ಮಹಾಭಾರತದ ವನಪರ್ವದಲ್ಲಿ ಯುಧಿಷ್ಠಿರನಿಗೆ ಮಾರ್ಕಂಡೇಯರು ರಾಮಾಯಣ ಕಥೆಯನ್ನು ಹೇಳಿದ ಸಂದರ್ಭ ಬರುತ್ತದೆ. ಸೀತಾಪಹಾರವಾದ ನಂತರ ರಾಮ ಲಕ್ಷ್ಮಣರಿಬ್ಬರೇ ದಂಡಕಾರಣ್ಯದಲ್ಲಿ ದಕ್ಷಿಣ ದಿಕ್ಕಿನಕಡೆ ಸಾಗಿದರು. ಜಟಾಯುಪಕ್ಷಿಯು ನೀಡಿದ ಸೂಚನೆಯಂತೆ ರಾವಣನು ಸೀತೆಯನ್ನು ಎತ್ತಿಕೊಂಡು ದಕ್ಷಿಣ ದಿಕ್ಕಿಗೆ ಸಾಗಿದ್ದಾನೆಂದು ಅವರಿಗೆ ಗೊತ್ತಾಗಿತ್ತು. ಪಂಪಾ ಸರೋವರವನ್ನು ತಲುಪಿದ ನಂತರ ಶ್ರೀರಾಮನ ಮನಸ್ಸಿನಲ್ಲಿ ಸೀತೆಯ ನೆನಪಾಗಿ ತುಂಬಾ ದುಃಖಪಟ್ಟನು. ಜೊತೆಯಲ್ಲಿದ್ದ ಲಕ್ಷ್ಮಣ ಅಣ್ಣನ ದುಃಖವನ್ನು ನಿವಾರಿಸಲು ಸಮಾಧಾನದ ಮಾತುಗಳನ್ನಾಡಿದನು. ಆಗ ಬಂದ ಮಾತು “ನತ್ವಾಮೇವಂವಿಧೋ ಭಾವಃ ಸ್ಪೃಷ್ಟುಮರ್ಹತಿ ಮಾನದ | ಆತ್ಮವಂತಮಿವವ್ಯಾಧಿಃ ಪುರುಷಂ ವೃದ್ದ ಶೀಲಿನಮ್ ||” – “ಅಣ್ಣಾ ! ಪರಮಾತ್ಮನೇ ತನ್ನೊಳಗೆ ಸತತ ಧರಿಸಿಕೊಂಡವನಿಗೆ ವ್ಯಾಧಿಗಳು ಬರದಿರುವಂತೆ ಮತ್ತು ವೃದ್ಧರನ್ನು ಸತತ ಸೇವೆ ಮಾಡುತ್ತಿರುವವನಿಗೆ ವ್ಯಾಧಿಗಳು ಬರುವುದಿಲ್ಲ ಹಾಗೆಯೇ ನಿನ್ನಂಥವರಿಗೆ ಈ ರೀತಿಯ ದುಃಖದ ಭಾವ ಉಂಟಾಗುವುದು ಯೋಗ್ಯವಲ್ಲ.” ಇಲ್ಲಿ ಬರುವ “ಆತ್ಮವಂತಮಿವವ್ಯಾಧಿಃ” ಎಂಬ ಭಾಗವನ್ನು ವಿಶೇಷವಾಗಿ ಗಮನಿಸಬೇಕು.
ಪರಮಾತ್ಮನ ಧ್ಯಾನ ಆರೋಗ್ಯವನ್ನುಂಟುಮಾಡಬಲ್ಲದು. ಪರಮಾತ್ಮನಿಗೆ ರೋಗವಿಲ್ಲ. ಅವನನ್ನು ಗಾಢವಾಗಿ ಧ್ಯಾನ ಮಾಡುವವರಿಗೂ ರೋಗವಿಲ್ಲ. ಆಂಜನೇಯನು ಸತತ ಅವನ ಧ್ಯಾನದಲ್ಲಿ ತೊಡಗಿರುತ್ತಾನೆ. ಅವನಿಗೆ ಯಾವುದೇ ರೋಗವಿಲ್ಲ. ಅಷ್ಟೇ ಏಕೆ ಅಂತಹ ಆಂಜನೇಯನನ್ನು ಭಕ್ತಿಯಿಂದ ಸ್ಮರಣೆಮಾಡುವವರಿಗೆನೇ ರೋಗಬರುವುದಿಲ್ಲವೆಂಬ ಮಾತಿದೆ. ಅಂತಹ ಆಂಜನೇಯನೇ ಧ್ಯಾನ ಮಾಡುವ ಪರಮಾತ್ಮನನ್ನು ಧ್ಯಾನಿಸಿದರೆ ರೋಗವಿಲ್ಲೆಂದು ಪ್ರತ್ಯೇಕ ಹೇಳಬೇಕೆ? (ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗಿತಾ | ಅಜಾಢ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್ಭವೇತ್||)
ಪರಮಾತ್ಮ ಧ್ಯಾನಕ್ಕೆ ಆರೋಗ್ಯವನ್ನು ಕೊಡುವ ಶಕ್ತಿಯಿರುವುದನ್ನು ಆಯುರ್ವೆದವು ಒಪ್ಪುತ್ತದೆ. ಬೇರೆ ಬೇರೆ ರೋಗಗಳಿಗೆ ಬೇರೆಬೇರೆ ದೇವತೆಗಳ ಜಪ, ಹೋಮಗಳು ಪರಿಹಾರೋಪಾಯವೆಂಬುದಾಗಿ ಆಯುರ್ವೇದದಲ್ಲಿ ಬರುತ್ತದೆ. ಚಿಕಿತ್ಸೆಯ ಮೂರು ಪ್ರಕಾರಗಳಾದ ದೈವವ್ಯಪಾಶ್ರಯ,ಯುಕ್ತಿವ್ಯಪಾಶ್ರಯ ಮತ್ತು ಸತ್ವಾವಜಯಗಳಲ್ಲಿ ದೈವವ್ಯಪಾಶ್ರಯ ಒಂದು. ದೇವರನ್ನು ಆಶ್ರಯಿಸುವ ಮೂಲಕವೇ ರೋಗ ನಿವಾರಣೆ. ಶರೀರದಲ್ಲಿರುವ ಧಾತುಗಳಿಗೆ ಮತ್ತು ವಾತ, ಪಿತ್ತ, ಕಫಗಳಿಗೆ ಬೇರೆಬೇರೆ ದೇವತೆಗಳ ಸಂಬಂಧವಿದೆ. ಆಯಾ ಧಾತುಗಳಿಗೆ ಸಂಬಂಧಿಸಿದ ರೋಗವುಂಟಾದರೆ ಅವುಗಳಿಗೆ ಸಂಬಂಧಿಸಿದ ದೇವತೆಗಳನ್ನು ಶಾಸ್ತ್ರೋಕ್ತ ಕ್ರಮದಂತೆ ಶ್ರದ್ಧೆಯಿಂದ ಆಶ್ರಯಿಸಿದರೆ ಆ ರೋಗಗಳು ಉಪಶಮನವಾಗುತ್ತವೆ.
ಜೀವಾತ್ಮನಿಗೂ ಪರಮಾತ್ಮನಿಗೂ ತಾಯಿ ಮಗುವಿನ ಸಂಬಂಧವಿದೆ. ತಾಯಿಯ ಉದರದಲ್ಲಿರುವಾಗ ಮಗು ತನ್ನ ಹೊಕ್ಕಳ ಬಳ್ಳಿಯ ಮೂಲಕ ತಾಯಿಯಿಂದಲೇ ಎಲ್ಲವನ್ನೂ ಪಡೆಯುತ್ತದೆ. ಹಾಗೆಯೇ ಜೀವಾತ್ಮನ ಹಿನ್ನೆಲೆಯಲ್ಲಿಯೇ ಯಾವಾಗಲೂ ಇರಬಾರದು. ಪರಮಾತ್ಮನಿಂದಲೇ ಜೀವಾತ್ಮನು ಸತ್,ಚಿತ್,ಆನಂದವನ್ನು ಸತತ ಪಡೆಯುತ್ತಾನೆ. ಸತ್ ಎಂದರೆ ಇರುವಿಕೆ,ಚಿತ್ ಎಂದರೆ ಚೈತನ್ಯ,ಆನಂದ ಶಬ್ದದ ಅರ್ಥ ಪ್ರಸಿದ್ಧವಾಗಿದೆ. ಇವು ಮೂರು ಜೀವಾತ್ಮನ ಜೀವಾಳ. ಈ ಮೂರನ್ನು ಪಡೆದಂತೆಯೇ ಸ್ವಾಸ್ಥ್ಯವನ್ನು ಪರಮಾತ್ಮನಿಂದಲೇ ಪಡೆಯಲು ಸಾದ್ಯವಿದೆ. ಯಾಕೆಂದರೆ ಪರಮಾತ್ಮನು ಯಾವಾಗಲೂ ಸ್ವಸ್ಥ-ತನ್ನ ನೈಜ ಸಮೃದ್ಧ ಸ್ಥಿತಿಯಲ್ಲಿಯೇ ಯಾವಾಗಲೂ ಇರುವವನು. ಹೀಗಿದ್ದರೂ ಪರಮಾತ್ಮನಿಂದಲೇ ಆರೋಗ್ಯವನ್ನು ಪಡೆದುಕೊಳ್ಳಲು ಅನೇಕರಿಗೆ ಅನೇಕ ಸಲ ಸಾಧ್ಯವಾಗುತ್ತಿಲ್ಲ. ಇದು ಯಾಕೆಂದರೆ ನಮ್ಮಲ್ಲಿ ಅನೇಕರಿಗೆ ಅವನನ್ನು ಆಶ್ರಯಿಸುವ ಕ್ರಮ ಪರಿಪೂರ್ಣವಾಗಿ ಗೊತ್ತಿಲ್ಲ. ಅಜ್ಞಾನವೆಂಬ ಆವರಣವು ಸತ್,ಚಿತ್,ಆನಂದಗಳಿಗೆ ಮುಸುಕುಹಾಕಿದೆ; ಹಾಗೆಯೇ ಅವನಿಂದ ಪಡೆದುಕೊಳ್ಳಬಹುದಾದ ಸ್ವಾಸ್ಥ್ಯಕ್ಕೂ ಮುಸುಕನ್ನು ಹಾಕಿದೆ. ಪ್ರಬಲವಾದ ದುರಾದೃಷ್ಟಗಳು ರೋಗಗಳನ್ನು ಅನಿವಾರ್ಯಗೊಳಿಸಿದೆ. ಹಾಗಾಗಿ ಇಂದು ಔಷಧಗಳು ಬೇಕಾಗಿವೆ. ಆದರೆ ಆರೋಗ್ಯದ ಮೂಲ ತಪ್ಪುಗಳನ್ನು ಲಕ್ಷ್ಮಣನ ಈ ಮಾತಿನಿಂದ ಪಡೆಯಬಹುದಾಗಿದೆ, ಇಂತಹ ಇನ್ನೂ ಅನೇಕ ಮಾತುಗಳು ಪ್ರಾಚೀನ ಗ್ರಂಥಗಳಲ್ಲಿ ತುಂಬಾಕಡೆ ಸಿಗುತ್ತದೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ