ಸದಾಶಿವ ಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಮ್|
ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರುಪರಂಪರಾಮ್||
ಶ್ರೀಮದ್ ಗಂಗಾಧರೇಂದ್ರಾಯ ಶಿಷ್ಯಾವನರತಾಯಚ |
ಬುದ್ಧಿಪ್ರದಾಯ ಗುರವೇ ಜ್ಞಾನ ರೂಪಾಯ ತೇ ನಮಃ||

ಭವ್ಯ ಭಾರತದ ಸಿರಿಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹ್ಯಾದ್ರಿಯ ತಪ್ಪಲಿನ ಶಾಲ್ಮಲಾ ತೀರದಲ್ಲಿರುವ ಸ್ವರ್ಣವಲ್ಲೀ ಮಠವು ಜಗದ್ಗುರು ಶಂಕರಾಚಾರ್ಯ ಪ್ರಣೀತ ಅದ್ವೈತ ಸಿದ್ಧಾಂತದ ಪುಣ್ಯಭೂಮಿಯೂ ಕರ್ಮಭೂಮಿಯೂ ಆಗಿದೆ.ಬ್ರಹ್ಮೈಕ್ಯ ಶ್ರೀಮಜ್ಗದ್ಗುರು ಶ್ರೀ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳ ತಪೋನಿಷ್ಠೆಗೆ ಬದ್ಧರಾಗಿ ಕಾಂಚೀ ಪೀಠದ ಶ್ರೀಶ್ರೀಶ್ರೀ ಜಯೇಂದ್ರಸರಸ್ವತೀ ಸ್ವಾಮಿಗಳ ಕರಕಮಲದಿಂದ 1991 ರಲ್ಲಿ ಮಾಘ ಬಹುಳ ಬಿದಿಗೆಯಂದು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ಮಾಮಿಗಳು 54ನೇ ಯತಿಗಳಾಗಿ ಸಂನ್ಯಾಸ ದೀಕ್ಷೆ ಪಡೆದರು.
ಆನಂತರ ಸರ್ಕಾರದ ಪರಿಸರವಿರೋಧಿ ಬೇಡ್ತಿ-ಅಘನಾಶಿನಿ ಜಲವಿದ್ಯುತ್ ಯೋಜನೆಗಳಿಂದ ಮುಳುಗಲಿರುವ ಸಹ್ಯಾದ್ರಿಯ ಮಡಿಲನ್ನು ಭಕ್ತವೃಂದದೊಡಗೂಡಿ 50ಕಿ.ಮೀ ಪಾದಯಾತ್ರೆ ಕೈಗೊಳ್ಳುವುದರ ಮೂಲಕ ಸರ್ಕಾರದ ಪರಿಸರ ವಿರೋಧಿ ಧೋರಣೆಯನ್ನು ವಿರೋಧಿಸಿ ಪರಿಸರ ರಕ್ಷಿಸಿದರು.ಇನ್ನೂ ಅನೇಕ ಪರಿಸರ ವಿರೋಧಿ ಚಟುವಟಿಕೆಗಳಾದ ಕೈಗಾ ಅಣುಸ್ಥಾವರ,ತದಡಿ ಉಷ್ಣಸ್ಥಾವರಗಳನ್ನು ವಿರೋಧಿಸಿದರು.
ಸಸ್ಯಸಂಪತ್ತನ್ನು ಉಳಿಸಿ ಬೆಳೆಸುವುದರ ಮೂಲಕ ಉಸಿರಿರುವ ಎಲ್ಲರಲ್ಲೂ ಹಸಿರು ಪ್ರಜ್ಞೆಯನ್ನು ಮೂಡಿಸಿ *ಹಸಿರು ಸ್ವಾಮೀಜಿ* ಎನ್ನುವ ಅನ್ವರ್ಥನಾಮಕ್ಕೆ ಭಾಜನರಾದರು.ಪ್ರತಿವರ್ಷವೂ *ಕೃಷಿ ಜಯಂತಿ* ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕೃಷಿಕರಿಗೆ ಉತ್ತೇಜನವನ್ನೂ ನೀಡುತ್ತಿದ್ದಾರೆ.
ಹಲವಾರು ಶಾಲಾ-ಕಾಲೇಜುಗಳಲ್ಲಿ *ವ್ಯಸನ ಮುಕ್ತ ಸಮಾಜ ನಿರ್ಮಾಣ* ಎಂಬ ಕಾರ್ಯಕ್ರಮದ ಮೂಲಕ ಹದಿಹರೆಯದವರು ದುಶ್ಚಟಗಳ ದಾಸರಾಗುವುದನ್ನು ತಪ್ಪಿಸಿದರು.
ಸನಾತನ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖಪಾತ್ರವಹಿಸಿದ ಶ್ರೀಗಳು *ಶಾಂಕರ ಸ್ತೋತ್ರ ಸತ್ರ* – *ಭಗವದ್ಗೀತಾ ಅಭಿಯಾನ* ಗಳ ಮೂಲಕ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಿದರು.ಜಾತ್ಯತೀತವಾಗಿ ಆಬಾಲ ವೃದ್ಧರಿಂದ ಸ್ತೋತ್ರ ಪಠಣ,ಭಗವದ್ಗೀತಾ ಪಠಣ ಮಾಡಿಸುವುದರ ಮೂಲಕ ಧರ್ಮ ಪ್ರಜ್ಞೆ ಬೆಳೆಸಿದರು.
*ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ* ಎಂಬ ಧ್ಯೇಯವಾಕ್ಯದೊಂದಿಗೆ 2007ರಲ್ಲಿ ಎಲ್ಲಾ ಮತ -ಧರ್ಮಗಳೊಡಗೂಡಿ ಭಗವದ್ಗೀತಾ ಅಭಿಯಾನವನ್ನು ಪ್ರಾರಂಭಿಸಿದರು. ವ್ಯಕ್ತಿತ್ವವಿಕಾಸ, ನೈತಿಕಶಿಕ್ಷಣ, ಸಾಮಾಜಿಕಸಾಮರಸ್ಯ ಮತ್ತು ರಾಷ್ಟ್ರಿಯಭಾವೈಕ್ಯ ಇವು ಗೀತಾಭಿಯಾನದ ಮುಖ್ಯ ಉದ್ದೇಶಗಳು. ಆ ಸಮಯದಲ್ಲಿ 20ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಿಸಲಾಯಿತು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆ-ತಾಲೂಕು-ಗ್ರಾಮಗಳಲ್ಲಿನ ಶಾಲಾ,ಕಾಲೇಜು,ಮಠ,ಮಂದಿರ ಸಭಾಭವನಗಳಲ್ಲಿ ಮನೆ-ಮನಗಳಲ್ಲಿ ಭಗವದ್ಗೀತೆಯನ್ನು ಅನುರಣಿಸುವಂತೆ ಮಾಡಿದರು.
ಕಳೆದ 13ವರ್ಷಗಳಿಂದಲೂ ಅವಿಚ್ಛಿನ್ನವಾಗಿ ಗೀತೆಯಲ್ಲಿನ ಭಕ್ತಿ-ಕರ್ಮ-ಜ್ಞಾನ ಯೋಗಳಿಗೆ ಮಹತ್ವ ಕೊಟ್ಟು ಶ್ರೀಗಳು ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಹಲವು ಅಧ್ಯಾಯಗಳ ಮಹಾಸಮರ್ಪಣೆ ಹಾಗೂ ಪುನರ್ಮನನದಂತಹ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.
*ಗೀತಾಂತರಂಗ* – *ಯೋಗಪ್ರಕಾಶಿಕಾ* – *ಯೋಗವಾಸಿಷ್ಠ* ಎಂಬಿತ್ಯಾದಿ ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕವನ್ನೂ ಶ್ರೀಮಂತಗೊಳಿಸಿದ್ದಾರೆ.
“ಸಂಘೇ ಶಕ್ತಿಃ ಕಲೌಯುಗೇ” ಎಂಬಂತೆ ಮತಮತದಲ್ಲೂ ಒಮ್ಮತ ಮೂಡಿಸಿ ಸನಾತನ ಸಂಸ್ಕೃತಿಯ ಉಳಿವಿಗೆ-ಬೆಳಗಿಗೆ ಕಾರಣೀಕರ್ತರು ನಮ್ಮ ಶ್ರೀಚರಣರು.
ಇಂತು ಶ್ರೀ ಲಕ್ಷ್ಮೀ ನರಸಿಂಹ ,ಶ್ರೀ ಚಂದ್ರಮೌಳೀಶ್ವರ,ಶ್ರೀ ರಾಜರಾಜೇಶ್ವರಿಯ ಅವಿರತ ಆರಾಧಕರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನಮ್ಮನ್ನೆಲ್ಲ ಅನುಗ್ರಹಿಸಿ ನಮ್ಮಲ್ಲೂ ಧರ್ಮನಿಷ್ಠೆ,ಕರ್ತವ್ಯ ಪ್ರಜ್ಞೆಯನ್ನು ಜಾಗ್ರತಗೊಳಿಸಲೆಂದು ಆಶಿಸುತ್ತಾ ಶ್ರೀ ಚರಣಾರವಿಂದಗಳಲ್ಲಿ ಪದಕುಸುಮಗಳನ್ನು ಸಮರ್ಪಿಸುತ್ತಿದ್ದೇವೆ.
✍️ ಶುಭಮಂಗಳಾ ಹೆಗಡೆ ಅಜ್ಜಿಮನೆ