ಉಪನ್ಯಾಸಕರ ಕಾರ್ಯಾಗಾರ

posted in: Bhagavadgeeta Abhiyana | 0

ವಿಜಯನಗರ(ಹೊಸಪೇಟೆ) ಕೇಂದ್ರಿತವಾಗಿ ನಡೆಯುತ್ತಿರುವ ಈ ವರ್ಷದ ಭಗವದ್ಗೀತಾ ಅಭಿಯಾನದ ಅಂಗವಾಗಿ ಇಂದು ಹೊಸಪೇಟೆಯ ಕೋರ್ಟ್ ಪಕ್ಕದಲ್ಲಿ ಇರುವ ಮಹಿಳಾ ಸಮಾಜ ಶಾಲೆಯಲ್ಲಿ ಉಪನ್ಯಾಸಕರ ಕಾರ್ಯಾಗಾರ ನಡೆಯಿತು. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸುಮಾರು 50 ಕ್ಕೂ ಹೆಚ್ಚು ಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಶ್ರೀಕೃಷ್ಣ ಪರಮಾತ್ಮನ ದಿವ್ಯವಾಣಿಯಾದ ಭಗವದ್ಗೀತೆಯನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹತ್ತಿರಕ್ಕೆ ಕೊಂಡೊಯ್ಯುವ ಮಹತ್ತರವಾದ ಉದ್ದೇಶದಿಂದ ಈ ಉಪನ್ಯಾಸಕ ತರಬೇತಿ ಕಾರ್ಯಾಗಾರವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು ಭಗವದ್ಗೀತೆಯ ತತ್ವಗಳು ಮನುಷ್ಯನ ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಈ ಅಭಿಯಾನದ ಮೂಲ ಉದ್ದೇಶ.
ಈ ಅಭಿಯಾನದ ಯಶಸ್ಸಿಗಾಗಿ ಖ್ಯಾತ ವಿದ್ವಾಂಸರಾದ ಡಾ ll ಶಂಕರ ಭಟ್ ಬಾಲಿಗದ್ದೆ ಅವರು ಉಪನ್ಯಾಸದ ಸಂಘಟನೆಯ ಬಗ್ಗೆ ವಿವರವಾಗಿ ವಿವರಿಸಿದರು. ಹಾಗೂ ಡಾ ll ಗಣೇಶ ಭಟ್ ಕೊಪ್ಪ ಮಾದರಿ ಮಾದರಿ ಉಪನ್ಯಾಸ, ಉಪನ್ಯಾಸದ ಸ್ವರೂಪದ ಬಗ್ಗೆ ವಿವರಿಸಿದರು. ಉಪನ್ಯಾಸಕರಿಗೆ ಅಗತ್ಯವಿರುವ ವಿಷಯದ ಸ್ಪಷ್ಟತೆಯನ್ನು ಒದಗಿಸದರು.
ಶಂಕರ ಭಟ್ ಮಾತನಾಡಿ ಭಗವದ್ಗೀತಾ ಅಭಿಯಾನದ ಚರಿತ್ರೆಯ ಪುಟಗಳನ್ನು ಮೆಲುಕುಹಾಕಿದರು. 2007ರ ಅಕ್ಟೋಬರ್ 28ರಂದು ಹುಬ್ಬಳ್ಳಿಯಲ್ಲಿ ಆರಂಭವಾದ ಈ ಮಹಾ ಅಭಿಯಾನವು ಸತತವಾಗಿ ಹದಿನೆಂಟು ವರ್ಷಗಳನ್ನು ಮೀರಿ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಯಶಸ್ವಿಯಾಗಿ ಮುನ್ನಡೆದುಕೊಂಡು ಬಂದಿದೆ. ಪ್ರಾರಂಭದ ದಿನಗಳಲ್ಲಿ ಒಂದೊಂದು ಜಿಲ್ಲೆಯಾಗಿ ಸಂಚರಿಸುತ್ತಾ, ಇಂದು ಇಡೀ ರಾಜ್ಯಾದ್ಯಂತ ಪಂಚಮುಖಿ ಕಾರ್ಯಕ್ರಮಗಳಾದ ಕಂಠಪಾಠ, ಪ್ರವಚನ, ಮನರಂಜನೆ, ಪ್ರದರ್ಶನ ಮತ್ತು ಮನೆಮನೆಗೆ ಪುಸ್ತಕ ವಿತರಣೆಯ ಮೂಲಕ ಜನಸಾಮಾನ್ಯರ ಮನೆ ಮನಗಳನ್ನು ತಲುಪಿದೆ. ಪ್ರವಚನಕಾರರು ಗಹನವಾದ ವಿಷಯಗಳನ್ನು ಅತ್ಯಂತ ಸರಳೀಕರಿಸಿ, ಶ್ಲೋಕಗಳ ಉಚ್ಚಾರಣೆಯಲ್ಲಿ ವಿಶೇಷ ಕಾಳಜಿ ವಹಿಸಿ ಜನರಿಗೆ ತಲುಪಿಸುವುದೇ ಈ ಅಭಿಯಾನದ ಅತಿ ದೊಡ್ಡ ಚಾತುರ್ಯವಾಗಿದೆ.
ಇಂದಿನ ಆಧುನಿಕ ಮನಸ್ಸುಗಳು ಧರ್ಮಕ್ಕಿಂತ ಹೆಚ್ಚಾಗಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯಡೆಗೆ ಒಲವು ತೋರುತ್ತಿರುವುದರಿಂದ, ಭಗವದ್ಗೀತೆಯ ತತ್ವಗಳನ್ನು ವೈಚಾರಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸುವುದು ಅತ್ಯಂತ ಅವಶ್ಯಕವಾಗಿದೆ. ಭಗವದ್ಗೀತೆಯು ಭಾವುಕತೆ ಮತ್ತು ವೈಚಾರಿಕತೆ ಎಂಬ ಎರಡು ಮುಖಗಳನ್ನು ಹೊಂದಿದ್ದು, ಪ್ರತಿಯೊಬ್ಬ ಪ್ರವಚನಕಾರರು ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಇದನ್ನು ವಿವರಿಸಬೇಕು ಎಂದರು. ಒಟ್ಟಾರೆಯಾಗಿ, ಈ ಕಾರ್ಯಾಗಾರವು ಉಪನ್ಯಾಸಕರಿಗೆ ಸಮಗ್ರ ತರಬೇತಿಯನ್ನು ನೀಡುವುದರೊಂದಿಗೆ, ಗೀತೆಯ ಸಂದೇಶವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಗಟ್ಟಿಗೊಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಗಲಿ ಎಂದು ಆಶೀರ್ವದಿಸಿದರು.