ಸಂಸಾರಿಗಳಾದ ಎಲ್ಲರಿಗೂ ಅಜ್ಞಾನವೆಂಬ ವಿಸ್ಮೃತಿ ಇರುತ್ತದೆ. ಕೆಲವು ವಿಸ್ಮೃತಿಗಳು ದೀರ್ಘಕಾಲದಿಂದ ಇರುತ್ತದೆ, ದೀರ್ಘಕಾಲದವರೆಗೂ ಇರುತ್ತದೆ. ಅದೆಷ್ಟೇ ದೀರ್ಘಕಾಲ ದ್ದಾದರೂ ಜ್ಞಾನವೆಂಬ ಸ್ಮೃತಿ ಅದನ್ನು ಹೋಗಲಾಡಿಸುತ್ತದೆ.
ಜ್ಞಾನವೆಂಬ ಉಪದೇಶದ ಮೂಲಕ ಅಥವಾ ಅನುಗ್ರಹದ ಮೂಲಕ ಕೊಡುವವನು ಗುರು, ಈ ವಿಸ್ಮೃತಿಯನ್ನು ಆತ್ಮವಿಸ್ಮೃತಿ ಎಂಬುದಾಗಿ ಕರೆಯುತ್ತಾರೆ. ಇದರ ವಿಚಿತ್ರ ಏನೆಂದರೆ ವಸ್ತುವೇ ಅಲ್ಲ ಎಂಬ ಅನುಭವ ಬರುವಂತೆ ಇದು ಮಾಡುತ್ತದೆ. ಒಂದು ಉದಾಹರಣೆ: ಒಬ್ಬ ಗರತಿ ತನ್ನ ಕೊರಳಿಗೆ ಅನೇಕ ಹಾರಗಳನ್ನು ಹಾಕಿಕೊಳ್ಳುತ್ತಿದ್ದಳು.ಅವುಗಳಲ್ಲಿ ತನ್ನ ತವರುಮನೆಯಿಂದ ಬಂದ ಹಾರವನ್ನು ಕಂಡರೆ ಅವಳಿಗೆ ತುಂಬಾ ಇಷ್ಟ. ಒಂದು ದಿನ ಅವಳ ಇಷ್ಟದ ಸರ ಕಾಣದಂತಾಯಿತು. ಎಲ್ಲ ಕಡೆ ಹುಡುಕಿದಳು.ಸ್ನಾನದ ಮನೆ, ಮಲಗುವ ಕೋಣೆ, ತಾನು ಎಲ್ಲೆಲ್ಲಿ ಹೋಗುತ್ತೇನೆಯೋ ಆ ಎಲ್ಲ ಸ್ಥಳಗಳಲ್ಲಿ ಹುಡುಕಿದಳು.
ಇನ್ನು ಆ ಸರ ಸಿಗಲಾರದು ಎಂಬ ಭಾವನೆಯಿಂದ ಅಳುತ್ತ ಕುಳಿತಿದ್ದಳು. ಅವಳ ಆತ್ಮೀಯ ಗೆಳತಿ ಬಂದು ಕೇಳಿದಾಗ ತನ್ನ ಪ್ರೀತಿಯ ಸರ ಕಳೆದು ಹೋಯಿತೆಂದು ಗೆಳತಿಗೆ ಹೇಳಿದಳು. ಗೆಳತಿಯು ಅನೇಕ ಸರಗಳಿರುವ ಈಕೆಯ ಕತ್ತಿನಲ್ಲಿಯೇ ಚೆನ್ನಾಗಿ ಹುಡುಕಿದಳು. ಅಲ್ಲಿರುವ ಸರಗಳನ್ನೆಲ್ಲ ಜಾಲಾಡಿ ನೋಡಿದಾಗ ಆ ಪ್ರೀತಿಯ ಸರ ಸಿಕ್ಕಿತು. ನಿಜವೇನೆಂದರೆ ಆ ಸರ ಕಳೆದು ಹೋಗಿರಲಿಲ್ಲ. ಅವಳಿಗೆ ಕಳೆದು ಹೋಗಿದೆಯೆಂಬ ದೃಢ ಭ್ರಮೆ ಉಂಟಾಗಿದೆ.
ಆದರೂ ಗೆಳತಿಯು ತೋರಿಸಿದ ನಂತರ ಕಳೆದು ಹೋಗಿದ್ದು ಸಿಕ್ಕಿತು ಎಂದು ಉದ್ಗರಿಸಿದಳು. ಹೀಗೆ ಕಳೆದು ಹೋಗಿದೆ ಎಂಬ ಭ್ರಮೆಯೇ ಆತ್ಮವಿಸ್ಮೃತಿ. ಅದನ್ನು ಹೋಗಲಾಡಿಸಿದ ಗೆಳತಿಯೇ ಗುರು. ಹೀಗೆ ಪರಮಾತ್ಮನೇ ಇಲ್ಲ ಅವನಿಗೂ ನನಗೂ ಸಂಬಂಧವಿಲ್ಲ ಎಂಬ ಭಾವನೆಯೇ ಆತ್ಮವಿಸ್ಮೃತಿ. ಇದನ್ನು ಹೋಗಲಾಡಿಸುವವನು ಗುರು.
ಅರ್ಜುನನಿಗೆ ವಿಚಿತ್ರವಾದ ಆತ್ಮವಿಸ್ಮೃತಿ ಉಂಟಾಗಿತ್ತು. ಯುದ್ಧರಂಗಕ್ಕೆ ಬರುವಾಗ ಇದ್ದ ಮನಸ್ಥಿತಿ ಅಲ್ಲಿದ್ದ ಬಾಂಧವರನ್ನು ನೋಡಿ ಬದಲಾಯಿತು. ಧರ್ಮ ಸ್ಥಾಪನೆ, ಜನಸಾಮಾನ್ಯರ ರಕ್ಷಣೆ ಮುಂತಾದ ಉದ್ದೇಶಗಳನ್ನು ಮರೆತು ಹೋದನು. ಮೋಹಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತ ಯುದ್ಧ ಮಾಡಲಾಗದೇ ಕುಳಿತು ಬಿಟ್ಟನು. ಅವನ ಆತ್ಮವಿಸ್ಮೃತಿ ಎಷ್ಟು ಪ್ರಬಲವಾಗಿತ್ತೆಂದರೆ ಅವನು ಯಾವಾಗಲೂ ಹಿಡಿದುಕೊಳ್ಳುವ, ಅವನ ಸಾಧನೆಗಳ ಪ್ರತೀಕದಂತಿರುವ ಗಾಂಡೀವ ಧನುಸ್ಸೇ ಅವನಿಗೆ ಭಾರವಾಗಿ ಹೋಯಿತು. ಶ್ರೀಕೃಷ್ಣ ಪರಮಾತ್ಮನು ಗೀತೆಯ ಉಪದೇಶದ ಮೂಲಕ ಈ ಆತ್ಮವಿಸ್ಮೃತಿಯನ್ನು ಹೋಗಲಾಡಿಸಿದನು. ಆಗ ಅರ್ಜುನನ ಮುಖದಿಂದ ಬಂದ ಮಾತಿದು… ನಷ್ಟೋ ಮೋಹ ಸ್ಮೃತಿರ್ಲಬ್ಧಾತ್ವತ್ಪ್ರಸಾದನ್ಮಯಾಚ್ಯುತ.
ಅಚ್ಯುತ, ನಿನ್ನ ಅನುಗ್ರಹದಿಂದ ನನ್ನ ಮೋಹ ನಾಶಗೊಂಡಿದೆ, ಸ್ಮೃತಿಯು ಉದಯಿಸಿದೆ. ಅವನು ಹೇಳಿರುವ ಸ್ಮೃತಿ ಎಂಬ ಶಬ್ದವೇ ಅವನಿಗೆ ಹಿಂದೆ ಆತ್ಮವಿಸ್ಮೃತಿಯಾಗಿತ್ತೆಂಬುದನ್ನು ಸೂಚಿಸುತ್ತದೆ. ಕೃಷ್ಣ ಪರಮಾತ್ಮನು ಆತ್ಮವಿಸ್ಮೃತಿಯನ್ನು ಹೋಗಲಾಡಿಸಿದ್ದರಿಂದ ಗುರು ಎನಿಸಿದ್ದಾನೆ. ಅರ್ಜುನನ್ನು ನಿಮಿತ್ತೀಕರಿಸಿ ಜಗತ್ತಿಗೇ ಉಪದೇಶ ನೀಡುವ ಮೂಲಕ ಜಗದ್ಗುರುವಾಗಿದ್ದಾನೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ