ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸರ್ವರ ಇಷ್ಟಾರ್ಥ ಸಿದ್ಧಿಸುವ ದೇವಿಯ ಆರಾಧನೆ ಆರಂಭಗೊಂಡಿತು. ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಅವರ ಕರಕಮಲ ಸಂಜಾತರಾದ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನವರಾತ್ರಿ ವ್ರತಾಚರಣೆಯ ಅಂಗವಾಗಿ ನಡೆಯುವ ಎಲ್ಲಾ ವೈದಿಕ ಕಾರ್ಯಕ್ರಮಗಳನ್ನು ಮಹಾಸಂಕಲ್ಪದ ಮೂಲಕ ಆರಂಭಿಸಲಾಯಿತು. ಪ್ರತಿನಿತ್ಯವೂ ಉಭಯ ಶ್ರೀಗಳು ಶ್ರೀ ಮಾತೆಯ ವಿಶೇಷ ಪೂಜೆಯನ್ನು , ಶ್ರೀಚಕ್ರಾರ್ಚನೆಯನ್ನು, ಮಹಾಮಂಗಳಾರತಿಯನ್ನು ನೆರವೇರಿಸುತ್ತಾರೆ. ವೇದಗಳ ಪಾರಾಯಣ, ಅಧ್ಯಾತ್ಮ ರಾಮಾಯಣ ಪಾರಾಯಣ, ದೇವೀ ಭಾಗವತ ಪಾರಾಯಣ, ಸಪ್ತಶತೀ ಪಾರಾಯಣ, ಶತರುದ್ರಾಭಿಷೇಕ ಈ ಎಲ್ಲಾ ವೈದಿಕ ಕಾರ್ಯಕ್ರಮಗಳು ಆರಂಭಗೊಂಡವು. ನಿತ್ಯವೂ ಅನೇಕ ವಿದ್ವಾಂಸರುಗಳಿಂದ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ದೇವೀ ಆರಾಧನೆಗೆ ಪ್ರಶಸ್ತವಾದ ಈ ಪುಣ್ಯತಮವಾದ ಪರ್ವದಲ್ಲಿ, ದೇವೀ ಆರಾಧನೆಯನ್ನು ಅನೇಕ ವರ್ಷಗಳಿಂದ, ಅನೇಕ ಯತಿಗಳು ನಿಷ್ಠೆಯಿಂದ ನಡೆಸಿಕೊಂಡು ಬಂದ ದಿವ್ಯ ಕ್ಷೇತ್ರವಾಗಿದೆ. Read More