ಸಾಮವೇದ – ಕಿರುಪರಿಚಯ

posted in: Articles | 0

ಸಕಲ ಉಪನಿಷತ್ತುಗಳ ಸಾರವಾದ ಭಗವದ್ಗೀತೆಯ ಹತ್ತನೇ ಅಧ್ಯಾಯ ಅಂದರೆ ವಿಭೂತಿಯೋಗದಲ್ಲಿ ಭಗವಾನ್ ಶ್ರೀಕೃಷ್ಣ “ವೇದಾನಾಂ ಸಾಮವೇದೋऽಸ್ಮಿ” ಅರ್ಥಾತ್ ವೇದಗಳಲ್ಲಿ ತಾನು ಸಾಮವೇದ ಎನ್ನುವುದಾಗಿ ಹೇಳುತ್ತಾನೆ. ಅಂದರೆ ವೇದಗಳಲ್ಲಿ ಭಗವಂತ ಸಾಮವೇದವೇ ತಾನಾಗಲು ಬಯಸಿದ. 

     ಸಾಮವೇದವೇ ಏಕೆ? ಏಕೆಂದರೆ ಪತಂಜಲಿ ಮಹರ್ಷಿಗಳು ತಮ್ಮ ಯೋಗಸೂತ್ರದ ಮಹಾಭಾಷ್ಯದಲ್ಲಿ ಹೇಳುವಂತೆ “ಸಹಸ್ರವರ್ತ್ಮಾ ಸಾಮವೇದಃ” ಅದು ಸಾವಿರ ಶಾಖೆಗಳುಳ್ಳದ್ದು. ಅದರ ವಿಸ್ತಾರ ಮತ್ತು ಮಹತ್ತ್ವ ಅಷ್ಟಿದೆ. ಅದು ಸಾಮವೇದದಲ್ಲಿನ ವಿಷಯವಿಸ್ತಾರ, ವಿಷಯಗಾಂಭೀರ್ಯ. ಹಾಗಾಗಿಯೇ ಅದು ಭಗವಂತನ ಆಯ್ಕೆ. 

     ನಾವು ಸಾಮಾನ್ಯವಾಗಿ ಬ್ರಹ್ಮ ಎನ್ನುವ ಶಬ್ದದ ಉಚ್ಚಾರವನ್ನು ‘ಮ’ಕಾರವನ್ನು ಪೂರ್ವದಲ್ಲಿ ಉಚ್ಚರಿಸಿ ತದನಂತರ ‘ಹ’ಕಾರವನ್ನುಚ್ಚರಿಸುತ್ತೇವಲ್ಲ, ಅದು ಸಾಮವೇದದ ಪ್ರಭಾವ. ಈ ವೇದ ಗಾನಪ್ರಧಾನವಾದದ್ದು. ತತ್ಕಾರಣದಿಂದಾಗಿ ಸಾಮಗಾನ ಮಾ(ಹಾ)ಡುವಾಗ ತಾರಕದಿಂದ ಮಂದ್ರಕ್ಕಿಳಿಯುವ ಕಾಲಕ್ಕೆ ಅವಿಚ್ಚಿನ್ನತೆಯಿರಬೇಕು. ಅದನ್ನು ಸಾಧಿಸಲಿಕ್ಕಾಗಿಯೇ ಬ್ರಹ್ಮಶಬ್ದದ ಉಚ್ಚಾರ ಕ್ರಮ ಸಾಮದಲ್ಲಿ ‘ಮ’ಕಾರಪೂರ್ವಕವಾಗಿರುವುದು.

ಯಜ್ಞದಲ್ಲಿ ಸಾಮಗಾಯಕನಿಗೆ ಉದ್ಗಾತೃ ಎನ್ನುವ ಸ್ಥಾನ. ಕೃಷ್ಣದ್ವೈಪಾಯನ ವ್ಯಾಸರ ಶಿಷ್ಯರಾದ ಜೈಮಿನಿ ಮಹರ್ಷಿಗಳು ಸಾಮವೇದಪ್ರವರ್ತಕರು. ಈ ಜೈಮಿನಿಯೂ ಆತನ ಶಿಷ್ಯರಾದ ಸುಸಾಮ, ಕೌಥುಮ, ಪೌಷ್ಪಂಜಿಯೂ ಮಹಾಭಾರತದಲ್ಲಿನ ಕೆಲವು ಯಜ್ಞಗಳಲ್ಲಿ ಸಾಮಗರಾಗಿ ಕಾಣಿಸಿಕೊಳ್ಳುತ್ತಾರೆ. ಬೃಹದಾರಣ್ಯಕೋಪನಿಷತ್ತಿನಲ್ಲಿ ಯಾಜ್ಞವಲ್ಕ್ಯರ ಶಿಷ್ಯನಾದ ‘ಸಾಮಶ್ರವ’ ಸಹ ಸಾಮವನ್ನು ಅನುಸರಿಸುವವನೇ ಆಗಿದ್ದನೆಂಬುದು ಆತನ ಹೆಸರಿನ ಮಾತ್ರದಿಂದಲೇ ತಿಳಿಯುವುದೊಂದು ವಿಶೇಷ. ಹೀಗಿರುವುದು ಸಾಮವೇದದ ಪರಂಪರೆ. 

      ಸಾಮವೇದದಲ್ಲಿ ವಿಷಯವಿಸ್ತಾರ ಮತ್ತು ಗಾಂಭೀರ್ಯಗಳು ಮೇಳೈಸಿರುವುದನ್ನು ಈ ಹಿಂದೆಯೇ ಹೇಳಿದೆನಷ್ಟೇ. ರಾಮಾಯಣದಲ್ಲಿನ ಅರಣ್ಯಕಾಂಡದಲ್ಲಿ ವಟುವೇಷಧಾರಿಯಾದ ಹನೂಮಂತನ ಶುದ್ಧವೂ, ಕರ್ಣರಂಜಕವೂ ಆದ ಮಾತುಗಳನ್ನು ಕೇಳಿದ ಶ್ರೀರಾಮ “ನಾಸಾಮವೇದವಿದುಷಃ ಶಕ್ಯಮೇವಂ ಪ್ರಭಾಷಿತುಮ್” ಎಂತಲಾಗಿ ಹೇಳುತ್ತಾನೆ. ಅಂದರೆ ಸಾಮವೇದ ವೈದುಷ್ಯವನ್ನು (ವಿದ್ವತ್ತನ್ನು) ನೀಡುತ್ತದೆ. ಅದಿಲ್ಲದೇ ಇಷ್ಟು ವ್ಯಾಕರಣಬದ್ಧವಾಗಿ, ಸ್ಪಷ್ಟವಾಗಿ, ವಿನೀತವಾಗಿ, ಸತರ್ಕವಾಗಿ ಮಾತನಾಡಲು ಸಾಧ್ಯವಿಲ್ಲ ಎಂಬುದು ರಾಮನ ಅಭಿಮತ. 

      ಇಂತಹ ಸಾಮವೇದದಲ್ಲಿ ಮೂಲದಲ್ಲಿ ಬೌದ್ಧಗ್ರಂಥಗಳೂ ಹೇಳುವಂತೆ ಸಾವಿರ ಶಾಖೆಗಳಿದ್ದದ್ದು ಸತ್ಯವಾದರೂ ಕಾಲಪರ್ಯಯದಿಂದ ಲೋಪವಾಗಿ ಸದ್ಯಕ್ಕೆ ಉಪಲಭ್ಯವಿರುವುದು  ಹನ್ನೆರಡು ಶಾಖೆಗಳು ಮಾತ್ರ. ಅಂದರೆ ಒಂದು ಪ್ರತಿಶತಕ್ಕಿಂತಲೂ ಕಡಿಮೆ!! ಅವು – ರಾಣಾಯನೀಯ, ಕೌಥುಮ, ಕಾಲಾಪ, ಮಹಾಕಾಲಾಪ, ಲಾಂಗಲಿಕ, ಸಾತ್ಯಮುಗ್ರ, ಮತ್ತು ಕೌಥುಮದಲ್ಲಿ ಸಾರಾಯಣೀಯ, ವಾತರಾಯಣೀಯ, ವೈತಧೃತ, ಪ್ರಾಚೀನಾಸ್ತೇಜಸ ಮತ್ತು ಅನಿಷ್ಟಕ ಎನ್ನುವ ಶಾಖೆಗಳು. 

ಸಾಮದಲ್ಲಿ ಗಾಯನ ಮತ್ತು ಅರ್ಚಿಕ ಎನ್ನುವುದಾಗಿ ಎರಡು ಭೇದಗಳು. ಸಾಮವೇದದ ಬ್ರಾಹ್ಮಣವಿಭಾಗದಲ್ಲಿಯೇ ಬರುವ ತಲವಕಾರಶಾಖೆಯಲ್ಲಿಯೇ ಬರುವ ಕೇನೋಪನಿಷತ್ತು ಈ ವೇದದ ವೇದಾಂತಭಾಗ. “ಕೇನೇಷಿತಂ ಪತತಿ ಪ್ರೇಷಿತಂ ಮನಃ” ಎನ್ನುವುದಾಗಿ ಆರಂಭವಾಗುವುದರಿಂದ ಇದನ್ನು ಕೇನೋಪನಿಷತ್ತೆನ್ನುವುದಾಗಿ ಕರೆಯುತ್ತಾರೆ. ಆಚಾರ್ಯರ ಮತ್ತು ಶಿಷ್ಯರ ಹೆಸರುಗಳನ್ನು ಉಲ್ಲೇಖಿಸುವ ಉಳಿದ ಉಪನಿಷತ್ತುಗಳಂತೆ ಇಲ್ಲಿನ ವಿನ್ಯಾಸವಿಲ್ಲ. ಇಲ್ಲಿನ ಗುರು ಹಾಗೂ ಶಿಷ್ಯ ಇಬ್ಬರೂ ಅಜ್ಞಾತನಾಮಧೇಯರು. ಹೆಸರಿಲ್ಲ. ಆದರೆ ವಿವರಿಸಲ್ಪಟ್ಟಿರುವ ಆಧ್ಯಾತ್ಮ ವಿಚಾರ ಮಾತ್ರ ಬಹಳ ಗಂಭೀರವೂ ಆಶ್ಚರ್ಯಕರವೂ ಆಗಿರುವುದು ಕಂಡುಬರುತ್ತದೆ. 

        ಈ ಪ್ರಕಾರವಾಗಿ ವರ್ಣಿಸಲ್ಪಟ್ಟ ಮಹಿಮೆಗಳಿಂದ ಕೂಡಿರುವುದರಿಂದಲೇ ಶ್ರೀಕೃಷ್ಣ ವೇದಗಳಲ್ಲಿ ಸಾಮವೇ ತಾನಾಗಲು ಬಯಸಿರುವುದು ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ…..

ಲೇಖನ – ಶ್ರೀ ನಚಿಕೇತ ಹೆಗಡೆ ಗೋಡೆ.

ಪ್ರಸರಣ – ಶ್ರೀ ಸ್ವರ್ಣವಲ್ಲೀ ಭಕ್ತವೃಂದ