ಉಪನಿಷತ್ಸಿಂಧು

posted in: Articles | 0

ವಿಶ್ವನಾಥ ಸುಂಕಸಾಳ

ವೇದಾಂತ ಮತ್ತು ಉಪನಿಷತ್:     ಉಪನಿಷತ್ತುಗಳಿಗೆ ಮತ್ತೊಂದು ಹೆಸರು ವೇದಾಂತ ಎಂಬುದಾಗಿ. ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳನ್ನು ಸೇರಿಸಿಯೂ ವೇದಾಂತವೆಂದೇ ಕರೆಯಲಾಗುತ್ತದೆ. ಇದನ್ನೇ ಪ್ರಸ್ಥಾನತ್ರಯ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಉಪನಿಷತ್ತುಗಳನ್ನು ಶ್ರುತಿಪ್ರಸ್ಥಾನವೆಂದೂ, ಭಗವದ್ಗೀತೆಯನ್ನು ಸ್ಮೃತಿಪ್ರಸ್ಥಾನವೆಂದೂ ಮತ್ತು ಬಾದರಾಯಣರು ರಚಿಸಿರುವ ೫೫೫ ಸೂತ್ರಗಳಿಂದ ಕೂಡಿದ ಬ್ರಹ್ಮಸೂತ್ರವನ್ನು ನ್ಯಾಯಪ್ರಸ್ಥಾನವೆಂದೂ ಗುರುತಿಸಲಾಗುತ್ತದೆ. ಇವಿಷ್ಟೇ ಅಲ್ಲದೇ, ಉಪನಿಷತ್ತುಗಳ ಸಿದ್ಧಾಂತವನ್ನು ಪ್ರತಿಪಾದಿಸುವ ಪ್ರಕರಣಗ್ರಂಥಗಳೂ ಕೂಡ ವೇದಾಂತದರ್ಶನದ ಪರಿಧಿಯೊಳಗೆ ಬರುತ್ತವೆ. ಹೀಗೆ ಇವೆಲ್ಲವನ್ನೂ ಸೇರಿ ವೇದಾಂತ ಎನ್ನಲಾಗುತ್ತದೆ. ಆದರೆ ಈ ವ್ಯಾಖ್ಯೆಯು ವೇದಾಂತವೆಂಬ ಶಬ್ದಕ್ಕೆ ಒಂದು ದರ್ಶನ ಎಂಬ ಅರ್ಥವನ್ನಿಟ್ಟುಕೊಂಡು ಹೇಳಿದುದಾಗಿದೆ. ವಸ್ತುತಃ ವೇದಾಂತವೆಂದರೆ, ವೇದದ ಅಂತ ಅಥವಾ ವೇದದ ನಿಶ್ಚಯ ಎಂದರ್ಥ. ‘ಅಂತ’ ಶಬ್ದಕ್ಕೆ ನಿಶ್ಚಯ ಎಂಬರ್ಥವಿದೆ. ಸಮಗ್ರ ವೇದದ ತಾತ್ಪರ್ಯವನ್ನು ತಿಳಿಸುವುದೇ ವೇದಾಂತ. ಹಾಗಾಗಿ ವೇದಾಂತವೆಂಬ ಶಬ್ದಕ್ಕೆ ಉಪನಿಷತ್ತು ಎಂಬುದೇ ಮುಖ್ಯ ಅರ್ಥ. ಉಪನಿಷತ್ತುಗಳ ಸಿದ್ಧಾಂತವನ್ನು ವಿವೇಚಿಸುವುದಕ್ಕಾಗಿ ಪ್ರಣೀತವಾದ ಇತರ ಗ್ರಂಥಗಳಲ್ಲಿಯೂ ಈ ವೇದಾಂತ ಎಂಬ ಶಬ್ದವು ಗೌಣಾರ್ಥದಲ್ಲಿ ಪ್ರಯುಕ್ತವಾಗಿದೆ.

          ಉಪನಿಷತ್ ಶಬ್ದದ ನಿರ್ವಚನ : ವಸ್ತುತಃ ಉಪನಿಷತ್ ಶಬ್ದಕ್ಕೆ ಬ್ರಹ್ಮವಿದ್ಯೆ ಎಂದು ಶಂಕರರು ತಿಳಿಸಿದ್ದಾರೆ. ಈ ಶಬ್ದದಲ್ಲಿ ಉಪ ಮತ್ತು ನಿ ಎಂಬ ಎರಡು ಉಪಸರ್ಗಗಳಿವೆ. ಸಂಸ್ಕೃತದ ಷದಲೃ (ಸದ್) ಎಂಬ ಧಾತುವಿನಿಂದ ಈ ಉಪನಿಷತ್ ಪದ ನಿಷ್ಪನ್ನಗೊಂಡಿದೆ. ಕ್ವಿಪ್ ಪ್ರತ್ಯಯವೂ ಈ ಶಬ್ದದಲ್ಲಿ ಅಡಕವಾಗಿದೆ. ಈ ಧಾತುವಿಗೆ ವಿಶರಣ, ಗತಿ ಮತ್ತು ಅವಸಾದನ ಎಂಬ ಮೂರು ಅರ್ಥಗಳಿವೆ. ವಿಶರಣ ಎಂದರೆ ನಾಶವೆಂದರ್ಥ. ಯಾರು ಈ ಉಪನಿಷತ್ತೆಂಬ ವಿದ್ಯೆಯನ್ನು ಬಳಿ ಸಾರುತ್ತಾರೋ ಅವರ ಅವಿದ್ಯಾದಿಗಳನ್ನು ನಾಶ ಮಾಡುವುದರಿಂದ ಆ ವಿದ್ಯೆಯನ್ನೇ ಉಪನಿಷತ್ ಎನ್ನಲಾಗುತ್ತದೆ. ಹಾಗೆಯೇ ಗತಿ ಎಂಬುದು ಈ ಧಾತುವಿನ ಎರಡನೆಯ ಅರ್ಥ. ಗತಿ ಎಂದರೆ ಪ್ರಾಪ್ತಿ ಎಂದರ್ಥ. ಬ್ರಹ್ಮಪ್ರಾಪ್ತಿಗೆ ಕಾರಣವಾಗಿರುವುದರಿಂದ ಬ್ರಹ್ಮವಿದ್ಯೆಯನ್ನೇ ಉಪನಿಷತ್ ಎಂದು ಕರೆಯಲಾಗುತ್ತದೆ. ಮೂರನೆಯ ಅರ್ಥ ಅವಸಾದನ ಅಥವಾ ಶಿಥಿಲತೆ. ಸಂಸಾರಕ್ಕೆ ಕಾರಣವಾಗಿರುವ ಎಲ್ಲವುಗಳ ಶಿಥಿಲತೆಯನ್ನು ಉಂಟುಮಾಡುವುದರಿಂದ ವಿದ್ಯೆಯೇ ಉಪನಿಷತ್ತು. ಹೀಗೆ ಈ ಮೂರೂ ಅರ್ಥಗಳಲ್ಲೂ ಬ್ರಹ್ಮವಿದ್ಯೆಯನ್ನೇ ಉಪನಿಷತ್ ಎಂದು ಕರೆಯಲಾಗುತ್ತದೆ. ಹಾಗಾಗಿ ಉಪನಿಷತ್ ಎಂಬ ಶಬ್ದದ ಅರ್ಥ ಬ್ರಹ್ಮವಿದ್ಯೆಯೆಂದು. ಆದರೆ ಲೋಕದಲ್ಲಿ ‘ಉಪನಿಷತ್ತನ್ನು ಓದುತ್ತೇನೆ’ ಎಂಬಿತ್ಯಾದಿ ಪ್ರಯೋಗಗಳಲ್ಲಿ ಗ್ರಂಥ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ. ಅದು ಅಮುಖ್ಯಾರ್ಥವಾಗಿದೆ ಅಥವಾ ಗೌಣಪ್ರಯೋಗವಾಗಿದೆ. ಆಯುಸ್ಸನ್ನು ಹೆಚ್ಚಿಸುವ ಕಾರಣದಿಂದ ತುಪ್ಪವನ್ನೇ ಆಯುಸ್ಸು ಎಂದು ಕರೆದರೆ ಹೇಗೋ ಹಾಗೆ ಗೌಣಪ್ರಯೋಗವಿದು.

          ದರ್ಶನ ಮತ್ತು ಅದರ ವಿಭಾಗ: ಇನ್ನು ಈ ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳನ್ನು ಸೇರಿಸಿ ವೇದಾಂತ ದರ್ಶನ ಎಂದೂ ಕರೆಯಲಾಗುತ್ತದೆ ಎಂಬುದನ್ನು ನೋಡಿದೆವು. ದರ್ಶನವೆಂದರೆ ಸಾಕ್ಷಾತ್ಕಾರ ಎಂದರ್ಥ. ಭಾರತೀಯ ತತ್ತ್ವಶಾಸ್ತ್ರದ ಕ್ಷೇತ್ರದಲ್ಲಿ ಅನೇಕ ದರ್ಶನಗಳಿವೆ. ಇವೆಲ್ಲವುಗಳ ಮುಖ್ಯ ಲಕ್ಷ್ಯವೂ ಆತ್ಮನ ಸಾಕ್ಷಾತ್ಕಾರ ಅಥವಾ ನಿರತಿಶಯವಾದ ಸುಖದ ಪ್ರಾಪ್ತಿಯೇ ಆಗಿದೆ. ಅದನ್ನು ಒಂದೊಂದು ದರ್ಶನದಲ್ಲೂ ಒಂದೊಂದು ಶಬ್ದದಿಂದ ವ್ಯವಹರಿಸಲಾಗಿದೆ. ನಿಃಶ್ರೇಯಸ್ಸು, ಕೈವಲ್ಯ, ಮೋಕ್ಷ, ನಿರ್ವಾಣ ಹೀಗೆ ಬೇರೆ ಬೇರೆ ಶಬ್ದಗಳಿಂದ ಹೇಳಿದರೂ ಸಂಸಾರದಿಂದ ನಿವೃತ್ತಿ ಎಂಬ ಅರ್ಥವಂತೂ ಸಮಾನವಾಗಿದೆ. ಇಂಥ ಸಾಕ್ಷಾತ್ಕಾರಕ್ಕಾಗಿ ಹೊರಟ ದರ್ಶನಗಳನ್ನು ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಆಸ್ತಿಕ ದರ್ಶನ ಮತ್ತು ಎರಡನೆಯದು ನಾಸ್ತಿಕ ದರ್ಶನ ಎಂಬುದಾಗಿ. ಈ ಆಸ್ತಿಕ ಮತ್ತು ನಾಸ್ತಿಕ ದರ್ಶನಗಳೆಂಬ ವಿಭಾಗವನ್ನು ವೇದದ ಪ್ರಾಮಾಣ್ಯವನ್ನು ಒಪ್ಪುವ ಮತ್ತು ಒಪ್ಪದ ಆಧಾರದಲ್ಲಿ ಮಾಡಲಾಗಿದೆ. ಅಂದರೆ ಯಾರು ವೇದವನ್ನು ಪ್ರಮಾಣವನ್ನಾಗಿ ಸ್ವೀಕರಿಸುತ್ತಾರೋ ಅವರು ಆಸ್ತಿಕರೆಂದೂ, ಒಪ್ಪದವರು ನಾಸ್ತಿಕರೆಂದೂ ಕರೆಯಲ್ಪಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ವಿಚಾರಧಾರೆಯನ್ನೂ ಅಗೌರವಿಸುವ ಪದ್ಧತಿಯಿಲ್ಲ. ಒಂದು ವಿಚಾರವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಒಪ್ಪದವರನ್ನು ಬಹಿಷ್ಕರಿಸುವ ರೀತಿ ಯಾವತ್ತಿಗೂ ಭಾರತದಲ್ಲಿರಲಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಬದಲಿಗೆ ಎಲ್ಲರನ್ನೂ, ಎಲ್ಲ ಚಿಂತನೆಗಳನ್ನೂ ಒಳಗೊಂಡು ವಿಚಾರಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರಲಾಗಿದೆ. ಪಾಶ್ಚಾತ್ತ್ಯರಿಗೂ ಭಾರತೀಯ ಸಂಸ್ಕೃತಿಗೂ ಇರುವ ಬಹುಮುಖ್ಯ ವ್ಯತ್ಯಾಸವೇ ಈ ವಿಚಾರಸಹಿಷ್ಣುತೆ ಎನ್ನಬಹುದು. ಹಾಗಾಗಿಯೇ ತರ್ಕಕ್ಕೆ ಹಾಗೂ ವಾಸ್ತವಕ್ಕೆ ಅತ್ಯಂತ ವಿರುದ್ಧವಾದ ವಾದವನ್ನು ಪ್ರತಿಪಾದಿಸುವ ಚಾರ್ವಾಕಸಿದ್ಧಾಂತಕ್ಕೂ ದರ್ಶನದ ಸಾಲಿನಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ.   

          ಆಸ್ತಿಕ ದರ್ಶನಗಳೆಂದರೆ ವೈಶೇಷಿಕ, ನ್ಯಾಯ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ ಮತ್ತು ಉತ್ತರ ಮೀಮಾಂಸಾ ಎಂಬುದಾಗಿ ಆರು ದರ್ಶನಗಳು ಪ್ರಸಿದ್ಧವಾಗಿವೆ. ಇವುಗಳಲ್ಲಿ ಉತ್ತರ ಮೀಮಾಂಸಾ ದರ್ಶನವನ್ನೇ ವೇದಾಂತ ದರ್ಶನವೆಂದೂ, ಔಪನಿಷದ್ ದರ್ಶನವೆಂದೂ ಕರೆಯಲಾಗುತ್ತದೆ. ಷಡ್ದರ್ಶನಗಳೆಂದೇ ಪ್ರಸಿದ್ಧವಾದ ಈ ಆರೂ ದರ್ಶನಗಳೂ ವೇದವನ್ನು ಪರಮ ಪ್ರಮಾಣವನ್ನಾಗಿ ಸ್ವೀಕರಿಸುತ್ತವೆ. ನಾಸ್ತಿಕ ದರ್ಶನಗಳು ಪ್ರಧಾನವಾಗಿ ಮೂರು ವಿಭಾಗಗಳಲ್ಲಿ ವಿಭಕ್ತವಾಗಿವೆ. ಚಾರ್ವಾಕ ದರ್ಶನ, ಬೌದ್ಧ ದರ್ಶನ ಮತ್ತು ಜೈನ ದರ್ಶನ ಎಂಬುದಾಗಿ. ಇವುಗಳಲ್ಲಿ ವೇದವನ್ನು ಪ್ರಮಾಣವನ್ನಾಗಿ ಸ್ವೀಕರಿಸಲಾಗಿಲ್ಲ. ಬದಲಿಗೆ ಬೌದ್ಧ ಹಾಗೂ ಜೈನರಲ್ಲಿ ಆಯಾ ಪ್ರವರ್ತಕರ ವಾಕ್ಯಗಳನ್ನು ಪ್ರಮಾಣವನ್ನಾಗಿ ಸ್ವೀಕರಿಸಲಾಗಿದೆ. 

          ಹೀಗೆ ವೇದಾಂತದರ್ಶನವು ಒಂದು ಆಸ್ತಿಕದರ್ಶನವಾಗಿದ್ದು, ಅದರಲ್ಲಿ ಉಪನಿಷತ್ತುಗಳಿಗೆ ಆದ್ಯವಾದ ಸ್ಥಾನವಿದೆ. ಉಪನಿಷತ್ ವಾಕ್ಯಗಳನ್ನು ವ್ಯಾಖ್ಯಾನಿಸುವುದೇ ವೇದಾಂತದರ್ಶನದ ಮುಖ್ಯ ಕಾರ್ಯವಾಗಿದೆ. ಉಪನಿಷತ್ತುಗಳು ಭಾರತೀಯ ಸಂಸ್ಕೃತಿಯ ಜೀವಾತುಭೂತವಾಗಿವೆ. ಭಾರತೀಯ ಚಿಂತನ ಪದ್ಧತಿ ಹಾಗೂ ಜೀವನಪದ್ಧತಿಯ ಮೇಲೆ ಉಪನಿಷತ್ತುಗಳ ಗಾಢವಾದ ಪ್ರಭಾವವಿದೆ. ಹೆಚ್ಚೇನು? ಉಪನಿಷತ್ತುಗಳ ವಿನಾ ಭಾರತೀಯತೆಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಉಪನಿಷತ್ತುಗಳು ಪ್ರತಿಪಾದಿಸುವ ಸಾರ್ವಕಾಲಿಕ ತತ್ತ್ವಗಳು ಇಹ-ಪರಜೀವನಕ್ಕೆ ಮಾರ್ಗದರ್ಶಕವಾಗಿವೆ. ದಿನದಿಂದ ದಿನಕ್ಕೆ ಔಪನಿಷತ್ತತ್ತ್ವಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತಿವೆ. ಯಾಕೆಂದರೆ, ಮನುಷ್ಯನ ಮೂಲಭೂತವಾದ ಇಚ್ಛೆಯೆಂದರೆ ಅದು ಸುಖಪ್ರಾಪ್ತಿಯೇ ಆಗಿದೆ. ಈ ಮಾರ್ಗವನ್ನು ಉಪನಿಷತ್ತುಗಳು ಅತ್ಯಂತ ವ್ಯವಸ್ಥಿತವಾಗಿ ಬೋಧಿಸುತ್ತವೆ. ಹಾಗೆಯೇ ವೇದಗಳು ಅಪೌರುಷೇಯವಾಗಿರುವುದರಿಂದ ಕಾಲಾತೀತವಾದ, ದೋಷರಹಿತವಾದ, ಅನುಭವದಿಂದ ಸಾಕ್ಷಾತ್ಕರಿಸಿಕೊಳ್ಳಬಹುದಾದ ಮಾರ್ಗವನ್ನು ಉಪನಿಷತ್ತುಗಳು ಬೋಧಿಸಿವೆ.

          ಅವೆಲ್ಲವನ್ನೂ ಕ್ರಮೇಣ ನಾವು ಮುಂದಿನ ಸಂಚಿಕೆಗಳಲ್ಲಿ ನೋಡಲಿದ್ದೇವೆ.

ಚಿತ್ರಕೃಪೆ – ಗೂಗಲ್