ಶಾಲ್ಮಲೆಯಲ್ಲಿ ಸೀಮೋಲ್ಲಂಘನ ನೆರವೇರಿಸಿದ ಸೋಂದಾ ಸ್ವರ್ಣವಲ್ಲೀ ಉಭಯ ಶ್ರೀಗಳು:

posted in: Press Note/News | 0

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಅವರ ಕರಕಮಲಸಂಜಾತರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ನಾಲ್ಕು ಮಾಸಗಳ ಕಾಲ ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಕೈಗೊಂಡಿದ್ದ ಚಾತುರ್ಮಾಸ್ಯ ವ್ರತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ವ್ರತದ ಸಮಾರೋಪದ ಅಂಗವಾಗಿ ಉಭಯ ಶ್ರೀಗಳು ಇಂದು ಪವಿತ್ರ ಶಾಲ್ಮಲಾ ನದಿಯ ತೀರದಲ್ಲಿ ಶಾಸ್ತ್ರೋಕ್ತವಾಗಿ ಗಂಗಾ ಪೂಜೆಯನ್ನು ನೆರವೇರಿಸಿದರು. ಜಲದೇವತೆಯಾದ ಗಂಗೆಯ ಅನುಗ್ರಹಕ್ಕಾಗಿ ಪ್ರಾರ್ಥಿಸಿದ ನಂತರ ಸಾಂಪ್ರದಾಯಿಕವಾಗಿ ಸೀಮೋಲ್ಲಂಘನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಧಾರ್ಮಿಕ ವಿಧಿಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ನದೀ ಪೂಜೆ ಹಾಗೂ ಸೀಮೋಲ್ಲಂಘನದ ಪವಿತ್ರ ಕಾರ್ಯಕ್ರಮಗಳು ಮುಕ್ತಾಯಗೊಂಡ ಬಳಿಕ, ಉಭಯ ಶ್ರೀಗಳು ಸೋಂದಾದ ಐತಿಹಾಸಿಕ ಹಾಗೂ ಪುರಾತನ ಶ್ರೀ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಪೂಜೆ ಸಲ್ಲಿಸಿ ಶ್ರೀ ಸದಾಶಿವ ದೇವರ ದರ್ಶನ ಪಡೆದರು ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ, ಮಂಗಳಾರತಿ ನೆರವೇರಿಸಿ, ನಾಡಿನ ಕ್ಷೇಮಾಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಚಾತುರ್ಮಾಸ್ಯ ವ್ರತ ಪೂರ್ಣಗೊಳಿಸಿ ಸೀಮೋಲ್ಲಂಘನ ಗೈದ ಉಭಯ ಶ್ರೀಗಳನ್ನು ಸ್ವಾಗತಿಸಲು ದೇವಸ್ಥಾನಗಳ ಆಡಳಿತ ಮಂಡಳಿ, ಧಾರ್ಮಿಕ ಧುರೀಣರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದು, ಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾದರು.