ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು | ಸರ್ವೋತ್ತಮಗಳೆರಡು ಸರ್ವಕಠಿನಗಳು || ನಿರ್ಮತ್ಸರತೆಯೊಂದು ದೋಷಿಯೋಳ್ ಕ್ಷಮೆಯೊಂದು | ಬ್ರಾಹ್ಮಿಕಾಭ್ಯಾಸವದು – ಮಂಕುತಿಮ್ಮ ||
ಈ ಪದ್ಯದ ಸಾಲುಗಳು ಅಧ್ಯಾತ್ಮ ಚಿಂತಕರಿಗೆ ತುಂಬಾ ಸಂತೋಷವನ್ನುಂಟು ಮಾಡುತ್ತದೆ. ಯಾಕೆಂದರೆ ಅಧ್ಯಾತ್ಮಪಥಿಕರು ಅಳವಡಿಸಿಕೋಳ್ಳಲು ಕ್ಲಿಷ್ಟವೆಂಬುದಾಗಿ ಅನುಭವದಿಂದ ಹೇಳುವ ಎರಡು ಗುಣಗಳನ್ನೇ ಈ ಪದ್ಯವು ಎತ್ತಿ ಹೇಳಿದೆ. ಒಂದು ನಿರ್ಮತ್ಸರತೆ, ಇನ್ನೊಂದು ದೋಷಿಗಳಲ್ಲಿ ಕ್ಷಮೆ.
ನಿರ್ಮತ್ಸರತೆ ಎಂದರೆ ಮಾತ್ಸರ್ಯ ಅಥವಾ ಅಸೀಯೆ ಇಲ್ಲದಿರುವುಕೆ. ಅಸೂಯೆ ಎಂದರೆ ಇನ್ನೊಬ್ಬರ ಉತ್ಕರ್ಷವನ್ನು ಸಹಿಸಲಾಗದ ಮನಃಸ್ಥಿತಿ. ಹಾಗೆಯೇ ಆ ಉತ್ಕೃಷ್ಟ ವ್ಯಕ್ತಿಗಳಲ್ಲಿ ಇರುವ ಗುಣಗಳನ್ನು ದೋಷ ದೃಷ್ಟಿಯಿಂದ ನೋಡುವ ಭಾವನೆ. ಇವೆರಡು ಒಂದಕ್ಕೆ ಇನ್ನೊಂದು ಪೂರಕ. ಆದ್ದರಿಂದ ಎರಡನ್ನೂ ಒಟ್ಟಿಗೆ ಸೇರಿಸಿ ತೆಗೆದುಕೊಳ್ಳಲಾಗಿದೆ. ಉಳಿದೆಲ್ಲಾ ಗುಣಗಳಿದ್ದರೂ ಅಸೂಯೆ ಎಂಬ ದು ದೋಷ ಪ್ರಭಲವಾಗಿದ್ದರೆ ಆ ಎಲ್ಲಾ ಗುಣಗಳನ್ನು ಅದು ನಾಶಗೊಳಿಸಬಲ್ಲದು. ಆದ್ದರಿಂದ ಅಸೂಯೆಯನ್ನು ಬಿಡುವುದು ಅಧ್ಯಾತ್ಮ ಪಥಿಕನಿಗೆ ಅತ್ಯಂತ ಅವಶ್ಯಕ. ಪದ್ಯದಲ್ಲಿ ಬಿಡುವುದಕ್ಕಾಗಿ ಹೇಳಿದ ಇನ್ನೊಂದು ದೋಷ ಅಕ್ಷಮ. ಅಂದರೆ ಕ್ಷಮೆ ಇಲ್ಲದಿರುವಿಕೆ.ತನ್ನ ಎದುರಿಗೆ ತನ್ನ ಬಗ್ಗೆ ಆಕ್ರೋಶ ವ್ಯಕ್ತವಾದಾಗ ಮನಸ್ಸಿನಲ್ಲಿ ಸಿಟ್ಟು ಬರದೆ ಇದ್ದರೆ ಅದೇ ಕ್ಷಮಾ.