ಭಾರತೀಯ ಜೀವನ ಪದ್ಧತಿಯಲ್ಲಿ ಆಶ್ರಮ ವ್ಯವಸ್ಥೆ ಎಂಬುದು ಅತ್ಯಂತ ಮುಖ್ಯವಾದುದು. ಜೀವನದ ಪರಮ ಲಕ್ಷ್ಯವನ್ನು ತಲುಪುವ ದೃಷ್ಟಿಯಿಂದ ಜೀವನವನ್ನು ನಾಲ್ಕು ಸ್ತರಗಳಲ್ಲಿ ವಿಭಾಗಿಸಿ, ಅವನ್ನು ಆಶ್ರಮ ಎಂದು ಕರೆದು, ಆಯಾ ಆಶ್ರಮಗಳಿಗೆ ವಿಶಿಷ್ಟವಾದ ಕರ್ತವ್ಯಗಳನ್ನು ತಿಳಿಸಲಾಗಿದೆ. ಒಟ್ಟೂ ನಾಲ್ಕು ಆಶ್ರಮಗಳು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬುದಾಗಿ. ಬಾಲ್ಯವು ಅಧ್ಯಯನದ ಸಮಯ. ಹಾಗಾಗಿ ಆ ಆಶ್ರಮದಲ್ಲಿ ಅಧ್ಯಯನಕ್ಕೆ ಬೇಕಾದ ಬ್ರಹ್ಮಚರ್ಯವೇ ಮೊದಲಾದ ನಿಯಮಗಳನ್ನು ಅನುಸರಿಸುತ್ತಾ, ಗುರುಮುಖವಾಗಿ ಅಧ್ಯಯನ ನಡೆಸಬೇಕಾದ ಆಶ್ರಮವಿದು. ಜಿತೇಂದ್ರಿಯತ್ವ, ಹಿತ-ಮಿತವಾದ ಭೋಜನ-ಭಾಷಣ-ಭೂಷಣಗಳ ಅಭ್ಯಾಸ ಈ ಆಶ್ರಮದಲ್ಲಿಯೇ ಆಗಬೇಕೆಂಬುದು ನಮ್ಮ ಹಿರಿಯರ ಆಶಯ. ಜನ್ಮತಃ ಬರುವ ನಮ್ಮ ಸ್ವೇಚ್ಛಾಪ್ರವೃತ್ತಿಗೆ ಕಡಿವಾಣ ಹಾಕಿ, ಒಂದು ನಿಯಮಕ್ಕೆ ಒಳಪಟ್ಟು ನಡೆಯುವ ಅಭ್ಯಾಸಕ್ಕಾಗಿ ಈ ಆಶ್ರಮವು ವಿಧಿಸಲ್ಪಟ್ಟಿದೆ.
ಎರಡನೆಯದು ಗೃಹಸ್ಥಾಶ್ರಮ. ಬ್ರಹ್ಮಚರ್ಯಾಶ್ರಮದಲ್ಲಿ ಅನುಸರಿಸಿದ ನಿಯಮಗಳು ಇಲ್ಲೂ ಮುಂದುವರೆಯುತ್ತವೆ. ಆದರೆ ಕೆಲವಕ್ಕೆ ಮಾತ್ರ ಸ್ವಲ್ಪ ವಿನಾಯಿತಿ. ಹಾಗಿದ್ದೂ ಮುಖ್ಯ ಲಕ್ಷ್ಯ ಮಾತ್ರ ಒಂದೇ ಒಂದು. ಅದುವೇ ಮನಸ್ಸಿನ ನಿಗ್ರಹ ಮತ್ತು ಮನಸ್ಸಿನ ಸ್ವಚ್ಛೀಕರಣ. ಇಲ್ಲಿ ಅತ್ಯಂತ ಆಯಾಸಪೂರ್ವಕವಾಗಿ, ಶ್ರದ್ಧಾಪೂರ್ವಕವಾಗಿ ಕರ್ಮಾಚರಣೆಗಳನ್ನೆಲ್ಲ ಮಾಡುತ್ತಾ ಅರ್ಥ ಕಾಮಗಳನ್ನು ಧರ್ಮದ ಮಾರ್ಗದಲ್ಲಿ ಸಂಪಾದಿಸುತ್ತಾ ಕೊನೆಗೆ ದಾನದ ಮೂಲಕ ಅವನ್ನೆಲ್ಲ ತ್ಯಜಿಸುವ ದ್ವಾರಾ ತ್ಯಾಗದ ಮನೋಭೂಮಿಕೆಯನ್ನು ಸಿದ್ಧಪಡಿಸಿಕೊಳ್ಳುವುದೇ ಈ ಆಶ್ರಮದ ಮುಖ್ಯ ಉದ್ದೇಶ. ಇದರ ಅನಂತರ ವಾನಪ್ರಸ್ಥ ಆಶ್ರಮ. ಇದು ಸರ್ವಸಂನ್ಯಾಸಕ್ಕೆ ಬೇಕಾದ ತಯಾರಿಯ ಹಂತ. ಅನಂತರ ಸಂನ್ಯಾಸಾಶ್ರಮ. ಸಂಸಾರದಿಂದ ಮುಕ್ತರಾಗುವ ಇರುವ ಏಕೈಕ ಸಾಧನವಾದ ಬ್ರಹ್ಮಜ್ಞಾನವನ್ನು ಪಡೆಯಲು ಬೇಕಾದ ಶ್ರವಣ, ಮನನ, ನಿದಿಧ್ಯಾಸನಗಳನ್ನು ನಿರಾತಂಕವಾಗಿ ಮಾಡಲು ಹಾಗೂ ಬ್ರಹ್ಮಜ್ಞಾನವನ್ನು ಪಡೆಯಲು ಸೂಕ್ತವಾದ ಆಶ್ರಮವಿದು.
ಈ ಆಶ್ರಮವನ್ನು ಪ್ರವೇಶಿಸುವಾಗ ಲೌಕಿಕದ ಆಸಕ್ತಿಯನ್ನು ಕಳೆದುಕೊಂಡಿರಬೇಕಾಗುತ್ತದೆ. ಜನ್ಮ-ಮರಣಚಕ್ರಗಳಿಂದ ತನ್ನನ್ನು ಪಾರು ಮಾಡಿಕೊಂಡು, ನಿರತಿಶಯವಾದ ಆತ್ಮಸುಖವನ್ನು ಹೊಂದುವ ಉತ್ಕಟೇಚ್ಛೆ ಇರಬೇಕಾಗುತ್ತದೆ. ಹಾಗಾಗಿ ಲೌಕಿಕದತ್ತ ವೈರಾಗ್ಯ ಹಾಗೂ ಮೋಕ್ಷದ ಬಗೆಗೆ ಉತ್ಕಟೇಚ್ಛೆ ಇದ್ದವರು ಮಾತ್ರ ಈ ಆಶ್ರಮಕ್ಕೆ ಯೋಗ್ಯರು. ಮನುಷ್ಯ ಜನ್ಮದ ಕೊನೆಯ ಅವಸ್ಥೆಯಲ್ಲಾದರೂ ಇಂಥ ದೃಢವೈರಾಗ್ಯವನ್ನು ತಾಳಬೇಕೆಂಬುದು ಶಾಸ್ತ್ರಗಳ ಆಶಯ.ಶಾಸ್ತ್ರಗಳಲ್ಲಿ ಆಶ್ರಮದಿಂದ ಆಶ್ರಮವನ್ನು ಕ್ರಮವಾಗಿ ಪ್ರವೇಶಿಸಬೇಕು ಎಂಬ ವಿಧಿಯಿದೆ ಯಾರ ಚಿತ್ತವು ಸಾಂಸಾರಿಕ ಸುಖದ ಬಗೆಗೆ ವಿರಕ್ತಿಯನ್ನು ಪಡೆದಿಲ್ಲವೋ, ಯಾರಿಗೆ ತನ್ನ ಸ್ವರೂಪವನ್ನು ಅರಿತುಕೊಳ್ಳುವ ತೀವ್ರವಾದ ಜಿಜ್ಞಾಸೆಯು ಮೂಡಿಲ್ಲವೋ, ಅಂಥವರ ಚಿತ್ತದ ಪಕ್ವತೆಗಾಗಿಯೇ ಈ ರೀತಿಯ ಕ್ರಮವಾದ ಆಶ್ರಮ ವ್ಯವಸ್ಥೆಯನ್ನು ಮಾಡಲಾಗಿದೆ.
ಆದರೆ ಕೆಲವರಿಗೆ ಹಿಂದಿನ ಜನ್ಮದ ಸಾಧನೆಯ ಕಾರಣದಿಂದ ಅಥವಾ ಶುಭವಾಸನೆಯ ಕಾರಣದಿಂದಲೋ ಬಹಳ ಬೇಗ ವೈರಾಗ್ಯವು ಪ್ರಾಪ್ತವಾಗಬಹುದು. ಅಂಥವರು ಯಾವ ಕ್ಷಣದಲ್ಲಿ ಉತ್ಕಟವಾದ ವೈರಾಗ್ಯವನ್ನು ಹೊಂದುವರೋ ಅದೇ ಕ್ಷಣದಲ್ಲಿಯೇ ಸಂನ್ಯಸ್ತರಾಗಬಹುದು ಎಂದೂ ಶಾಸ್ತ್ರಗಳು ತಿಳಿಸಿವೆ. ಹಾಗಾಗಿ ವಿವೇಕ,ವೈರಾಗ್ಯ ಇಂದ್ರಿಯ ನಿಗ್ರಹಗಳಂಥ ಯೋಗ್ಯತೆಯು ಒದಗಿದವನು ಯಾವುದೇ ಆಶ್ರಮದಿಂದ ನೇರವಾಗಿ ಸಂನ್ಯಾಸವನ್ನು ಸ್ವೀಕರಿಸಬಹುದಾಗಿದೆ. ಪಕ್ವಗೊಂಡ ಹಣ್ಣು ತಾನೇ ತೊಟ್ಟು ಕಳಚಿ ಬೀಳುವಂತೆ ಅತ್ಯಂತ ವೈರಾಗ್ಯವು ಮೂಡಿದವನು ಮತ್ಯಾವುದಕ್ಕೂ ಕಾಯಬೇಕಾಗಿಲ್ಲ. ಸಂಸಾರವು ತಾನಾಗಿಯೇ ಕಳಚಿಹೋಗುತ್ತದೆ. ಹಾಗಾಗಿ ಸಂಸಾರ ಬಂಧದ ನಾಶಕ್ಕೆ ಕಾರಣವಾದ ಅಜ್ಞಾನದ ನಾಶದವರೆಗೆ ಆತ್ಮವಿಷಯಕವಾದ ಶ್ರವಣ, ಮನನ, ನಿದಿಧ್ಯಾಸನ, ಯೋಗಸಾಧನೆಗಳಲ್ಲಿಯೇ ಆತ ಮುಂದುವರಿಯುತ್ತಾ, ತೀವ್ರವಾದ ಮುಮುಕ್ಷುತ್ವದೊಂದಿಗೆ ನಿವೃತ್ತಿ ಮಾರ್ಗದಲ್ಲಿ ಸಾಗುತ್ತಾನೆ.
ಸಂನ್ಯಾಸಾಶ್ರಮವು ಸನಾತನ ಧರ್ಮವು ಜಗತ್ತಿಗೆ ಕೊಡಮಾಡಿದ ಅತಿ ಶ್ರೇಷ್ಠವಾದ ಪರಿಕಲ್ಪನೆ. ಯಾವ ಸೆಳೆತದಿಂದ ದೇವತೆಗಳೂ ತಪ್ಪಿಸಿಕೊಳ್ಳಲಾರರೋ ಅಂಥ ಇಂದ್ರಿಯಗಳ ಮತ್ತು ಅವುಗಳ ವಿಷಯಗಳಿಂದ ತಪ್ಪಿಸಿಕೊಂಡು, ಸಂಸಾರದಿಂದಲೇ ಮುಕ್ತರಾಗಿ ಬ್ರಹ್ಮಚೈತನ್ಯದಲ್ಲಿ ಲೀನವಾಗಿ, ವಿಶ್ವಾತ್ಮರಾಗಿಬಿಡುವುದು ಸುಲಭದ ಮಾತಲ್ಲ. ಉಪನಿಷತ್ತೇ ಈ ಮಾರ್ಗವನ್ನು ಕ್ಷುರಸ್ಯ ಧಾರಾ ಎಂದು ಕರೆದಿದೆ. ಕತ್ತಿಯಲಗಿನ ಮೇಲಿನ ಪಯಣವಿದು. ‘ಆಶ್ಚರ್ಯೋ ವಕ್ತಾ ಕುಶಲೋಽಸ್ಯ ಲಬ್ಧಾ ಆಶ್ಚರ್ಯೋ ಜ್ಞಾತಾ ಕುಶಲಾನುಶಿಷ್ಟಃ’ ಎಂಬುದಾಗಿ ಉಪನಿಷತ್ತು ಬ್ರಹ್ಮಜ್ಞಾನದ ದುಃಸ್ಪಂಪಾದ್ಯತ್ವವನ್ನು ವಿವರಿಸುತ್ತದೆ. ಭಗವದ್ಗೀತೆಯಲ್ಲಿ ಭಗವಂತನೇ ಹೇಳಿದಂತೆ ‘ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ಯತತಿ ಸಿದ್ಧಯೇ | ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ||’ ಹಾಗೆಯೇ ‘ಬಹೂನಾಂ ಜನ್ಮನಾಮಂತೇ ಜ್ಞಾನವಾನ್ಮಾಂ ಪ್ರಪದ್ಯತೇ|’ ಮುಂತಾದವುಗಳ ಮೂಲಕ ಆತ್ಮಸಾಕ್ಷಾತ್ಕಾರವು ಎಷ್ಟು ದುರ್ಲಭವೆಂದು ತಿಳಿಸಲಾಗಿದೆ. ಇಂಥ ಸಂನ್ಯಾಸಾಶ್ರಮವನ್ನು ಪ್ರವೇಶಿಸುವುದೇ ಒಂದು ಆಶ್ಚರ್ಯವಾಗಿರುವಾಗ, ಅಂಥ ಮಹಾತ್ಮರು ಇಂದಿಗೂ ಶುದ್ಧವಾದ ಶಾಸ್ತ್ರೋಕ್ತವಾದ ದಾರಿಯಲ್ಲಿ ಸಾಗುತ್ತಾ ಆತ್ಮೋದ್ಧಾರದ ಜೊತೆಗೆ ಜಗತ್ತಿನ ಹಿತವನ್ನೂ ಸಾಧಿಸುತ್ತಾ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಇಂಥ ಸಂನ್ಯಾಸದಲ್ಲಿ ಹಲವು ಪ್ರಕಾರಗಳಿವೆ. ವಸ್ತುತಃ ಎಲ್ಲ ಕರ್ಮಗಳ ಫಲದ ಜೊತೆಯಲ್ಲಿ ಎಲ್ಲ ವಿಧದ ಸಂಗವನ್ನೂ ಪರಿತ್ಯಜಿಸುವುದೇ ಸಂನ್ಯಾಸ. ಅದು ಮುಖ್ಯವಾಗಿ ಒಂದೇ ಒಂದು. ಹಾಗಿದ್ದೂ ಅವುಗಳಲ್ಲಿ ಒಳ ಪ್ರಭೇದಗಳನ್ನು ಈ ಕೆಳಗಿನಂತೆ ಗುರುತಿಸಬಹುದಾಗಿದೆ. ಸಂನ್ಯಾಸವನ್ನು ಐದು ಪ್ರಕಾರಗಳಲ್ಲಿ ಗಣಿಸಲಾಗುತ್ತದೆ. ಮೊದಲನೆಯ ಪ್ರಕಾರದಲ್ಲಿ ಎರಡೇ ವಿಭಾಗ. ಮೊದಲನೆಯದು ವಿವಿದಿಷಾ ಸಂನ್ಯಾಸ, ಎರಡನೆಯದು ವಿದ್ವತ್ಸಂನ್ಯಾಸವೆಂಬುದಾಗಿ. ಬ್ರಹ್ಮಜ್ಞಾನದ ಇಚ್ಛೆಯಿಂದ ಯಾರು ಸಂನ್ಯಾಸವನ್ನು ಪಡೆಯುತ್ತಾರೋ ಅದನ್ನು ವಿವಿದಿಷಾ ಸಂನ್ಯಾಸವೆಂದೂ, ಬ್ರಹ್ಮದ ಬಗೆಗೆ ಪರೋಕ್ಷವಾಗಿ ತಿಳಿದು, ಅತ್ಯಂತ ವಿರಕ್ತಿಯಿಂದ ಯಾರು ಸಂನ್ಯಾಸವನ್ನು ಪಡೆಯುತ್ತಾರೋ ಅದನ್ನು ವಿದ್ವತ್ಸಂನ್ಯಾಸವೆಂದೂ ಕರೆಯಲಾಗುತ್ತದೆ.
ಇನ್ನು ಎರಡನೆಯ ಪ್ರಕಾರದಲ್ಲಿ ನಾಲ್ಕು ವಿಭಾಗಗಳು. ವೈರಾಗ್ಯಸಂನ್ಯಾಸೀ, ಜ್ಞಾನಸಂನ್ಯಾಸೀ, ಜ್ಞಾನವೈರಾಗ್ಯಸಂನ್ಯಾಸೀ, ಕರ್ಮಸಂನ್ಯಾಸೀ ಎಂಬುದಾಗಿ. ಹಿಂದಿನ ಜನ್ಮದ ಪುಣ್ಯವಶಾತ್, ಬ್ರಹ್ಮಚರ್ಯಾಶ್ರಮದಿಂದಲೇ ಸಂನ್ಯಾಸವನ್ನು ಪಡೆದ ವಿರಕ್ತನನ್ನು ವೈರಾಗ್ಯ ಸಂನ್ಯಾಸೀ ಎನ್ನಲಾಗುತ್ತದೆ. ಶಾಸ್ತ್ರಜ್ಞಾನದಿಂದ ಪಾಪಪುಣ್ಯಲೋಕಾನುಭವಶ್ರವಣದಿಂದ ಪ್ರಪಂಚದಿಂದ ಉಪರತರಾಗಿ, ಕಾಮಕ್ರೋಧಾದಿ ದೇಹವಾಸನೆಗಳನ್ನು, ಶಾಸ್ತ್ರವಾಸನೆಯನ್ನೂ, ಲೋಕವಾಸನೆಯನ್ನೂ ಪರಿತ್ಯಜಿಸಿ ಸಾಂಸಾರಿಕವಾದ ಎಲ್ಲವೂ ಹೇಯವೆಂದು ಪರಿಭಾವಿಸಿದವನಾಗಿ ಮತ್ತು ಸಾಧನಚತುಷ್ಟಯದಿಂದ ಕೂಡಿದವನಾಗಿ ಸಂನ್ಯಾಸವನ್ನು ಪಡೆದರೆ ಆತನನ್ನು ಜ್ಞಾನಸಂನ್ಯಾಸೀ ಎನ್ನಲಾಗುತ್ತದೆ. ಕ್ರಮವಾಗಿ ಎಲ್ಲವನ್ನೂ ಅಭ್ಯಸಿಸಿ, ಜ್ಞಾನ ಮತ್ತು ವೈರಾಗ್ಯ ಎರಡರಿಂದಲೂ ಕೂಡಿದವನಾಗಿ ಸ್ವರೂಪದ ಅನುಸಂಧಾನವನ್ನು ಮಾಡುತ್ತಾ ಸಂನ್ಯಾಸವನ್ನು ಪಡೆಯುವವನನ್ನು ಜ್ಞಾನವೈರಾಗ್ಯಸಂನ್ಯಾಸೀ ಎಂದೂ, ಬ್ರಹ್ಮಚರ್ಯವನ್ನು ಮುಗಿಸಿ, ಗೃಹಸ್ಥನಾಗಿ, ವಾನಪ್ರಸ್ಥವನ್ನು ಸ್ವೀಕರಿಸಿ, ಅನಂತರ ಕ್ರಮಾನುಸಾರವಾಗಿ ಸಂನ್ಯಾಸವನ್ನು ಸ್ವೀಕರಿಸಿದವನನ್ನು ಕರ್ಮಸಂನ್ಯಾಸೀ ಎಂದೂ ಕರೆಯಲಾಗುತ್ತದೆ.
ಇನ್ನು ಮೂರನೆಯ ಪ್ರಕಾರದಲ್ಲಿ, ಮೂರು ವಿಭಾಗಗಳು. ಜ್ಞಾನಸಂನ್ಯಾಸೀ, ವೇದಸಂನ್ಯಾಸೀ ಮತ್ತು ಕರ್ಮಸಂನ್ಯಾಸೀ ಎಂಬುದಾಗಿ. ಇಲ್ಲಿ ಪ್ರಣವಾಭ್ಯಾಸಿಯನ್ನೇ ವೇದಸಂನ್ಯಾಸಿ ಎನ್ನಲಾಗುತ್ತದೆ ಎಂಬುದಷ್ಟೇ ವ್ಯತ್ಯಾಸ. ನಾಲ್ಕನೆಯ ಪ್ರಕಾರದಲ್ಲಿ ದಂಡಾದಿ ಲಿಂಗಧಾರಣಸಹಿತಸಂನ್ಯಾಸ ಮತ್ತು ದಂಡಾದಿ ಲಿಂಗಧಾರಣರಹಿತ ಸಂನ್ಯಾಸ ಎಂಬುದಾಗಿ ಎರಡು ವಿಭಾಗಗಳು. ಕ್ಷತ್ರಿಯರಿಗೆ ಮತ್ತು ವೈಶ್ಯರಿಗೆ ಎರಡನೆಯ ಪ್ರಕಾರದ ಸಂನ್ಯಾಸವನ್ನು ಹೇಳಲಾಗಿದೆ. ಇನ್ನು ಐದನೆಯ ಪ್ರಕಾರದಲ್ಲಿ ಆರು ವಿಭಾಗಗಳು. ಕುಟೀಚಕ, ಬಹೂದಕ, ಹಂಸ, ಪರಮಹಂಸ, ತುರೀಯಾತೀತ ಮತ್ತು ಅವಧೂತ ಎಂಬುದಾಗಿ. ಅದರಲ್ಲಿ ಕುಟೀಚಕ ಎಂದರೆ, ಅತ್ಯಂತ ಅಶಕ್ತರಾದವರಿಗೆ ಮಾತ್ರ ಇದನ್ನು ಹೇಳಲಾಗಿದೆ. ತನ್ನ ಪುತ್ರರಿಂದ ಕುಟೀರವನ್ನು ನಿರ್ಮಿಸಿಕೊಂಡು ಅಥವಾ ಮನೆಯಲ್ಲಿಯೇ ವಾಸವಾಗಿ ಕಾಷಾಯವನ್ನು ಧರಿಸಿ, ಬಂಧುಗಳ ಮನೆಯಲ್ಲಿ ಅಥವಾ ಸ್ವಗೃಹದಲ್ಲಿಯೇ ಭಿಕ್ಷೆಯನ್ನು ಮಾಡುತ್ತಾ ತ್ರಿದಂಡಿಯಾಗಿ ನೆಲೆಸುವ ಮುಮುಕ್ಷುವನ್ನು ಕುಟೀಚಕ ಸಂನ್ಯಾಸಿ ಎನ್ನಲಾಗುತ್ತದೆ.
ತ್ರಿದಂಡಿಯಾಗಿದ್ದು, ಜೋಳಿಗೆಯನ್ನೂ, ಪವಿತ್ರ ಪಾದುಕೆ ಆಸನಗಳನ್ನೂ, ಶಿಖೆ, ಯಜ್ಞೋಪವೀತ, ಕೌಪೀನ ಮತ್ತು ಕಾಷಾಯಧಾರಿಗಳಾಗಿ, ತೀರ್ಥಕ್ಷೇತ್ರಗಳನ್ನು ತಿರುಗುತ್ತಾ ಭಿಕ್ಷಾಟನೆಯನ್ನು ಗೈಯ್ಯುವ ಸಂನ್ಯಾಸಿಯನ್ನು ಬಹೂದಕ ಎಂದು ಕರೆಯಲಾಗುತ್ತದೆ.
ಹಂಸಸಂನ್ಯಾಸಿಗಳು ಎಂದರೆ ಏಕದಂಡಿಗಳೂ, ಶಿಖಾರಹಿತರೂ, ಯಜ್ಞೋಪವೀತವನ್ನು ಹೊಂದಿದವರೂ, ಜೋಳಿಗೆ, ಕಮಂಡಲುವನ್ನು ಹಿಡಿದವರೂ, ಒಂದು ಗ್ರಾಮದಲ್ಲಿ ಒಂದು ರಾತ್ರಿ ಮಾತ್ರ ವಾಸ ಮಾಡುವವರೂ, ಕೃಚ್ಛ್ರ ಚಾಂದ್ರಾಯಣಾದಿ ವ್ರತಗಳನ್ನು ಅನುಷ್ಠಿಸುವವರೂ ಆಗಿದ್ದಾರೆ. ಇನ್ನು ನಾಲ್ಕನೆಯ ವಿಭಾಗವೆಂದರೆ ಅದು ಪರಮಹಂಸ ಸಂನ್ಯಾಸಿಗಳದ್ದು. ಇವರು ಏಕದಂಡಿಗಳೂ, ಮುಂಡನೆಯನ್ನು ಮಾಡಿಕೊಂಡವರೂ, ಯಜ್ಞೋಪವೀತವನ್ನು ತ್ಯಜಿಸಿದವರೂ, ಎಲ್ಲ ಕರ್ಮಗಳನ್ನು ತ್ಯಜಿಸಿದವರೂ ಆಗಿದ್ದಾರೆ. ಪರಮಹಂಸರಲ್ಲಿ ಮತ್ತೆ ಅಮುಖ್ಯಪರಮಹಂಸರು ಮತ್ತು ಮುಖ್ಯಪರಮಹಂಸರು ಎಂಬುದಾಗಿ ಎರಡು ವಿಭಾಗ. ಇನ್ನು ಐದನೆಯ ವಿಭಾಗ ತುರೀಯಾತೀತ ಸಂನ್ಯಾಸಿಗಳು ಎಂದು. ದಿಗಂಬರರೂ, ಕೊನೆಯ ಸ್ತರದಲ್ಲಿರುವವರೂ, ಫಲಾಹಾರವನ್ನು ಮಾತ್ರ ಮಾಡುವವರೂ, ಕ್ಷೌರ, ದೇವತಾರ್ಚನಾದಿಗಳನ್ನೆಲ್ಲ ತೊರೆದವರೂ ಆಗಿದ್ದಾರೆ. ಕೊನೆಯ ವಿಭಾಗ ಅವಧೂತರದ್ದು. ಇವರೂ ಕೂಡ ಸರ್ವಸಂಗ ಪರಿತ್ಯಾಗಿಗಳೂ, ಸಾಂಬರ ಅಥವಾ ದಿಗಂಬರ ಎಂಬ ನಿಯಮವಿಲ್ಲದವರೂ, ಕೇವಲ ಬ್ರಹ್ಮಪ್ರಣವದ ಮೂಲಕ ನಿದಿಧ್ಯಾಸನದಲ್ಲಿ ತತ್ಪರರೂ ಆದವರು ಆಗಿರುತ್ತಾರೆ.
ಹೀಗೆ ಸಂನ್ಯಾಸಾಶ್ರಮ ಸ್ವೀಕಾರದ ಭೇದದಿಂದ ಸಂನ್ಯಾಸದಲ್ಲಿಯೂ ಬೇರೆ ಬೇರೆ ಪ್ರಕಾರಗಳನ್ನು ಹೇಳಲಾಗುತ್ತದೆ. ಎಲ್ಲ ಸಂನ್ಯಾಸಗಳ ಮುಖ್ಯ ಲಕ್ಷ್ಯವೂ ಆತ್ಮಸಾಕ್ಷಾತ್ಕಾರವೇ ಆಗಿದೆ. ಜೊತೆಗೆ ಎಲ್ಲ ಸಂನ್ಯಾಸಗಳಲ್ಲೂ ವಿರಕ್ತಿ ಹಾಗೂ ರಾಗದ್ವೇಷಾದಿ ಸಂಸಾರಧರ್ಮಗಳ ತ್ಯಾಗವು ಮುಖ್ಯವೇ ಆಗಿದೆ.
(ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ)
- ವಿಶ್ವನಾಥ ಸುಂಕಸಾಳ
Leave a Reply