ಶಂಕರಾಚಾರ್ಯರು ಅವತರಿಸಿದ ದಿನವನ್ನು ದಾರ್ಶನಿಕರ (ತತ್ವಜ್ಞಾನಿಗಳ) ದಿವಸ ಎಂಬುದಾಗಿ ವಿಶ್ವದಲ್ಲಿ ಆಚರಿಸಲಾಗುತ್ತಿದೆ. ಉಪನಿಷತ್ತುಗಳ ಮತ್ತು ಸ್ವಾನುಭವದ ಆಧಾರದ ಮೇಲೆ ಅವರು ಮಂಡಿಸಿರುವ ಅದ್ವೈತ ಸಿದ್ಧಾಂತವು ತತ್ವಜ್ಞಾನಿಗಳಲ್ಲಿ ವಿಶಿಷ್ಟವಾದ ಅದರಕ್ಕೆ ಪಾತ್ರವಾಗಿದೆ.
ಶ್ರೀ ಶಂಕರರು ನಿರೂಪಿಸಿರುವ ಆನಂದ ಮೀಮಾಂಸೆಯ ಒಂದು ಮುಖ್ಯ ವಿಷಯವನ್ನು ಇಲ್ಲಿ ಚಿಂತನೆ ಮಾಡೋಣ. ಆನಂದದ ಅಥವಾ ಸುಖದ ಅನುಭವದ ನಿಜಸ್ವರೂಪವೇನು? ಜನಸಾಮಾನ್ಯರು ಅಂದುಕೊಂಡಂತೆ ಆನಂದವು ವಿಷಯಗಳಲ್ಲಿ ಇಲ್ಲ, ಅದು ನಮ್ಮೊಳಗೇ ಇದೆ. ನಮ್ಮೊಳಗಿರುವ ಪರಬ್ರಹ್ಮವೇ ಆನಂದ. ಹಾಗಿದ್ದರೆ ಪುತ್ರ – ಮಿತ್ರಾದಿಗಳನ್ನು ಕಂಡಾಗ ಆನಂದ ಅನುಭವ ಹೇಗೆ ಉಂಟಾಯಿತು? ಪುತ್ರ – ಮಿತ್ರಾದಿಗಳನ್ನು ಕಂಡಾಗ ಮನಸ್ಸಿನಲ್ಲಿ ಅವರ ಆಕಾರ ತೋರಿಕೊಳ್ಳುತ್ತದೆ. ಹೀಗೆ ತೋರಿಕೊಂಡ ಮಾನಸಿಕ ಆಕಾರವನ್ನು ‘ ವೃತ್ತಿ ‘ ಎಂದು ಕರೆಯುತ್ತಾರೆ. ಇಷ್ಟವಾದ ವ್ಯಕ್ತಿ – ವಿಷಯಗಳನ್ನು ಕುರಿತಾದ ‘ ವೃತ್ತಿ ‘ಯು ಸತ್ವಗುಣವನ್ನು ಜಾಗೃತ ಗೊಳಿಸುತ್ತದೆ. ತಮೋಗುಣವನ್ನು ಹಿಂದಕ್ಕೆ ಸರಿಸುತ್ತದೆ. ಆಗ ಸತ್ವಗುಣದಿಂದ ಕೂಡಿದ ಮನಸ್ಸಿನಲ್ಲಿ ಒಳಗಿರುವ ಪರಬ್ರಹ್ಮ ಸ್ವರೂಪಿ ಆನಂದವೇ ಪ್ರಕಟವಾಗುತ್ತದೆ. ಇದೇ ಆನಂದದ ಅಥವಾ ಸುಖದ ಅನುಭವ. ‘ ವೃತ್ತಿ ‘ ಯು ಕೆಲವು ಕ್ಷಣ ಮಾತ್ರ ಇರುವುದರಿಂದ ಕೆಲವು ಕ್ಷಣ ಮಾತ್ರ ಪ್ರಕಟ ಗೊಂಡು ಮತ್ತೆ ತಮೋಗುಣದ ಆವರಣದಿಂದ ಮುಚ್ಚಿ ಕೊಳ್ಳುತ್ತದೆ. ಹಾಗಾಗಿ ಇಷ್ಟ ವ್ಯಕ್ತಿ – ವಿಷಯಗಳಿಂದ ಉಂಟಾದ ಆನಂದ ಕ್ಷಣಿಕವಾಗಿರುತ್ತದೆ.
ಮೊದಲ ಜೀವ ಹಿರಣ್ಯಗರ್ಭನಿಂದ ಆರಂಭಿಸಿ ಗಿಡಮರಗಳವರೆಗೆ ಎಲ್ಲಾ ಜೀವಿಗಳಲ್ಲಿಯೂ ಆನಂದ ಅನುಭವ ಆಗುವುದು ಹೀಗೆಯೇ. ಮನುಷ್ಯನಿಗಿಂತ ಮೇಲ್ಪಟ್ಟ ಜೀವಿ (ದೇವತೆ)ಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಮನಸ್ಸು ಹೆಚ್ಚು ಪ್ರಸನ್ನವಾಗಿರುತ್ತದೆ. ಮೇಲೆ ಮೇಲೆ ಹೋದಂತೆ ಮನಸ್ಸು ಮತ್ತೂ ಹೆಚ್ಚು ಪ್ರಸನ್ನತೆಯಿಂದ ಕೂಡಿರುತ್ತದೆ. ಹಾಗಾಗಿ ಸತ್ವಗುಣದಿಂದ ಕೂಡಿದ ‘ ವೃತ್ತಿ ‘ ಗಳು ಹೆಚ್ಚಿಗೆ ಇರುವುದರಿಂದ ಮೇಲಿನ ಲೋಕಗಳಲ್ಲಿ ಆನಂದ ಅನುಭವ ಜಾಸ್ತಿ. ಮನುಷ್ಯನಿಗಿಂತ ಕೆಳಮಟ್ಟದ ಜೀವಿಗಳಲ್ಲಿ ತಮೋಗುಣ ಜಾಸ್ತಿ ಇರುವುದರಿಂದ ಮನಸ್ಸಿನ ಪ್ರಸನ್ನತೆ ಕಡಿಮೆ. ಆದ್ದರಿಂದ ಆನಂದ ಅನುಭವವೂ ಕಡಿಮೆ.
ಆನಂದವನ್ನು ಪ್ರಕಟಗೊಳಿಸುವ ಮನೋ ‘ವೃತ್ತಿ’ ಯು ಪುಣ್ಯದಿಂದ ಉಂಟಾಗುತ್ತದೆ. ದುಃಖ ಅನುಭವದ ‘ವೃತ್ತಿ’ ಯು ಪಾಪದಿಂದ ಉಂಟಾಗುತ್ತದೆ. ಪುಣ್ಯದಲ್ಲಿ ಅನೇಕ ಪ್ರಕಾರಗಳಿವೆ ದೊಡ್ಡದು ಸಣ್ಣದು ಎಂಬ ತರತಮ ಭಾವವಿದೆ. ಅದರಿಂದಲೇ ಆನಂದದ ಅಭಿವ್ಯಕ್ತಿಗೊಳಿಸುವ ‘ವೃತ್ತಿ’ ಗಳಲ್ಲಿ ಹೆಚ್ಚು ಆನಂದ ಕೆಲವು ‘ವೃತ್ತಿ’ಗಳಲ್ಲಿ ಕಡಿಮೆ ಆನಂದ ಪುಣ್ಯ ಪಾಪಗಳ ಕಾರಣದಿಂದಲೇ ಕೆಲವರಿಗೆ ಹೆಚ್ಚು ಸುಖ ಕೆಲವರಿಗೆ ಕಡಿಮೆ ಸುಖ.
ಮನಸ್ಸು ತಮೋಗುಣವನ್ನು ಹೋಗಲಾಡಿಸುವ ತಪಸ್ಸು, ಬ್ರಹ್ಮಚರ್ಯ, ವಿದ್ಯೆ (ಉಪಾಸನೆ), ಶ್ರದ್ಧೆಗಳಿಂದ ನಿರ್ಮಲವಾದಾಗ ಹೆಚ್ಚು ಪ್ರಸನ್ನಗೊಂಡು ಆನಂದವು ವಿಶೇಷವಾಗಿ ಮತ್ತು ವಿಪುಲವಾಗಿ ಪ್ರಕಟಗೊಳ್ಳುತ್ತದೆ. ಕಾಮ (ಆಸೆ)ಗಳು ಕಡಿಮೆಯಾದಷ್ಟು ಆನಂದ ಹೆಚ್ಚು ಬ್ರಹ್ಮಸಾಕ್ಷಾತ್ಕಾರದಿಂದ ಅವಿದ್ಯೆ – ಕಾಮ – ಕರ್ಮಗಳು ನಾಶವಾದಾಗ ಅನಂತ ಆನಂದ. ಕಾಮಗಳ ನಾಶದಿಂದ ಆನಂದವೇ ಹೊರತು ಕಾಮಗಳನ್ನು ಅನುಸರಿಸುವುದರಿಂದ ನಿಜ ಆನಂದವಲ್ಲ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ