ಋಗ್ವೇದ – ಕಿರುಪರಿಚಯ

posted in: Articles | 0

ವಿಶ್ವದಮೂಲನಾದಭಗವಂತನಿಂದಸೃಷ್ಟಿಕಾರ್ಯವುಆರಂಭವಾದಾಗಆತಮೊದಲುಆಕಾಶವನ್ನುಸೃಷ್ಟಿಸಿದನಂತೆ. ಈಆಕಾಶದಿಂದಉತ್ಪನ್ನವಾದದ್ದೇಶಬ್ದತತ್ತ್ವ. ಶಬ್ದವುವಿಷಯದಗ್ರಹಿಕೆಯನ್ನುಅಥವಾಜ್ಞಾನವನ್ನುಉಂಟುಮಾಡಲುಕಾರಣವಾಗಿರುತ್ತದೆ. ಭಗವಂತನಿಂದಹೊರಟಆಶಬ್ದತರಂಗಗಳನ್ನುಸಾಕ್ಷಾತ್ಕರಿಸಿಕೊಂಡಋಷಿಗಳಸಾಧನೆಯಫಲಗಳೇ ‘ವಿದ್ಜ್ಞಾನೇ’ ಎಂಬಧಾತುವಿನಿಂದಉತ್ಪನ್ನವಾದವೇದಗಳು. ಅಂದರೆಜ್ಞಾನಸಾಧನಗಳುಎಂದುಅರ್ಥ. 

ಇಂತಹ ವೇದಗಳಲ್ಲಿಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ” 

ಎನ್ನುತ್ತ ಮನುಷ್ಯರಿಗೇ ವಿಶಿಷ್ಟವಾದ ಜ್ಞಾನದ ಹೊಳೆಯನ್ನು ಹರಿಸುವ ವೇದವೇ ಋಗ್ವೇದ. ವೇದ ಶಬ್ದದ ಅರ್ಥವೇ ಜ್ಞಾನ. ಅಂತಹ ಜ್ಞಾನದ ವಿಭಾಗಗಳಾದ ಭೌತಿಕ (ಪ್ರಾಪಂಚಿಕ), ದೈವೀಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ನಮ್ಮತ್ತ ತರುವ ವೇದವಾಗಿ ಋಗ್ವೇದ ಕಂಡುಬರುತ್ತದೆ.

    ಪರಮಾತ್ಮನ ನಿಶ್ಶ್ವಾಸರೂಪವಾದ ಅಖಂಡವೇದ ರಾಶಿಯನ್ನು ಯಜ್ಞಗಳಲ್ಲಿ ವೇದಮಂತ್ರಗಳ ಉಪಯೋಗ ಹಾಗೂ ಅವುಗಳ ಲಕ್ಷಣಕ್ಕನುಗುಣವಾಗಿ ಭಗವಾನ್ ವ್ಯಾಸ ಮಹರ್ಷಿಗಳು ವೇದಮಂತ್ರಗಳನ್ನು ನಾಲ್ಕು ವಿಭಾಗವನ್ನಾಗಿಸಿದರು. ಹಾಗೂ ಅವುಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ ಎಂದು ಕರೆದು, ಅವುಗಳಲ್ಲಿ ಒಂದೊಂದು ವೇದವನ್ನೂ ತಮ್ಮ ಒಬ್ಬೊಬ್ಬ ಶಿಷ್ಯರಿಗೆ ಉಪದೇಶಿಸಿದರು. 

ಇಂತಹ ಋಗ್ವೇದದಲ್ಲಿ ಹತ್ತು ಮಂಡಲಗಳಿವೆ. ಪ್ರತಿಯೊಂದು ಮಂಡಲವನ್ನೂ ಅನುವಾಕಗಳನ್ನಾಗಿಯೂ, ಆ ಅನುವಾಕಗಳನ್ನು ಸೂಕ್ತಗಳನ್ನಾಗಿಯೂ ವಿಭಾಗಿಸಲಾಗಿದೆ. ಈ ಸೂಕ್ತಗಳ ರಚನೆಯಾಗಿರುವುದು ಋಕ್ಕುಗಳಿಂದ. ಸಾಮಾನ್ಯವಾಗಿ ಒಂದು ಸೂಕ್ತದಲ್ಲಿ ಎಷ್ಟು ಬೇಕಾದರೂ ಋಕ್ಕುಗಳಿರಬಹುದು. ಒಂದು ಸೂಕ್ತವನ್ನು ಉಂಟುಮಾಡುವ ಈ ಋಕ್ಕುಗಳು ಅಗ್ನಿಸೂಕ್ತಾದಿಗಳಲ್ಲಿ ಕಂಡುಬರುವಂತೆ ಯಾರಾದರೂ ಒಬ್ಬ ದೇವತೆಯ ಕುರಿತಾಗಿಯೂ ಇರಬಹುದು ಇಲ್ಲವೇ, ಇಂದ್ರಾಗ್ನಿ, ಮಿತ್ರಾವರುಣರಂತಹ ಸಂಯುಕ್ತ ದೇವತೆಗಳ ಕುರಿತಾಗಿಯಾದರೂ ಇರಬಹುದು. ಒಂದು ಋಕ್ಕಿಗೆ ಒಬ್ಬ ಋಷಿಯೂ ಇರಬಹುದು ಅಥವಾ ಅನೇಕ ಋಕ್ಕುಗಳಿಗೆ ಒಬ್ಬ ಋಷಿಯೂ ಇರಬಹುದು. ಪ್ರತಿಯೊಂದು ಸೂಕ್ತವನ್ನೂ ಸಹ ಅದರ ರಚನಕಾರನಾದ ಋಷಿ, ಆ ಮಂತ್ರದ ಛಂದಸ್ಸು ಹಾಗೂ ಅದರ ಮೂಲಕ ಸ್ತುತಿಸಲಿಕ್ಕಿರುವ ದೇವತೆಯ ಹೆಸರನ್ನೂ ಹೇಳಿ ನಂತರ ಮಂತ್ರವನ್ನು ಹೇಳಬೇಕು.      ಸಾಮಾನ್ಯವಾಗಿ ಒಬ್ಬ ಋಷಿ ಅಥವಾ ಅವನ ವಂಶದವರು (ಶಿಷ್ಯವರ್ಗದವರೂ ಇರಬಹುದು) ರಚನೆ ಮಾಡಿದ ಸೂಕ್ತಗಳು ಸೇರಿ ಒಂದು ಮಂಡಲವಾಗಿರುವುದು ಕಂಡುಬರುತ್ತದೆ. ಆದರೆ ೧,೯ ಮತ್ತು ೧೦ನೇ ಮಂಡಲಗಳಲ್ಲಿ ಮಾತ್ರ ಭಿನ್ನ ಋಷಿಗಳ ಸೂಕ್ತಗಳು ಕಂಡುಬರುತ್ತವೆ. ಮೊದಲನೇ ಮಂಡಲದ ಕರ್ತೃಗಳಾದ ಋಷಿಗಳನ್ನು “ಶತರ್ಚಿನ”ರೆಂದು ಕರೆಯುತ್ತಾರೆ. ಹೆಚ್ಚುಕಡಿಮೆ ಒಂದು ನೂರು ಮಂತ್ರಕ್ಕೆ ಒಬ್ಬ ಋಷಿಯಂತೆ ಸೂಕ್ತಗಳ ಹಂಚಿಕೆಯಾಗಿರುವುದರಿಂದ ಹಾಗೆ ಕರೆದಿರುವ ಸಾಧ್ಯತೆಯುಂಟು.

ಇಲ್ಲಿನ ಪ್ರತಿ ಮಂಡಲದ ಸೂಕ್ತಗಳಲ್ಲಿಯೂ ಒಂದು ನಿಯಮವು ಅನುಸರಿಸಲ್ಪಟ್ಟಿದೆ. ಒಬ್ಬ ಋಷಿಗೆ ಸಂಬಂಧಿಸಿದ ಸೂಕ್ತಗಳಲ್ಲಿ ಮೊದಲು ಅಗ್ನಿದೇವತಾಕವಾದ ಸೂಕ್ತಗಳು ಅದರಲ್ಲಿಯೂ ಮೊದಲು ಗಾಯತ್ರೀ ಛಂದಸ್ಸಿನವು, ನಂತರ ತ್ರಿಷ್ಟುಪ್, ಜಗತೀ ಮುಂತಾದ ಛಂದಸ್ಸಿನವಿರುತ್ತವೆ. ತದನಂತರ ಇಂದ್ರದೇವತಾಕವಾದವು ನಂತರ ವಿಶ್ವೇದೇವತೆಗಳು ಹಾಗೂ ಉಷಸ್ಸುಗಳ ಕುರಿತಾದ ಸೂಕ್ತಗಳಿರುತ್ತವೆ

      ಋಗ್ವೇದದಲ್ಲಿ ಒಟ್ಟು 1017 ಸೂಕ್ತಗಳಿವೆ. ಅವುಗಳೊಳಗೆ 10,550 ಋಕ್ಕುಗಳಿವೆ. ಇವುಗಳನ್ನು ಪಾಠಕ್ಕೆ ಯೋಗ್ಯವಾಗುವಂತೆ ಎಂಟು ಅಷ್ಟಕಗಳನ್ನಾಗಿಯೂ ಅವುಗಳಲ್ಲಿ ಮತ್ತೆ ಎಂಟು ಅಧ್ಯಾಯಗಳನ್ನಾಗಿಯೂ ವಿಭಾಗ ಮಾಡಲಾಗಿದೆ. ಯಜ್ಞದಲ್ಲಿ ಈ ಋಗ್ವೇದವನ್ನು ಪಠಿಸುವವನೇ ‘ಹೋತೃ’ ಎನ್ನುವುದಾಗಿ ಕರೆಸಿಕೊಳ್ಳುತ್ತಾನೆ. 

      “ಏಕವಿಂಶತಿ ಭೇದೇನ ಋಗ್ವೇದ ಕೃತವಾನ್ ಪುರಾ” ಎಂಬ ಚರಣವ್ಯೂಹದ (ವೇದಗಳ ಶಾಖೆಗಳು,ಮಂತ್ರಸಂಖ್ಯೆಗಳು, ವಿಭಾಗಗಳು, ವೇದಾಂಗಾದಿವಿಷಯಗಳನ್ನು ತಿಳಿಸುವ ಸೂತ್ರಗಳು) ಪ್ರಕಾರ ಪ್ರಸ್ತುತ ವೇದಭಾಗವು ಹಿಂದೆ ಇಪ್ಪತ್ತೊಂದು ಶಾಖೆಗಳಿಂದ ಕೂಡಿದ್ದು ಸದ್ಯಕ್ಕೆ ಎರಡೇ ಶಾಖೆಗಳ ಉಪಲಬ್ಧಿಯಿದೆ. ಅವೇ ಶಾಕಲ ಮತ್ತು ಬಾಷ್ಕಲ ಶಾಖೆಗಳು. ಶಾಕಲಶಾಖೆಯು ಅತಿ ಪ್ರಾಚೀನ ಶಾಖೆಯಾಗಿದ್ದು ಮಂಡಲ, ಅನುವಾಕ ಮತ್ತು ಸೂಕ್ತದ ರೂಪದಲ್ಲಿರುವುದು ಇದರ ಲಕ್ಷಣ. ಮತ್ತೊಂದು ಶಾಖೆಯಾದ ಬಾಷ್ಕಲ ಶಾಖೆಯ ಪ್ರವರ್ತಕನಾದ ಬಾಷ್ಕಲ ಇದೇ ಶಾಕಲನ ಐವರು ಶಿಷ್ಯರಲ್ಲಿ ಒಬ್ಬನಾಗಿದ್ದಾನೆ.       ವಿಸ್ತಾರವಾದ ವಿಷಯಗಳ ಕುರಿತಾಗಿ ಮಾಹಿತಿಯನ್ನು ನೀಡುವ ಋಗ್ವೇದವು ಧನ್ವನ ಮಗನಾದ ದಿವೋದಾಸನ ಕಥೆಯನ್ನು ತಿಳಿಸಿ ಆತನೇ ನಾವು ಆದರಿಸುವ ಧನ್ವಂತರಿ ಎನ್ನುವುದನ್ನು ತಿಳಿಸಿಕೊಡುವ ಮೂಲಕವೂ, ಪ್ರಸ್ಕಣ್ವ ಎಂಬ ಋಷಿ ತನಗಿದ್ದ ಕಾಮಾಲೆ ಹಾಗೂ ಹೃದಯಸಂಬಂಧೀ ಕಾಯಿಲೆಯನ್ನು ಸೂರ್ಯನನ್ನು ಸ್ತುತಿಸಿ ಆತನ ಪ್ರಭಾವದಿಂದ ಗುಣಪಡಿಸಿಕೊಳ್ಳುವುದೇ ಮೊದಲಾದ ಅನೇಕ ಆಖ್ಯಾನಗಳಿಂದ ತನ್ನ ಉಪವೇದವಾದ ಆಯುರ್ವೇದದ ಬೆಳವಣಿಗೆಗೆ ಭೂಮಿಕೆಯನ್ನೊದಗಿಸುತ್ತದೆ. ಅಂತೆಯೇ ಋಗ್ವೇದದ ಹತ್ತನೇ ಮಂಡಲದಲ್ಲಿ ಕಾಣಸಿಗುವ ದಾಶರಾಜ್ಞ ಎನ್ನುವ ಹತ್ತು ರಾಜರ ಯುದ್ಧದ ಪ್ರಕರಣದಲ್ಲಿ ಸಂಸ್ಕೃತಕ್ಕೆ ಯುರೋಪಿಯನ್ ಭಾಷೆಗಳೊಂದಿಗೆ ಸಮಾನತೆ ಕಾಣುವುದು ಆರ್ಯರು ಹೊರಗಿನಿಂದ ಇಲ್ಲಿಗೆ ಬಂದದ್ದರಿಂದಲ್ಲ ಬದಲಿಗೆ ಸೌದಾಸನಿಂದ ಸೋತ ರಾಜರು ಇಲ್ಲಿಂದ ಹೊರಹೋಗಿ ಬೇರೆ ಬೇರೆ ದೇಶಗಳಲ್ಲಿ ನೆಲೆಸಿದ್ದರಿಂದ ಎನ್ನುತ್ತ ಪ್ರಪಂಚದಾದ್ಯಂತ ಭಾರತೀಯತೆಯ, ಸನಾತನ ಧರ್ಮದ ಅಚ್ಚು ಮೂಡಿರುವುದನ್ನು ಸ್ಪಷ್ಟಪಡಿಸುತ್ತದೆ. 

ಈವತ್ತಿಗೂ ಇತಿಹಾಸಕಾರರಾಗಿರಲಿ, ಆಧ್ಯಾತ್ಮಬಂಧುಗಳೇ ಆಗಿರಲಿ, ಭಾರತದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಕುರಿತಾದ ಸ್ಪಷ್ಟತೆಯನ್ನು ಕಾಣಲು ಋಗ್ವೇದವನ್ನೇ ಆಧರಿಸುತ್ತಿರುವುದು ವೇದದ ಮಹತ್ತ್ವವನ್ನು ಸಾರಿ ಹೇಳುತ್ತಿದೆ. ಅನೇಕ ರಾಜರ ಆಖ್ಯಾನಗಳು, ಪತ್ನಿಯಾದವಳಿಗೆ ಹೇಳುವ ಕಿವಿಮಾತುಗಳು ಇವೆಲ್ಲ ಅವರ ಹುಡುಕಾಟಕ್ಕೆ ಮೇವನ್ನೊದಗಿಸುತ್ತವೆ. ವೇದದ ಸಾವಿರಪರಿಮಾಣದ ಋಕ್ಕುಗಳು ಯಜುರ್ವೇದದಲ್ಲಿಯೂ ಕಂಡುಬರುತ್ತವೆ. ಇನ್ನು ಅಥರ್ವವೇದವಂತೂ ಋಗ್ವೇದದ ಪ್ರಾಯೋಗಿಕ ವಿಭಾಗದಂತೆಯೇ ಇರುವುದು ಗ್ರಂಥ ಹೇಗೆ ಇತರ ವೇದಗಳಿಗೂ ಉಪಜೀವ್ಯವಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ

     “ಇಮಂ ಮೇ ಗಂಗೇ ಯಮುನೇ ಸರಸ್ವತೀ” ಎನ್ನುತ್ತ ಸರಸ್ವತಿಯ ಇರುವಿಕೆಯ ಆಧಾರವಾಗಿ, ಅದಕ್ಕೂ ಮಿಗಿಲಾಗಿ “ಇಮಂ ಮೇ” ಎನ್ನುವಲ್ಲಿ ಋಷಿಗೆ ಇದ್ದ ಈ ನೆಲದ, ಇಲ್ಲಿನ ಪ್ರತಿಯೊಂದು ಜೀವ-ಜಡ ಅಂಶಗಳ ಕುರಿತಾದ ನಿರ್ವ್ಯಾಜಪ್ರೇಮವನ್ನೂ, ಅಭಿಮಾನವನ್ನೂ ಸೂಚಿಸುವ ಋಗ್ವೇದವು ವೈದಿಕ ವಾಞ್ಮಯದಲ್ಲಿಯೇ ವಿಶಿಷ್ಟವಾಗಿ ವಿದ್ವಾಂಸರಿಂದಾರಂಭಿಸಿ ಸಾಮಾನ್ಯರವರೆದೂ ಆರಾಧ್ಯವಾಗಿ ರಾರಾಜಿಸುತ್ತಿದೆ.

ಲೇಖನ – ಶ್ರೀ ನಚಿಕೇತ ಹೆಗಡೆ ಗೋಡೆ. 

ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ

ಫೋಟೋ – ಗೂಗಲ್ ಕೃಪೆ