ನಮಿಸುವೆನು ಶಾರದೆಯೆ

posted in: Kavan | 0

ನಮಿಸುವೆನು ಶಾರದೆಯೆ ವಿದ್ಯಾಧಿದೇವತೆಯೆ
ಕಮಲಮುಖಿ ಸರಸತಿಯೆ ಹಂಸಾಧಿರೂಢೆ.
ವಿಮಲ ಬಿಳಿವಸನವನು ಧರಿಸಿದಳೆ ದಯೆತೋರೆ
ಕಮನೀಯ ಕಾಂತಿಯನು ಬೀರುತಿಹ ವರದೆ. ೧ .


ಮೃದುವಾಣಿ ಕಲಹಂಸೆ ಪುಸ್ತಕವ ಹಿಡಿದವಳೆ
ಮಧುರತಮ ವೀಣೆಯನು ಮಿಡಿಯುತಿಹ ತಾಯೆ.
ಸುಧೆಯೊಡನೆ ಬಂದವಳ ಚಲುವಸಖಿ ಕುಶಲಮತಿ
ಮುದದಿಂದ ನಿನ್ನನ್ನು ನುತಿಸುವೆನು ಕಾಯೆ. ೨ .


ವೇದಗಳ ಮಾತೆ ನೀ ಆ ಬ್ರಹ್ಮನಾ ರಾಣಿ
ಚೋದಿಸುವೆ ಬುದ್ಧಿಯನು ನೀನಾದ್ಯೆ ಜಾಣೆ.
ಮೋದದಿಂ ಭಜಿಸುವರ ಜಿಹ್ವೆಯಲಿ ನರ್ತಿಸುವೆ
ನಾದಮಯಿ, -ಕರುಣೆಯೊಳು ಬೇರಾರ ಕಾಣೆ. ೩ .


ಮಣಿಯುವೆನು ಶಿರಬಾಗಿ ಭಾರತಿಯ ಹಣೆಮಣಿಯೆ
ತಣಿಯುವುದೆ ಭಕುತಜನ ನಿನ್ನನ್ನು ನುತಿಸಿ.
ಕುಣಿಯುವುದು ನವಿಲಿನೊಲು ನಿನ್ನನ್ನು ಕಾಣಲಿಕೆ
ಜನನಿ ನೀ ಜ್ಞಾನಕ್ಕೆ ಕಾಯಮ್ಮ ಹರಸಿ. ೪ .

– ವನರಾಗ ಶರ್ಮಾ

Leave a Reply

Your email address will not be published. Required fields are marked *