ನೈತಿಕತೆಯ ಪತನ, ಜನಸಂಖ್ಯೆಯ ಕ್ಷೀಣತೆಯ ಜ್ವಲಂತ ಸಮಸ್ಯೆ ಎದುರಿಸುತ್ತಿರುವ ಹವ್ಯಕ ಸಮಾಜದ ಉಳಿವಿಗೆ ಇರುವ ಸೂತ್ರ ಕೇವಲ ಎರಡು. ಅದರಲ್ಲಿ ಒಂದು ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ. ಮತ್ತೊಂದು ಭಗವದ್ಗೀತಾ ಪಾರಾಯಣ ಎಂದು ಶಿರಸಿ ಸ್ವರ್ಣವಲ್ಲಿ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಹಸ್ರ ಚಂದ್ರ ಸಭೆಯ ದಿವ್ಯ ಸಾನಿಧ್ಯ ವಹಿಸಿ ಹೇಳಿದರು.
ಪ್ರಸ್ತುತ ನಾಸ್ತಿಕತೆ ಮತ್ತು ಭೋಗಜೀವನದತ್ತ ವಾಲಿರುವ ಹವ್ಯಕ ಜೀವನ ಪದ್ಧತಿಯಿಂದ ಖಂಡಿತ ನೆಮ್ಮದಿಯಿಲ್ಲ.
ನಕಾರಾತ್ಮಕ ವಿಷಯಗಳನ್ನು ಪೋಷಿಸುವ ಕಾರ್ಯ ಆಧುನಿಕ ವ್ಯವಸ್ಥೆ ಒದಗಿಸುತ್ತಿದೆ. ಇದರ ಪರಿಣಾಮ ವಿವಾಹ ವ್ಯವಸ್ಥೆಯಿಂದ ವಿಮುಖರಾಗುತ್ತಿರುವ ಯುವ ಜನತೆ ಅಧರ್ಮ ಮಾರ್ಗ ಅನುಸರಿಸುತ್ತಿದ್ದಾರೆ. ಧರ್ಮ ಪ್ರಜ್ಞೆಯಿಲ್ಲದೆ ಆಧುನಿಕ ವಿಜ್ಞಾನದ ಮೊರೆಹೊಕ್ಕಿರುವ ಪರಿಣಾಮ ಹವ್ಯಕ ಸಮಾಜದ ಪತನಕ್ಕೆ ಕಾರಣವಾಗುತ್ತಿದೆ ಮತ್ತು ವಿವಾಹ ವಿಚ್ಛೇದನ ಕೂಡ ಸಮಸ್ಯೆಯಾಗಿದೆ. ಇದಕ್ಕೂ ಕಾನೂನಿನಲ್ಲಿ ವಿಫುಲ ಅವಕಾಶವಿರುವುದೇ ಸಮಸ್ಯೆಯ ಮೂಲವಾಗಿದೆ. ಆಡಂಬರಕ್ಕೆ ಪ್ರಾಧಾನ್ಯತೆ ಕೊಡುವ ನಾವು ಶಾಸ್ತ್ರೀಯತೆಗೆ ಅವಕಾಶ ಕೊಡುತ್ತಿಲ್ಲ ಎಂದ ಅವರು, ಹವ್ಯಕ ಸಮಾಜ ಉಳಿಯ ಬೇಕು ಆದರೆ ಹೇಗ್‌ಹೇಗೋ ಉಳಿದರೆ ಪ್ರಯೋಜನವಿಲ್ಲ. ಹವ್ಯ- ಕವ್ಯದ ಜೊತೆಗೆ ಬ್ರಹ್ಮ ಜ್ಞಾನಿಯಾದರೆ ಮಾತ್ರ ಉಳಿವಿದೆ. ಆಧ್ಯಾತ್ಮ ವಿದ್ಯೆಯು ಎಲ್ಲ ವಿದ್ಯೆಗೂ ಶ್ರೇಷ್ಠ. ಹಾಗಾಗಿಯೇ ಸಂಸ್ಕಾರ ಹಿನ್ನಡೆಗೆ ಗೀತ ಪಾರಾಯಣ. ಜನಸಂಖ್ಯೆ ಹಿನ್ನಡೆಗೆ ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹ ಈ ಸೂತ್ರ ಪಾಲಿಸಿ ಎಂದು ಕರೆ ನೀಡಿದರು.
ಸ್ವರ್ಣವಲ್ಲಿಯ ಕಿರಿಯ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಮಾತನಾಡಿ, ಹಳ್ಳಿ ಜೀವನ ಶ್ರೇಷ್ಠ ಜೀವನ ಎನ್ನುವುದನ್ನು ತೋರಿಸಿದವರೇ ಹವ್ಯಕರು. ಈಗ ಹಳ್ಳಿಯಿಂದ ವಲಸೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಸಲಹೆ ಧರ್ಮ ರಕ್ಷಣೆಯ ಜತೆಯಲ್ಲಿ ಕೃಷಿ ಉಳಿಸಿ, ಹಳ್ಳಿ ಬೆಳೆಸಿ ಎಂದರು.
ಬೆಂಗಳೂರು ರಾಮಕೃಷ್ಣಾಶ್ರಮದ ಚಂದ್ರಶೇಖರಾನಂದ ಸ್ವಾಮೀಜಿ ಮಾತನಾಡಿ, ಹವ್ಯಕ ಸಮಾಜ ತನ್ನ ಪ್ರತಿಭಾಶ್ರೇಷ್ಟತೆಯಿಂದ ಉಳಿದ ಸಮಾಜಕ್ಕೂ ವಿಶ್ವಕ್ಕೂ ಮಾದರಿಯಾಗಿರುವುದನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ. ವೈಚಾರಿಕತೆಯ ಜೊತೆಯಲ್ಲಿ ತಮ್ಮ ಸಂಸ್ಕೃತಿಯ ವಿಷಯವನ್ನು ಜೊತೆಗೂಡಿಸಿಕೊಂಡು ಸಮಾಜ ಕಟ್ಟುವ ಅವರ ನಡೆ ಇತರರಿಗೆ ಮಾದರಿಯಾಗಿದೆ ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತ ಡಾ. ಭೀಮೇಶ್ವರ ಜೋಷಿ, ಪುತ್ತೂರು ಶಾಸಕ ಅಶೋಕ ಕುಮಾರ ರೈ, ಅಖಿಲ ಹವ್ಯಕ ಮಹಾಸಭೆ ಅಧ್ಯಕ್ಷ ಡಾ. ಗಿರಿಧರ ಕಜೆ, ಸಮ್ಮೇಳನದ ಗೌರವಾಧ್ಯಕ್ಷ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಯದರ್ಶಿ ವೇಣುವಿಶ್ಲೇಶ ಮತ್ತಿತರರಿದ್ದರು.