ಪಕ್ಷಕ್ಕೊಂದು ಪುರಾಣ -2 ಮಾರ್ಕಂಡೇಯ ಪುರಾಣ

posted in: Articles | 0

[ಹರಿಶ್ಚಂದ್ರನ “ಸತ್ಯಚರಿತೆ”.. ದತ್ತಾತ್ರೇಯರ “ಗುರುಚರಿತೆ”.. ಜಗದಂಬಿಕೆಯ “ದೇವೀಚರಿತೆ”..ಭರತಖಂಡದ ವರ್ಣನೆಯ “ಭಾರತಚರಿತೆ”…. ಜೀವಿಯಗರ್ಭಾವಸ್ಥೆಯ ಹಂತಗಳನ್ನು ವಿವರಿಸಸುವ “ಗರ್ಭಚರಿತೆ”.. ಸೂರ್ಯನ ವೃತ್ತಾಂತವನ್ನು ವಿಸ್ತರಿಸುವ “ಸೌರಚರಿತೆ”  ಇವುಗಳ ಸಮೂಹರೂಪವೇ ಮಾರ್ಕಂಡೇಯ ಪುರಾಣ.]

ಪುರಾಣಪ್ರಪಂಚದಲ್ಲಿ ಕೆಲವು ಪುರಾಣಗಳು ತಮ್ಮದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿವೆ. ಕೆಲವು ಪುರಾಣಭಾಗಗಳು ಲೋಕದಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿವೆ. ಎಷ್ಟು ಎಂದರೆ ಆ ಪುರಾಣದ ಭಾಗಗಳು ಪ್ರತಿ ಮನೆಯಲ್ಲಿಯೂ ಕನಿಷ್ಠ ವರ್ಷಕ್ಕೆ ಒಮ್ಮೆಯಾದರು ಶ್ರವಣವಾಗುತ್ತದೆ. ಜನರು ತಮ್ಮ ಆಶೋತ್ತರಗಳನ್ನು ಪೂರ್ಣಗೊಳಿಸಿಕೊಳ್ಳಲು ಆ ಪುರಾಣಭಾಗದ ಶ್ರವಣ, ಕೀರ್ತನ, ಪಾರಾಯಣವೇ ಮೊದಲಾದ ಮಾರ್ಗವನ್ನು ಇಂದಿಗೂ ಅನುಸರಿಸುತ್ತಿದ್ದಾರೆ. ಕೆಲವು ಪುರಾಣದ ಭಾಗಗಳನ್ನು ಅನಕ್ಷರಸ್ಥ ಜನರೂ ಕರಾರುವಾಕ್ಕಾಗಿ ಎಲ್ಲಿಯೂ ವ್ಯತ್ಯಸ್ಥಗೊಳಿಸದೇ ಹೇಳುತ್ತಾರೆ. ಅದಕ್ಕೆ ಕಾರಣ ಭಾರತದಲ್ಲಿ ಕೆಲವು ಪುರಾಣ ಕಥೆಗಳು ಕಲಾಪ್ರಪಂಚದಲ್ಲಿ ನಿತ್ಯನೂತನವಾದವುಗಳು. ಇದರಿಂದ ಅವು ಜನಜನಿತವೂ ಕೂಡ ಆಗಿವೆ. ಅಂತಹ ಪ್ರಸಿದ್ಧಕಥೆಗಳಲ್ಲಿ “ದೇವೀ ಮಾಹಾತ್ಮ್ಯ” ಅಥವಾ ಚಂಡೀ ಸಪ್ತಶತೀ ಸಹ ಒಂದು. ಅದೇ ರೀತಿ ಕೆಲವು ದಿವ್ಯಗುಣಗಳಿಗೆ ಕೆಲವು ರಾಜರುಗಳ ಜೀವನಗಳು ಅನನ್ಯಸದೃಶವಾಗಿ ಹೊಂದಿಕೆಯಾಗುತ್ತವೆ. ಉದಾಹರಣೆಗೆ ತ್ಯಾಗಕ್ಕೆ ಶಿಬಿ, ದಾನಕ್ಕೆ ಬಲಿ, ಅದೇರೀತಿ ಸತ್ಯಕ್ಕೆ “ಹರಿಶ್ಚಂದ್ರ”.. ಹೀಗೆಯೇ ಈ ಪಟ್ಟಿ ಮುಂದುವರಿಯುತ್ತದೆ. ಇನ್ನು ಇಂದಿಗೂ ಸಾವಿರಾರು ಭಕ್ತರ ಆರಾಧ್ಯ ದೈವವಾಗಿ ಮುಖ್ಯವಾಗಿ ಯತಿಗಳ ಹೃದಯಮೂರ್ತಿಯಾಗಿ ವಿರಾಜಿಸುತ್ತಿರುವ ಮಹಾಗುರುಗಳು ಗುರು “ದತ್ತಾತ್ರೇಯರು”. ಇವರೆಲ್ಲರ ಸ್ಮರಣೆ ಇಲ್ಲಿ ಯಾಕೆ ಗೊತ್ತೆ ? ಈಗ ವಿವರಿಸಲು ವಿದ್ಯುಕ್ತನಾಗುತ್ತಿರುವುದು ಈ ಎಲ್ಲ ಪುಣ್ಯತಮಮವಾದ ಕಥೆಗಳನ್ನು ಒಳಗೊಂಡ “ಮಾರ್ಕಂಡೇಯಪುರಾಣ”ವನ್ನು. 

ಹೌದು ಪುರಾಣಪ್ರಪಂಚದಲ್ಲಿಯೇ ಅಪರೂಪದ ಪುರಾಣಗಳಲ್ಲಿ ಈ ಮಾರ್ಕಂಡೇಯಪುರಾಣವೂ ಸಹ ಪ್ರಮುಖವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಸುಮಾರು 134 ಅಧ್ಯಾಯಗಳಿಂದ ಕೂಡಿದ ಮಾರ್ಕಂಡೇಯಪುರಾಣದಲ್ಲಿ ಸುಮಾರು ಒಂಭತ್ತು ಸಾವಿರ ಶ್ಲೋಕಗಳಿವೆ. ಜೈಮಿನಿ ಮುನಿಗಳು ಹಾಗೂ ಮಾರ್ಕಂಡೇಯ ಮುನಿಗಳ ಸಂವಾದರೂಪವಾದ ಈ ಪುರಾಣ ಇವರೀರ್ವರ ಸಂವಾದದೊಂದಿಗೇ ಆರಂಭವಾಗುತ್ತದೆ. ಜೈಮಿನಿ ಮುನಿಗಳು ಮಾರ್ಕಂಡೇಯ ಮುನಿಗಳ ಸಮೀಪಕ್ಕೆ ಬಂದು ಕೆಲವು ಸಂದೇಹಗಳನ್ನು ಕೇಳುತ್ತಾರೆ. ಆಗ ಆ ಸಂದೇಹಗಳಿಗೆ ಮಾರ್ಕಂಡೇಯ ಮುನಿಗಳು ವಿಂಧ್ಯಾಚಲದಲ್ಲಿ ನೆಲೆಸಿರುವ ಪಕ್ಷೀಂದ್ರರ ಬಳಿ ಕೇಳುವಂತೆ ಸಲಹೆ ನೀಡುತ್ತಾರೆ. ಅದೇ ಸಂದರ್ಭದಲ್ಲಿ ವಪು ಎಂಬ ಅಪ್ಸರೆಗೆ ಶಾಪ ಒದಗಿಬಂದ ಕಥೆಯನ್ನು ವಿವರಿಸುತ್ತಾರೆ. ಅದಾದ ನಂತರ ಕಂಕಪಕ್ಷಿ ಮತ್ತು ವಿದ್ಯುದ್ರೂಪರ ಯುದ್ಧ ವೃತ್ತಾಂತವನ್ನು ವಿವರಿಸಿ ಪಕ್ಷೀಂದ್ರರ ಉತ್ಪತ್ತಿಯ ಕಥೆಯನ್ನು ವಿವರಿಸುತ್ತಾರೆ. ಅನಂತರ ಆ ಪಕ್ಷೀಂದ್ರರು ಹಾಗೂ ಜೈಮಿನಿಗಳ ನಡುವಿನ ಸಂವಾದ ನಡೆಯುತ್ತದೆ. ಆ ಸಂವಾದದಲ್ಲಿ ಜೈಮಿನಿಗಳು ನಿರ್ಗುಣನಾದ ಪರಮಾತ್ಮನು ಮನುಷ್ಯನಾಗಿ ಏಕೆ ಅವತಾರ ಮಾಡಿದ ? ದ್ರೌಪದಿಗೆ ಐದು ಜನ ಗಂಡಂದಿರಿದ್ದರೂ ಹೇಗೆ ಪತಿವ್ರತೆ ಆಗಿದ್ದಳು ? ಬಲರಾಮ ಮಹಾಭಾರತ ಯುದ್ಧದ ಕಾಲದಲ್ಲಿ ತೀರ್ಥಯಾತ್ರೆಗೆ ಹೋಗಲು ಕಾರಣವೇನು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಅದೆಲ್ಲವನ್ನೂ ವಿಸ್ತಾರವಾಗಿ ವಿವರಿಸಿದ ಪಕ್ಷೀಂದ್ರರು ಸಂಪೂರ್ಣ ಹರಿಶ್ಚಂದ್ರ ಚರಿತೆಯನ್ನು ವಿವರಿಸುತ್ತಾರೆ. ಮುಂದೆ ಈ ಮಾರ್ಕಂಡೇಯ ಪುರಾಣದಲ್ಲಿ ಅತ್ಯಂತ ರೋಚಕವಾದ ಆಖ್ಯಾನವೊಂದು ಬರುತ್ತದೆ. ಪ್ರಾಣಿಗಳ ಗರ್ಭವಾಸ ಹಾಗೂ ಜನ್ಮದ ಬಗ್ಗೆ ಹತ್ತನೇಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಅದಾದ ನಂತರ ಹನ್ನೊಂದನೇ ಅಧ್ಯಾಯದಲ್ಲಿ ಇಂದಿನ ಆಧುನಿಕ ಜೀವಶಾಸ್ತ್ರ ( modern biology) ತಿಳಿಸಿಕೊಡುವ ಮಾನವನ ಒಂಭತ್ತು ತಿಂಗಳಿನ ಗರ್ಭಾವಸ್ಥೆಯನ್ನು ಅತ್ಯಂತ ಸುಂದರವಾಗಿ ವಿವರಿಸಲಾಗಿದೆ. ಹಾಗೆಯೇ ದತ್ತಾತ್ರೇಯ ಚರಿತ್ರೆಯನ್ನು ಮುಂದಿನ ಕೆಲವು ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಕುವಲಯಾಶ್ವ ವೃತ್ತಾಂತವನ್ನೂ, ಅದೇ ಸಂದರ್ಭದಲ್ಲಿ ಗೃಹಸ್ಥಾಶ್ರಮ ನಿಯಮಗಳನ್ನೂ, ಇಲ್ಲಿ ವಿವರಿಸಲಾಗಿದೆ. ಮುಂದೆ ದತ್ತಾತ್ರೇಯಮುನಿಗಳು ಅಲರ್ಕನಿಗೆ ಯೋಗ, ಯೋಗಾಭ್ಯಾಸ, ಯೋಗಾಸನದಲ್ಲಿ ಉಂಟಾಗುವ ಸಮಸ್ಯೆಗಳು, ಅವುಗಳ ಉಪಶಮನಕ್ಕೆ ಮಾರ್ಗ, ‘ಅಣಿಮಾ’ ಮೊದಲಾದ ಅಷ್ಟ ಸಿದ್ದಿಗಳು, ಯೋಗಿ ಎಂದರೆ ಯಾರು ? ಯೋಗಿಗೆ ಇರಬೇಕಾದ ಅರ್ಹತೆಗಳು, ಯೋಗಿ ಪ್ರತಿನಿತ್ಯ ಅನುಸರಿಸಬೇಕಾದ ಜೀವನಕ್ರಮ, ಯೋಗಿಯು ಪರಮಾತ್ಮಪ್ರಾಪ್ತಿಗಾಗಿ ಮಾಡಬೇಕಾದ ಓಂಕಾರ ಉಪಾಸನೇ, ಮರಣ ಸೂಚಕವಾದ ಶಕುನಗಳು, ಅಂತಹ ಶಕುನಗಳು ಕಾಣಿಸಿದಾಗ ಯೋಗಿಗೆ ಇರಬೇಕಾದ ದೃಢವಾದ ಮನಸ್ಸ್ಥೈರ್ಯ ಇವೆಲ್ಲವನ್ನೂ ಉಪದೇಶಿಸುತ್ತಾರೆ. ಇದರಿಂದ ವೈರಾಗ್ಯವನ್ನು ಹೊಂದಿದ ಅಲರ್ಕ ಮಹಾರಾಜನು ತನ್ನ ರಾಜ್ಯವನ್ನು ಕಾಶೀರಾಜನಿಗೆ ಅರ್ಪಿಸುತ್ತಾನೆ. ಕಾಶೀರಾಜನು ಸುಬಾಹುವಿನ ಉಪದೇಶ ಕೇಳಿ ಅಲರ್ಕನ ರಾಜ್ಯವನ್ನು ಹಿಂದಿರುಗಿ ನೀಡುತ್ತಾನೆ. ಆಗ ಅಲರ್ಕನು ಸರ್ವಸಂಗಪರಿತ್ಯಾಗಿಯಾಗಿ ಮೋಕ್ಷಹೊಂದುತ್ತಾನೆ. ಮುಂದೆ ಸೃಷ್ಟಿಯ ನಿರೂಪಣೆ ಬರುತ್ತದೆ. ತ್ರಿಮೂರ್ತಿಗಳು, ದೇವತೆಗಳೂ ಹೀಗೆಯೇ ಪ್ರಪಂಚದ ಸೃಷ್ಟಿಯನ್ನೂ ವಿವರಿಸಲಾಗಿದೆ. 

   ಭಾರತಸ್ಯಾಸ್ಯ ವರ್ಷಸ್ಯ ನವಭೇದಾನ್ ನಿಬೋಧತ

  ಸಮುದ್ರಾಂತರಿತಾಃ ಜ್ಞೇಯಾಃ ತೇ ತ್ವಗಮ್ಯಾಃ ಪರಸ್ಪರಂ।।

 ಇದು ಭಾರತದೇಶವನ್ನು ವರ್ಣಿಸುವ ಮಾರ್ಕಂಡೇಯಪುರಾಣದ ಶ್ಲೋಕ. ಮಾರ್ಕಂಡೇಯಪುರಾಣದ 54 ನೇ ಅಧ್ಯಾಯದಲ್ಲಿ ಭಾರತದೇಶದ ವರ್ಣನೆ ಅತ್ಯಂತ ಸುಂದರವಾಗಿ ನಿರೂಪಿತವಾಗಿದೆ. ಅನಂತರ ಭರತಖಂಡದ ಅಧಿದೇವತೆಯಾದ ವರಾಹಸ್ವಾಮಿಯ ವರ್ಣನೆ, ಮಹಿಮೆಯನ್ನೂ ಇಲ್ಲಿ ವಿವರಿಸಲಾಗಿದೆ. ಭದ್ರಾಶ್ವವರ್ಷವೇ ಮುಂತಾದ ದೇಶಗಳ ವರ್ಣನೆಯೂ ಮುಂದಿನ ಅಧ್ಯಾಯಗಳಲ್ಲಿ ಬರುತ್ತದೆ. 58 ನೇ ಅಧ್ಯಾಯದಿಂದ 76 ನೇಯ ಅಧ್ಯಾಯದ ವರೆಗೆ ಸ್ವಾರೋಚಿಷ, ಔತ್ತಮ, ತಾಮಸ, ರೈವತ, ಚಾಕ್ಷುಷ, ಹಾಗೂ ವೈವಸ್ವತಮನ್ವಂತರಗಳ ವಿವಿಧ ಘಟನೆಗಳು ಕಥೆಗಳು ಸನ್ನಿವೇಶಗಳು ನಿರೂಪಿತವಾಗಿವೆ.

ಸಾವರ್ಣಿಃ ಸೂರ್ಯತನಯೋ 

 ಯೋ ಮನುಃ ಕಥ್ಯತೇऽಷ್ಟಮಃ। 

ನಿಶಾಮಯ ತದುತ್ಪತ್ತಿಂ

 ವಿಸ್ತರಾದ್ಗದತೋ ಮಮ ।।(ಚಂಡೀ ಸಪ್ತಶತೀ) 

             77 ನೇ ಅಧ್ಯಾಯದಲ್ಲಿ ಸೂರ್ಯಸಾವರ್ಣಿ ಮನ್ವಂತರದ ಪೂರ್ವಪೀಠಿಕಾ ರೂಪವಾದ ಕಥೆ ಬರುತ್ತದೆ. 78 ನೇಯ ಅಧ್ಯಾಯದಿಂದ 90 ನೇಯ ಅಧ್ಯಾಯದ ವರೆಗೆ ಪ್ರಸಿದ್ಧವಾದ ಸಾವರ್ಣಿಕ ಮನುವಿನ ಪದವಿಪ್ರಾಪ್ತಿಗೆ ಕಾರಣವಾದ ದೇವೀಮಾಹಾತ್ಮ್ಯ ಭಾಗವು 13 ಅಧ್ಯಾಯಗಳಲ್ಲಿ ವರ್ಣಿತವಾಗಿದೆ. ಪ್ರಸ್ತುತ ಇಂದಿಗೂ ಸಹ ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖವಾಗಿರುವ ದೇವೀಮಾಹಾತ್ಮ್ಯ ಶ್ಲೋಕಗಳ ಮೂಲಕ ಜನರು ಶ್ರದ್ಧಾಭಕ್ತಿಯಿಂದ ಪಾರಾಯಣ, ಹೋಮಗಳನ್ನು ಮಾಡುತ್ತಾರೆ. ಇವತ್ತಿಗೂದೇವೀಮಾಹಾತ್ಮ್ಯಅಥವಾದುರ್ಗಾಸಪ್ತಶತೀಎಂಬ ಹೆಸರಿನಿಂದ ಪಂಡಿತ ಪಾಮರ ಭೇದವಿಲ್ಲದೇ ಎಲ್ಲರ ಮನೆ ಮನಗಳಲ್ಲಿ ಪುರಾಣಭಾಗವು ಆರಾಧನೆಯ ಮೂಲಸ್ಥಂಭವಾಗಿ ವಿಜ್ರಂಭಿಸುತ್ತಿರುವುದು ಮಾರ್ಕಂಡೇಯ ಪುರಾಣದ ಪ್ರಾಸಂಗಿಕತೆಗೆ ಸಾಕ್ಷಿಯಾಗಿದೆ

                 91 ನೇ ಅಧ್ಯಾಯದಿಂದ ದಕ್ಷಸಾವರ್ಣಿ ಮೊದಲಾದ ಮನ್ವಂತರದ ವಿವರಣೆಗಳು ಇವೆ. ಹಾಗೆಯೇ ರುಚಿಪ್ರಜಾಪತಿಯ ವೃತ್ತಾಂತ, ಭೌತ್ಯಮನ್ವಂತರದ ವಿವರಣೆ, ದಕ್ಷದಂಪತಿಗಳ ಸೃಷ್ಟಿ, ಸೂರ್ಯನ ಸೃಷ್ಟಿ, ಸಮಗ್ರ ಸೂರ್ಯನ ವೃತ್ತಾಂತ,ಮನುರಾಜ , ಪೃಷದ್ ರಾಜ , ನಾಭಾಗ, ಮೊದಲಾದ ರಾಜರ ವೃತ್ತಾಂತ, ಕ್ಷುಪ್ ರಾಜನ ಚರಿತ್ರೆ, ಖನಿನೇತ್ರ ರಾಜನ ಕಥೆ ಹೀಗೆ ಅನೇಕ ಕಥೆಗಳು ಈ ಪುರಾಣದಲ್ಲಿ ಬರುತ್ತವೆ. 

              134 ನೇ ಅಧ್ಯಾಯದಲ್ಲಿ ಕೆಲವು ಅತ್ಯುತ್ತಮವಾದ ಧರ್ಮಸಂದೇಶಗಳೊಂದಿಗೆ ಧರ್ಮಪಕ್ಷಿಗಳು ತಮ್ಮ ಕಥೆಗಳನ್ನು ಉಪಸಂಹಾರ ಮಾಡುತ್ತವೆ. ಸಂಪೂರ್ಣ ಪುರಾಣವು ಧರ್ಮಪಕ್ಷಿಗಳು ಅಥವಾ ಪಕ್ಷೀಂದ್ರರು ಮಾರ್ಕಂಡೇಯ ಮುನಿಗಳ ಆದೇಶದಂತೆ ಜೈಮಿನಿ ಮಹರ್ಷಿಗಳಿಗೆ ಹೇಳಿದ ಕಥೆಗಳಾಗಿವೆ

         ಹರಿಶ್ಚಂದ್ರನ “ಸತ್ಯಚರಿತೆ”.. ದತ್ತಾತ್ರೇಯರ “ಗುರುಚರಿತೆ”.. ಜಗದಂಬಿಕೆಯ “ದೇವೀಚರಿತೆ”.. ಭರತಖಂಡದ ವರ್ಣನೆಯ “ಭಾರತಚರಿತೆ”.. ಸೂರ್ಯನ ವೃತ್ತಾಂತವನ್ನು ವಿಸ್ತರಿಸುವ “ಸೌರಚರಿತೆ” ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖವಾಗಿದೆ. 

ಇದುಮಾರ್ಕಂಡೇಯಪುರಾಣದಸಂಕ್ಷಿಪ್ತಪರಿಚಯ.

ಲೇಖನ – ವಿ. ರವಿಶಂಕರಹೆಗಡೆದೊಡ್ನಳ್ಳಿ.

ಸಂಗ್ರಹ- ಶ್ರೀಸ್ವರ್ಣವಲ್ಲೀಭಕ್ತವೃಂದ.