಷ್ಠಾನಕ್ಕೆ ಸಮಯದ ನಿರ್ಬಂಧವೇ ಇಲ್ಲ. ಅವರ ಶರೀರ ಅಸ್ತಮಾನಕ್ಕೆ ಸಿದ್ಧನಾದ ಸೂರ್ಯನಂತೆ ಕ್ಷೀಣಾವಸ್ಥೆಯಲ್ಲಿಯೂ ತೇಜಸ್ಸಿನಿಂದ ಕಂಗೊಳಿಸುತ್ತಿತ್ತು. ಅದೆಷ್ಟು ವತ್ಸರಗಳು ಅವರು ತಣ್ಣೀರ ಸ್ನಾನ ಮಾಡಿದ್ದಾರೋ ಗೊತ್ತಿಲ್ಲ…! ಅಂತೂ ನಾನು ನೋಡುವಾಗ ಅವರಿಗೆ ನೀರು ಬಿಸಿ ಇದ್ದಷ್ಟು ಕಡಿಮೆಯೇ… ಇದು ಅತ್ಯಂತ ಆಶ್ಚರ್ಯಕರ ವಿಷಯಗಳಲ್ಲೊಂದು. ಕೊತ ಕೊತ ಕುದಿಯುತ್ತಿರುವ ನೀರನ್ನು ಅವರ ತಾಮ್ರದ ತಂಬಿಗೆಗೆ ನಾವು ಹಾಕಬೇಕು ಅದನ್ನು ಎತ್ತಿ ಅವರು ಸ್ನಾನ ಮಾಡುತ್ತಿದ್ದರು. ಆ ಬಿಸಿನೀರನ್ನು ನಮ್ಮಿಂದ ಮುಟ್ಟಲೂ ಅಸಾಧ್ಯ.. ಅದಕ್ಕೆ ಒಂದು ತಂಬಿಗೆ ತಣ್ಣಿರೂ ಸೇರಿದರೂ ಕೈಸನ್ನೆಯಿಂದಲೇ ಹೊಗೆ ಬರುತ್ತಿರುವ ಬಿಸಿನೀರ ಬಕೇಟ್ ತೋರಿಸುತ್ತಿದ್ದರು. ಅಷ್ಟು ಬಿಸಿ ಬಿಸಿ ಕುದಿಯುವ ನೀರನ್ನು ಸ್ನಾನಮಾಡಿದ ಮೇಲೂ ಪುನಃ ಅನಷ್ಠಾನಕ್ಕೆ ಬಂದು ಕುಳಿತಾಗ ಅವರ ಪಕ್ಕದಲ್ಲಿ ಹೀಟರ್ ಇಡಬೇಕು. ಈ ಎಲ್ಲ ಸನ್ನಿವೇಶಗಳು ಅವರ ಎಂಭತ್ತೈದರ ವಯಸ್ಸಿನ ಆಸಪಾಸಿನಲ್ಲಿ. ಅವರ ಶರೀರ ಅಷ್ಟು ಯೋಗಸಾಧನೆಯಿಂದ ಪರಿಪಕ್ವಗೊಂಡಿತ್ತು. ಅವರಿಗೆ ಒಂದೇ ಕಣ್ಣು ಸರಿಯಾದ ದೃಷ್ಟಿ ಹೊಂದಿತ್ತು.. ಆದರೆ ಅವರ ದೃಷ್ಟಿಯ ಸೂಕ್ಷ್ಮ..! ಅಬ್ಬಾ ಅದನ್ನು ನೆನಪಿಸಿಕೊಂಡರೇ ಮೈ ರೋಮಾಂಚನವಾಗತ್ತದೆ. ಒಮ್ಮೆ ಗುರುಗಳು ಸ್ನಾನಮಾಡಿಕೊಂಡು ಬರುತ್ತಿದ್ದಾರೆ. ಅವರ ಪರಿಚಾರಕ ಅವರ ಹಿಂದಿನಿಂದಲೇ ಬರುತ್ತಿದ್ದಾನೆ. ಆಗ ಗುರು ಯಾಕೋ ಏನೋ ಅಲ್ಲಿಯೇ ಒಮ್ಮೆ ನಿಂತರು. ಏನೋ ಕಣ್ ಸನ್ನೆ ಮಾಡಿದರು. ಆ ಪರಿಚಾರಕನಿಗೆ ಅರ್ಥವಾಗಲಿಲ್ಲ. ಅವನ ಮುಖ ನೋಡಿದವರೇ ಸ್ವಲ್ಪ ಸಿಟ್ಟುಗೊಂಡ ತಮ್ಮ ಕೈಯ್ಯಲ್ಲಿದ್ದ ಕಮಂಡಲುವಿನಿಂದ ಒಂದು ಹನಿ ನೀರನ್ನು ನೆಲದ ಮೇಲೆ ಹಾಕಿ ಮುಂದೆ ನಡೆದರು. ನಾನು ಅನಂತರ ಕುತೂಹಲದಿಂದ ಕೇಳಿದೆ. ಆಗ ಅದಕ್ಕೆ ಆ ಪರಿಚಾರಕ ಉತ್ತರಿಸಿದ ಅಲ್ಲೊಂದು ನೂಲು ಬಿದ್ದಿದೆ. ಅದು ನನಗೆ ಕಾಣಲಿಲ್ಲ. ಅದು ಮೈಲಿಗೆ ಆದ್ದರಿಂದ ಅದರ ಮೇಲೆ ಗುರುಗಳು ನೀರು ಚೆಲ್ಲಿದರು ಎಂದು. 

          ಗುರುಗಳ ಆಹಾರದ ಬಗ್ಗೆ ಹೇಳಲೇ ಬೇಕು. ಅವರ ಆಹಾರ ಗೋದಿಹಿಟ್ಟು. ಗೋದಿಹಿಟ್ಟಿನಲ್ ಜೊತೆ ಬಾಳೇಹಣ್ಣು ಸೇರಿಸಿ ಮಾಡಿದ ದೋಸೆಯಂತಹ ಪದಾರ್ಥವೇ ಅವರ ಆಹಾರ. ಅದನ್ನೇ ಆಹಾರವಾಗಿಸಿಕೊಂಡು ಉಳಿದ ಆಹಾರವನ್ನು ಬಿಟ್ಟು ಅದೆಷ್ಟು ವರ್ಷಗಳಾಗಿದ್ದವೋ ಗೊತ್ತಿಲ್ಲ. ಅಷ್ಟು ಆಹಾರ ತೆಗೆದುಕೊಳ್ಳತ್ತಿದ್ದರೂ ಸಹ ಆಯಾಸವಾಗಿ ಅಶಕ್ತತೆಯಾಗಿದ್ದು ಬಹಳ ಕಡಿಮೆ. 

           ಗುರುಗಳು ಮಹಾನ್ ಯೋಗಸಾಧಕರು. ಹಠಯೋಗವೇ ಮೊದಲಾದ ಯೋಗಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಾದ ಒಂದು ವಿಶಿಷ್ಠ ಮುದ್ರೆ “ಖೇಚರೀ”. ಅದನ್ನು ಯೋಗಗ್ರಂಥಗಳು ಸುಂದರವಾಗಿ ವಿವರಿಸಿವೆ.

      ಕಪಾಲಕುಹರೇ ಜಿಹ್ವಾ ಪ್ರವಿಷ್ಟಾ ವಿಪರೀಗತಾ।

      ಧ್ಯಾನಂ ಭ್ರೂಮಧ್ಯದೇಶೇ ಚ ಮುದ್ರಾ ಭವತಿ ಖೇಚರೀ।। 

   ಖೇಚರೀಯೋಗತೋ ಯೋಗೀ ಶಿರಶ್ಚಂದ್ರಾದುಪಾಗತಮ್। 

    ರಸಂದಿವ್ಯಂ ಪಿಬೇನ್ನಿತ್ಯಂ ಸರ್ವವ್ಯಾದಿನಿವಾರಣಮ್।। 

ಅಂದರೇ ನಾಲಿಗೆಯನ್ನು ಕಿರುನಾಲಿಗೆಯ ಹಿಂಭಾಗಕ್ಕೆ ತಾಗಿಸಿಇಟ್ಟು ಭ್ರೂಮಧ್ಯದಲ್ಲಿ ದೃಷ್ಟಿಯಿಟ್ಟು ಧ್ಯಾನಮಾಡಿದರೆ ಅದನ್ನು ಖೇಚರೀ ಮುದ್ರೆ ಎಂದು ಕರೆಯುತ್ತಾರೆ. ಯಾರು ಖೇಚರೀ ಮುದ್ರೆಯ ನಿರಂತರ ಅಭ್ಯಾಸದಿಂದ ಸಹಸ್ರಾದಲ್ಲಿ ಲಯಗೊಳ್ಳುವ ಚಂದ್ರನಾಡಿಯಿಂದ ನಿರಂತರವಾಗಿ ಪ್ರವಹಿಸುವ ದಿವ್ಯವಾದ ರಸವನ್ನು ಕುಡಿಯುತ್ತಾರೋ ಅವರಿಗೆ ಯಾವ ರೋಗಬಾಧೆಯೂ ಇಲ್ಲ ಎಂಬುದು ಶಾಸ್ತ್ರವಾಕ್ಯ. ಇಂತಹ ವಿಶಿಷ್ಟವಾದ ಯೋಗಸಿದ್ಧಿಯನ್ನು ಪಡೆದ ಕಲಸಿ ಸ್ವಾಮಿಗಳು “ಖೇಚರೀ ಯೋಗಿಗಳು” ಎಂದೇ ಪ್ರಸಿದ್ಧರು. ಭಾರತದ ಹಲವು ಸನ್ಯಾಸಿಗಳಿಗೆ, ಸಂತರಿಗೆ, ಯೋಗಸಾಧಕರಿಗೆ, ಅನೇಕ ಪೀಠಾಧಿಪತಿಗಳಿಗೆ ಈ ಖೇಚರೀ ವಿದ್ಯೆಯನ್ನು ಉಪದೇಶಿಸಿ ಅವರಿಗೆ ಆ ಯೋಗಸಾಧನೆಯ ದಿವ್ಯಾನುಭೂತಿಯನ್ನು ತೋರಿಸಿದ ಮಹಾಪುರುಷರು. ಈ ವಿದ್ಯೆ ಸರಳವಾಗಿ ಸಿದ್ಧಿಸುವುದಲ್ಲ. ಸಮರ್ಥಗುರುವಿನಿಂದ ಉಪದೇಶ ಪಡೆದು ಸಾಧಿಸಿದರೆ ಮಾತ್ರ ಸಿದ್ಧಿಸಲು ಸಾಧ್ಯ.. ಅದಲ್ಲದಿದ್ದರೆ ಪ್ರಾಣಕ್ಕೂ ಕುತ್ತು ಬರಬಹುದು. ಅಂತಹ ವಿದ್ಯೆಯನ್ನು ಸಾಧಸಿದ ಮಹಾನ್ ಯೋಗಿಗಳು ಕಲಸೀ ಶ್ರೀಗಳು. 

               “ಶರಣರ ಗುಣವನ್ನು ಮರಣದಲ್ಲಿ ಕಾಣು” ಎಂಬ ನಾಣ್ನುಡಿಯ ಸಾಕಾರ ಸ್ವರೂಪವನ್ನು ಸಾಕ್ಷಾತ್ತಾಗಿ ಕಂಡವರು ನಾವು. ಪುಷ್ಯಮಾಸದ ಶುಕ್ಲಪಕ್ಷ.. ಶ್ರೀಸ್ವರ್ಣವಲ್ಲೀ ಶ್ರೀಶ್ರೀಗಳ ಸವಾರಿ ಮಾರನೇ ದಿನ ಮೈಸೂರಿಗೆ ಹೊರಟಿತ್ತು. ಆ ದಿನ ಏಕಾದಶಿ.. ಶ್ರೀಗಳ ಮೌನ. ಅದೇ ರಾತ್ರಿ ಕಲಸಿ ಸ್ವಾಮಿಗಳ ಆಗ್ರಹ. ಒಮ್ಮೆ ಶ್ರೀಗಳ ಜೊತೆಗೆ ಮಾತನಾಡಬೇಕು ಎಂಬ ಬಯಕೆ. ಆ ದಿನ ರಾತ್ರಿ ಪೂಜೆ ಮುಗಿದ ನಂತರ ಮೌನ ವ್ರತ ಪೂರ್ಣಗೊಳಿಸಿ ನೇರ ಶ್ರೀಗಳು “ಶ್ರೀನಿವಾಸ”(ಕಲಸಿ ಸ್ವಾಮಿಗಳ ನಿವಾಸ) ಕ್ಕೆ ಆಗಮಿಸಿದರು. ಕಲಸಿ ಸ್ವಾಮಿಗಳು ಶ್ರೀಗಳಲ್ಲಿ ಕೇಳಿದ ಮಾತು ಒಂದೇ.. “ನಮ್ಮ ಸಮಾಧಿಗೆ ಸ್ಥಳ ಯಾವುದು? ಸ್ವಲ್ಪ ಹೆಚ್ಚು ಅವಕಾಶ ಇರಬೇಕು ಯಾರಾದರೂ ಶಿಷ್ಯರು ಬಂದರೆ ಅವರಿಗೆ ಧ್ಯಾನ ಮಾಡಲು ಧ್ಯಾನ ಮಂದಿರ ಬೇಕು.ಯಾವ ಪ್ರದೇಶ ಕೊಡುವಿರಿ?” ಅದಕ್ಕೆ ಶ್ರೀಸ್ವರ್ಣವಲ್ಲೀ ಶ್ರೀ ಶ್ರೀಗಳು ನಗುತ್ತ… “ಈ ಮಠದ ಜಾಗ ಎಲ್ಲ ನಿಮ್ಮದೇ.. ಎಲ್ಲಿ ಎಷ್ಟು ಬೇಕಾದರು ತೆಗೆದುಕೊಳ್ಳಿ”. ಎಂದರು. ಅದಕ್ಕೆ “ಅಲ್ಲಿ ಮೇಲಿನ ಗುರುಮೂರ್ತಿ ಮನೆಯ ಹತ್ತಿರ ಸ್ವಲ್ಪ ಜಾಗ ಸಾಕು”. ಎಂದು ನುಡಿದರು. ಅದಾದಮೇಲೆ ಸುಮಾರು ಅರ್ಧಗಂಟೆ ಕಲಸಿ ಶ್ರೀಗಳು ಹಾಗೂ ಶ್ರೀಸ್ವರ್ಣವಲ್ಲೀ ಶ್ರೀ ಶ್ರೀಗಳ ಆಪ್ತ ಸಮಾಲೋಚನೆ. ಕೊನೆಯಲ್ಲಿ ಸ್ವರ್ಣವಲ್ಲೀ ಶ್ರೀಗಳು ಹೊರಗೆ ಬರುವಾಗ “ಗುರುವಾರ ಬರುತ್ತೀರಲ್ಲ?” ಎಂದು ಕಲಸಿ ಸ್ವಾಮಿಗಳು ಕೇಳಿದ ಪ್ರಶ್ನೆ ಮಾತ್ರ ಕಿವಿಗೆ ಬಿದ್ದಿತ್ತು. ಇನ್ನೂ ಆಶ್ಚರ್ಯವೆಂದರೆ ಆ ವಾರಪೂರ್ತಿ ಯಾರೆಲ್ಲ ಕಲಸಿ ಸ್ವಾಮಿಗಳ ದರ್ಶನಕ್ಕೆ ಬಂದಿದ್ದರೋ ಎಲ್ಲರಿಗೂ ಗುರುವಾರ ಮಠಕ್ಕೆ ಬನ್ನಿ ಎಂದು ಖುದ್ದು ಸ್ವಾಮಿಗಳೇ ಆಮಂತ್ರಿಸಿದ್ದು ಮೈನವಿರೇಳಿಸುವ ಸಂಗತಿ. ಸುಮಾರು ಆರುಗಂಟೆ ಸಮಯಕ್ಕೆ ನೂರಾರು ಜನ ಶ್ರೀಮಠಕ್ಕೆ ಬಂದು ಸೇರಿಬಿಟ್ಟಿದ್ದಾರೆ. ಶ್ರೀಸ್ವರ್ಣವಲ್ಲೀ ಶ್ರೀಶ್ರೀಗಳು ಮೈಸೂರಿನಿಂದ ಬರಬೇಕು. ಯಾವ ಪೂರ್ವಸಿದ್ಧತೆಯೂ ಇಲ್ಲದೇ ಶ್ರೀಗಳ ದಿವ್ಯ ಶರೀರದ ದರ್ಶನಕ್ಕೆ ಸಾಯಂಕಾಲದ ವರೆಗೆ ಮುಕ್ತ ಅವಕಾಶಅವರ ಅಂತಿಮ ವಿಧಿ ವಿಧಾನವನ್ನು ಪೂರ್ಣಗೊಳಿಸುವಾಗ ರಾತ್ರಿ ಹತ್ತೊ ಹನ್ನೊಂದೋ ಆಗಿತ್ತು. ಅವರ ಅಂತಿಮ ವಿಧಾಯಕ್ಕೆ ಅದೆಲ್ಲಿಂದ ಜನ ಸೇರಿದರೋ ಗೊತ್ತಿಲ್ಲ. ಶ್ರೀ ಸ್ವರ್ಣವಲ್ಲಿ ಮಠದಲ್ಲಿ ಒಂದು ಪಾರ್ಶವದಲ್ಲಿ ಅವರು ಅವರ ಅನುಷ್ಠಾನ ಅದನ್ನು ಬಿಟ್ಟರೆ ಬೇರೆ ಪ್ರವಂಚದ ಗೊಡವೆಯೇ ಇಲ್ಲದೇ ತಮ್ಮ ಐಹಿಕ ಜೀವನವನ್ನು ಕಳೆದ ಆ ಮಹಾಸಂತನಿಗೆ ಅಷ್ಟೊಂದು ಶಿಷ್ಯರು- ಭಕ್ತರು ಇದ್ದಾರೆಯೇ? ಎಂದು ಆಶ್ಚರ್ಯವಾದದ್ದು ಸುಳ್ಳಲ್ಲ.. ಎಲ್ಲಾ ಕರ್ಮಾಂಗಗಳು ಮುಗಿಯಲು ರಾತ್ರಿಯಾದರೂ ಸಾವಿರಾರು ಭಕ್ತರು ಸೇರಿದ್ದರು. ಅವರ ಸಂಕಲ್ಪದಂತೆ ಅವರು ಇಚ್ಛಿಸಿದ ಸ್ಥಳದಲ್ಲಿ.. ಅವರ ಇಚ್ಛೆಯಂತೆ ಅವರ ಸಮಾಧಿ ಮಂದಿರವನ್ನು ನಿರ್ಮಾಣಮಾಡಲಾಗಿದೆ. ಅಲ್ಲದೇ ಅವರು ಬಳಸುತ್ತಿದ್ದ ವಸ್ತುಗಳನ್ನು ಅಲ್ಲಿಯೇ ಜೋಪಾನವಾಗಿ ಕಾಯ್ದಿರಿಸಲಾಗಿದೆ.

         . ಅಂತಹ ಮಹಾನ್ ಜ್ಞಾನಜ್ಯೋತಿ ಭಗವಜ್ಜ್ಯೋತಿಯಲ್ಲಿ ಲೀನವಾದ ಪುಣ್ಯತಮ ದಿನವಿದು. 

          ಅವರ ಅನುಗ್ರಹದಿಂದ ಮಾತು ಕಲಿತವರು ಅದೆಷ್ಟೋ.. ನನ್ನದೇ ಅನುಭವವನ್ನು ನಾನು ಹೇಳಬೇಕು. ಬೇರೆಯವರಿಗೂ ಇದೇ ರೀತಿಯ ಅನುಭವ ಆಗಿರಬಹುದು. ಆ ದಿನ ನನಗೆ ವಿಪರೀತ ಜ್ವರ. ನಾನು ಕಲಸೀ ಸ್ವಾಮಿಗಳ ಸೇವೆಮಾಡಲು ಹೋದವನು. ನಮಗೆ ಹದಿನೈದು ದಿನದ ಪಾಳಿ ಪ್ರಕಾರ ಸೇವೆ ಮಾಡುವ ಯೋಗ. ಆ ದಿನ ಸ್ನಾನ ಮಾಡಿಬಂದ ನನಗೆ ಓಡಾಡುವುದಕ್ಕೂ ಕಷ್ಟಸಾಧ್ಯವಾಗುವಷ್ಟು ಜ್ವರ. ಅದನ್ನು ಗಮನಿಸಿದ ಗುರುಗಳು ನನ್ನುನ್ನು ಹತ್ತಿರಕ್ಕೆ ಕರೆದು.ಅವರ ಸಣ್ಣ ಧ್ವನಿಯಲ್ಲಿ ” ಏನು ಜ್ವರ ಬಂತ ?” ಎಂದು ಕೇಳಿದರು. ನಾನು ಸೋರುತ್ತಾರುವ ಮೂಗನ್ನು ಸೊರ ಸೊರ ಶಬ್ದ ಮಾಡುತ್ತಾ “ಹೌದು ಗುರುಗಳೇ” ಎಂದೆ. ಬಾ ಇಲ್ಲಿ ಎಂದು ಹತ್ತಿರಕ್ಕೆ ಕರೆದು ಅಲ್ಲೇ ಸಮೀಪದಲ್ಲಿ ಕೂರಿಸಿಕೊಂಡು ಸ್ವಲ್ಪ ಭಸ್ಮ ಹಚ್ಚಿ ನನ್ನ ನೆತ್ತಿಯ ಮೇಲೆ ಕೈಯಿಟ್ಟು ಏನೋ ಜಪ ಮಾಡಿದರು. ಸುಮಾರು ಮೂರು ನಾಲ್ಕು ನಿಮಿಷ ಆಗಿರಬಹುದು. ಜ್ವರ ಪೂರ್ಣ ಕಡಿಮೆಯಾಯಾತು. “ಸಂಧ್ಯಾವಂದನೆ ಸರಿ ಮಾಡು” ಎಂದು ಹೇಳಿ ಅವರ ಅನುಷ್ಠಾನದಲ್ಲಿ ನಿರತರಾದರು. ಇಂತಹ ಹಲವು ಘಟನೆಗಳು ಹಲವರ ಜೀವನದಲ್ಲಿ ನಡೆದಿದೆ. ಮಹಾನ್ ಜ್ಯೋತಿಷಿಗಳು ಪಂಡಿತರು ಅನೇಕರು ಕಲಸಿ ಸ್ವಾಮಿಗಳ ದರ್ಶನಕ್ಕಾಗಿಯೇ ಮಠಕ್ಕೆ ಬರುತ್ತಿದ್ದರು. ಲಕ್ಷ್ಮೀನೃಸಿಂಹ ದೇವರ ಪೂಜೆ ಪೂರ್ಣಗೊಂಡು ಮಂಗಳಾರತಿಯ ನಂತರ ತೀರ್ಥಪ್ರಾಶನ ಮಾಡಿಯೇ ಆಹಾರ ಸೇವಿಸುವ ಕ್ರಮ ನಿತ್ಯದ ರೂಡಿ. ಅವರ ಶರೀರ ತ್ಯಾಗದ ದಿನದ ವರೆಗೂ ಒಂದು ದಿನವೂ ಮಠದ ದೇವರ ತೀರ್ಥ ಸ್ವೀಕರಿಸದೇ ಆಹಾರ ಸ್ವೀಕರಿಸಿದ ಉದಹರಣೆಗಳೇ ಇಲ್ಲ. ಶ್ರೀಮಠದ ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದೂ ಹವನವಾದರೆ ಪೂರ್ಣಾಹುತಿಗೆ, ಪೂಜೆಯಾದರೆ ಮಂಗಳಾರತಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಸಮಯಪ್ರಜ್ಞೆ ಸದಾ ಜಾಗೃತವಾಗಿರುವ ದಿವ್ಯಪರುಷ ಅವರು. ಅವರಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಮನೋಭಾವ ಯಾವಾಗಲೂ ಇತ್ತು. ಅಂತಹ ಮಹಾನ್ ಸಂತ ತಮ್ಮ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸಿದ ಪುಣ್ಯ ಪರ್ವಕಾಲ. ಈ ಪರಮಪವಿತ್ರವಾದ ದಿನದಂದು ಅವರ ಪುಣ್ಯ ಚರಣಾರವಿಂದಗಳಲ್ಲಿ ಎಳೆತುಳಸಿಯಂತಿರುವ ಶಬ್ದ ಪಲ್ಲವಗಳನ್ನು ಸಮರ್ಪಿಸುತ್ತಿದ್ದೇನೆ. 

         ಯೋಗಾನುಷ್ಠಾನ ನಿರತಂ ಖೇಚರೀಯೋಗಸಾಧಕಂ।

         ನೌಮಿ ತಂ ಜೀವನೇ ಮುಕ್ತಂ ನೃಸಿಂಹಾನಂದ ಸದ್ಗುರುಮ್।।

                                       ✍️ ವಿ। ರವಿಶಂಕರ ಹೆಗಡೆ ದೊಡ್ನಳ್ಳಿ.