ಪಕ್ಷಕ್ಕೊಂದು ಪುರಾಣ- 4 ಕೂರ್ಮಪುರಾಣ

posted in: Articles | 0

ಹದಿನೆಂಟು ಪುರಾಣಗಳಲ್ಲಿ ಕೂರ್ಮಪುರಾಣ ಹದಿನೈದನೇಯ ಸ್ಥಾನದಲ್ಲಿ ನಿಲ್ಲುತ್ತದೆ. 99 ಅಧ್ಯಾಯಗಳಿಂದ ಕೂಡಿದ ಈ ಪುರಾಣವು 17 ಸಾವಿರ ಶ್ಲೋಕಗಳಿಂದ ಕೂಡಿದೆ. ಶ್ರೀಮನ್ನಾರಾಯಣನು ಕೂರ್ಮರೂಪಿಯಾಗಿ ಉಪದೇಶಿಸಿದ ಈ ಪುರಾಣವು ಕೂರ್ಮಪುರಾಣ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಸೂತಪುರಾಣಿಕರ ಉತ್ತರರೂಪವಾದ ಈ ಕಥಾಭಾಗ ಸಮುದ್ರಮಥನದ ಕಥೆಯಿಂದಲೇ ಆರಂಭವಾಗುತ್ತದೆ. ಸಮುದ್ರಮಥನದ ಸಂದರ್ಭದಲ್ಲಿ ವಾಸುಕಿಯನ್ನು ಹಗ್ಗವಾಗಿಸಿ ಮಂದರ ಪರ್ವತವನ್ನು ಕಡಗೋಲಾಗಿಸಿ ಕಡೆಯುತ್ತಿದ್ದಾಗ ಆಧಾರವಿಲ್ಲದೇ ಮಂದರ ಪರ್ವತ ಕ್ಷೀರ ಸಾಗರದಲ್ಲಿ ಮುಳುಗುವುದಕ್ಕೆ ಆರಂಭವಾದಾಗ ಕೂರ್ಮರೂಪಿ ಭವಂತನ ಆವಿರ್ಭಾವವಾಯಿತು. ಆ ಕೂರ್ಮರೂಪಿಯಾದ ಭಗವಂತ ನಾರದಾದಿ ಮುನಿಗಳಿಗೆ ಸೃಷ್ಟಿಯ ಕ್ರಮವನ್ನು ಬೋಧಿಸಿದನು. ಭಗವಂತನ ಪ್ರಸಾದದಿಂದ ಬ್ರಹ್ಮನೂ, ಕೋಪದಿಂದ ರುದ್ರನೂ ಆವಿರ್ಭವಿಸಿದನು ಎಂದು ತಿಳಿದುಬರುತ್ತದೆ. ಅನಂತರ ಮುಂದಿನ ಅಧ್ಯಾಯಗಳಲ್ಲಿ, ಮಧುಕೈಟಭರ ನಾಶ ದೇವೀ ಮಾಹಾತ್ಮ ಸಂಕ್ಷಿಪ್ತವಾಗಿ ಬರುತ್ತದೆ. ಪಾರ್ವತಿಯ ಉತ್ಪತ್ತಿ, ಗಿರಿಜಾಕಲ್ಯಾಣ, ದಕ್ಷಯಜ್ಞದ ಕಥೆ, ವಾಮನಾವತಾರ ವರ್ಣನೆ, ಕಶ್ಯಪನೇ ಮೂದಲಾದ ಋಷಿಗಳ ವಂಶ ವರ್ಣನೆ ಇವುಗಳು ಇಲ್ಲಿ ಉಲ್ಲೇಖವಾಗಿವೆ. ವಸುಮನ ಎಂಬ ರಾಜನ ವೃತ್ತಾಂತ 20 ನೇ ಅಧ್ಯಾಯದ ವರೆಗೆ ನಿರೂಪಿತವಾಗಿದೆ. 21 ನೇ ಅಧ್ಯಾಯದಲ್ಲಿ ರಾಮನ ಚರಿತ್ರೆಯು, 22 ರಿಂದ 24 ರ ವರೆಗೆ ಚಂದ್ರವಂಶದ ಹಾಗೂ 24 ರಿಂದ 26 ನೇ ಅಧ್ಯಾಯದ ವರೆಗೆ ಕೃಷ್ಣಾವತಾರದ ವರ್ಣನೆಯೂ, ಚತುರ್ಯುಗಗಳು, ಭುವನಕೋಶ, ಮನ್ವಂತರಗಳು, ಜ್ಯೋತಿಮಂಡಲ, ಸೂರ್ಯಾದಿಗ್ರಹಗಳು, ನಕ್ಷತ್ರಗಳು, ಮೇರು ಮುಂತಾದ ಪರ್ವತಗಳ ವರ್ಣನೆ, ಜಂಬೂ, ಪ್ಲಕ್ಷಮುಂತಾದ ದ್ವೀಪಗಳ ವರ್ಣನೆ ಬರುತ್ತದೆ. ಕಲಿಯುಗದಲ್ಲಿ ವ್ಯಾಸರು ಉದಿಸಿಬಂದು ವೇದವನ್ನು ನಾಲ್ಕಾಗಿ ವಿಭಾಗಿಸಿ ಅಧನ್ನು ರಕ್ಷಿಸುವುದಕ್ಕಾಗಿ ನಾಲ್ಕು ಶಿಷ್ಯರಿಗೆ ಉಪದೇಶಿಸುವ ಕಥೆ ಬರುತ್ತದೆ. 

ಹರಿಹರರಲ್ಲಿ ಅದ್ವೈತ ಭಾವವನ್ನು ತಿಳಿಸುವ ಬಹಳ ಸುಂದರವಾದ ಈಶ್ವರ ಗೀತೆ 54 ನೇ ಅಧ್ಯಾಯದಲ್ಲಿ ಉಲ್ಲೇಖವಾಗಿದೆ. ಮುಂದೆ ಸಾಂಖ್ಯ, ಯೋಗ ಮುಂತಾದ ವಿಷಯಗಳ ವಿವರಣೆ ಬರುತ್ತದೆ. ಅನಂತರ ಬ್ರಹ್ಮಚರ್ಯ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ಆಶ್ರಮಗಳು, ಅವುಗಳ ಧರ್ಮಗಳು ವಿಸ್ತಾರವಾಗಿ ವಿವರಿಸಲಾಗಿದೆ. ಶ್ರಾದ್ಧದ ವಿಷಯದಲ್ಲಿ ವಿಶೇಷ ವಿವರಣೆ ಇಲ್ಲಿ ದೊರೆಯುತ್ತದೆ. ಸನ್ಯಾಸಧರ್ಮವನ್ನು ವ್ಯವಸ್ಥಿತವಾಗಿ ತಿಳಿಸಿದ ಕೆಲವೇ ಕೆಲವು ಪುರಾಣಗಳಲ್ಲಿ ಕೂರ್ಮಪುರಾಣವೂ ಒಂದು. 

       ಮಹಾಪಾತಕಗಳು, ಉಪಪಾತಕಗಳ ಬಗೆಗಿನ ವಿವರಣೆ ಇಲ್ಲಿ ದೊರೆಯುತ್ತದೆ. ಪ್ರಯಾಗವೇ ಮೊದಲಾದ ಅನೇಕ ತಿರ್ಥವರ್ಣನೆ ಇದೆ. ಕೊನೆಯ ಎರಡು ಅಧ್ಯಾಯಗಳಲ್ಲಿ ಕೂರ್ಮಪುರುಷನು ಪ್ರಪಂಚದ ಪ್ರಳಯದ ಲಕ್ಷಣವನ್ನು ಹೇಳಿ ಪುರಾಣವನ್ನು ಉಪಸಂಹಾರ ಮಾಡುತ್ತಾನೆ.

        ಸೃಷ್ಟಿ, ಸ್ಥಿತಿ, ಲಯಗಳನ್ನು ಸೋಪಾನಕ್ರಮದಲ್ಲಿ ಪ್ರಸ್ತಾಪಿಸಿದ ಸುಂದರ ಪುರಾಣವಿದು. 

        ಇದು ಕೂರ್ಮಪುರಾಣದ ಪುಟ್ಟ ಪರಿಚಯ.

ಲೇಖನ – ವಿ. ರವಿಶಂಕರ ಹೆಗಡೆ ದೊಡ್ನಳ್ಳಿ.

ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ.