ಚಿಕ್ಕ ವಯಸ್ಸಿನಲ್ಲಿ ರೂಢಿ ಮಾಡಿಕೊಂಡ ಒಳ್ಳೆಯ ಹವ್ಯಾಸಗಳು ಇಳಿವಯಸ್ಸಿನಲ್ಲಿ ಬದುಕಿಗೆ ಅವಲಂಬನೆ ಯಾಗುತ್ತದೆ. ಯಾಕೆಂದರೆ ಇಳಿ ವಯಸ್ಸಿನಲ್ಲಿ ಹೊಸ ಸಾಧನೆಯ ಉತ್ಸಾಹ ಕಡಿಮೆಯಾಗಿರುತ್ತದೆ. ಇದನ್ನು ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲದ ಒಂದು ಶ್ಲೋಕ ಒಂದು ಉದಾಹರಣೆಯೊಂದಿಗೆ ಸುಂದರವಾಗಿ ತಿಳಿಸಿಕೊಡುತ್ತದೆ.
ರಾಜನ ಅಂತಃಪುರದಲ್ಲಿ ಇರುವ ಭಟನನ್ನು ಕಂಚುಕಿ ಎಂಬುದಾಗಿ ಕರೆಯುತ್ತಿದ್ದರು. ಅಂತಃಪುರ ಎಂದರೆ, ರಾಣಿಯರು ಮತ್ತು ರಾಣಿಯರ ಸುಖಿಯರು ಇರುವ ಅರಮನೆಯ ಒಳಭಾಗ. ಅಲ್ಲಿ ಸತ್ಯನಿಷ್ಠನಾದ, ಕಾಮದೋಷರಹಿತನಾದ, ವಿವೇಕಿಯಾದ ವ್ಯಕ್ತಿಯನ್ನೇ ಕಂಚುಕಿ ಎಂಬುದಾಗಿ ನೇಮಿಸಿರುತ್ತಾರೆ. ದುಷ್ಯಂತನ ಅಂತಃಪುರದಲ್ಲಿರುವ ಒಬ್ಬ ಕಂಚುಕಿಯ ಮಾತು-“ಆಚಾರ ಇತ್ಯವಹಿತೇನ ಮಯಾ ಗೃಹೀತಾ | ಯಾ ವೇತ್ರಯಷ್ಟಿರವರೋಧಗೃಹೇಷು ರಾಜ್ಞಃ || ಕಾಲೇ ಗತೇ ಬಹುತಿಥೇ ಮಮ ಸೈವ ಜಾತಾ | ಪ್ರಸ್ಥಾನವಿಕ್ಲವಗತೇರಾವಲಂಬನಾರ್ಥಾ ||” ಅಂತಃಪುರದಲ್ಲಿರುವ ಭಟರು ದಂಡವನ್ನು ಹಿಡಿದುಕೊಂಡು ನಿಂತಿರಬೇಕೆಂಬುದು ಹಳೆಯ ಕಾಲದ ರೂಢಿ, ಆ ರೂಢಿಯಂತೆ ತಾನು ಕೈಲಿ ದಂಡವನ್ನು ಹಿಡಿದುಕೊಂಡು ಅಂತಃಪುರದಲ್ಲಿ ನಿಂತಿರುತ್ತಿದ್ದೆ. ಹಾಗೆಯೇ ಬಹುಕಾಲ ಕಳೆದು ಹೋಗಿದೆ, ಅನೇಕ ವರ್ಷಗಳು ಕಳೆದು ಹೋಗಿವೆ. ಈಗ ವೃದ್ಧಾಪ್ಯ ಬಂದಿದೆ. ಹಾಗಾಗಿ ಓಡಾಡುವುದಕ್ಕೆ ಅದೇ ದಂಡವೇ ಆಲಂಬನೆಯಾಗಿದೆ. ಪೂರ್ವ ವಯಸ್ಸಿನಲ್ಲಿ ಆರಂಭಿಸಿಕೊಂಡ ರೂಢಿ ಇಳಿ ವಯಸ್ಸಿನ ಬದುಕಿಗೆ ಅವಲಂಬನೆಯಾಗಿದೆ – ಎನ್ನುತ್ತಿದ್ದಾನೆ ಕಂಚುಕಿ.
ಇದೇ ರೀತಿಯಲ್ಲಿ ಒಬ್ಬ ಸಂನ್ಯಾಸಿ ಚಿಕ್ಕ ವಯಸ್ಸಿನಲ್ಲಿ ನಾರಾಯಣ ನಾಮಸ್ಮರಣೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಾನೆ. ಯಾರಾದರೂ ನಮಸ್ಕಾರ ಮಾಡಿದರೆ ನಾರಾಯಣನ ನಾಮಸ್ಮರಣೆಯನ್ನು ಉಚ್ಚಾರಣೆಯೊಂದಿಗೆ ಮಾಡಬೇಕು ಎಂಬುದು ಶಾಸ್ತç ಸಂಪ್ರದಾಯ. ಹೀಗೆ ರೂಢಿಯಲ್ಲಿ ಬಂದ ಉಚ್ಚಾರಣ ಪೂರ್ವಕವಾಗಿ ನಾರಾಯಣ ಸ್ಮರಣೆಯು ಇಳಿಯ ವಯಸ್ಸಿನಲ್ಲಿ ಬದುಕಿಗೆ ಅವಲಂಬನೆ ಯಾಗುತ್ತದೆ. ಅದು ಹೇಗೆ ಎಂಬುದನ್ನು ಗಮನಿಸಬೇಕು. ಇಳಿಯ ವಯಸ್ಸು ಬಂದಾಗ ನಿದ್ರೆ ಸುಲಭವಾಗಿ ಬರುವುದಿಲ್ಲ. ಚಿಂತೆ-ಭಯಗಳು ಅನೇಕ ಸಲ ಆವರಿಸುತ್ತವೆ. ನಿದ್ರೆ ಹತ್ತದೇ ಇರುವಾಗ ಚಿಂತೆ-ಭಯಗಳು ಆವರಿಸಿಬಿಟ್ಟರೆ ನಿದ್ರೆ ಮತ್ತಷ್ಟು ದೂರವಾಗಿ ಬಿಡುತ್ತದೆ. ಆಗ ಚಿಂತೆ-ಭಯಗಳು ಆವರಿಸದಂತೆ ನೋಡಿಕೊಳ್ಳಲು ದೇವರ ನಾಮಸ್ಮರಣೆ ಶ್ರೇಷ್ಠವಾದ ಉಪಾಯ. ಮಲಗಿದ್ದಲ್ಲಿಯೇ ಸಣ್ಣ ಧ್ವನಿಯಲ್ಲಿ ದೇವರ ನಾಮೋಚ್ಚರಣೆ ಮಾಡುತ್ತಾ ದೇವರ ಸ್ಮರಣೆ ಮಾಡುತ್ತಾ ಕಣ್ಣು ಮುಚ್ಚಿಕೊಂಡಿದ್ದರೆ ನಿಧಾನವಾಗಿ ಚಿಂತೆ-ಭಯಗಳು ಕಡಿಮೆಯಾಗುತ್ತವೆ ಮತ್ತು ನಿದ್ರೆ ನಿಧಾನವಾಗಿ ಶುರುವಾಗುತ್ತದೆ. ನಿದ್ರೆಯು ಆರೋಗ್ಯಯುತ ಜೀವನಕ್ಕೆ ಮುಖ್ಯ ಆಧಾರ.
ಓಡಾಡಲು ಕಷ್ಟವಾಗುವ ಮುದುಕನಿಗೆ ದೊಣ್ಣೆಯ ಕೋಲು ಆಧಾರವಾದಂತೆ, ಮನಸ್ಸು ಮೈಗಳನ್ನು ಆರೋಗ್ಯವಾಗಿಟ್ಟುಕೊಂಡು ಹೋಗಲು ವೃದ್ಧಾಪ್ಯದಲ್ಲಿ ದೇವರ ಸ್ಮರಣೆಯೇ ಆಧಾರ. ಆರಂಭದಲ್ಲಿ ರೂಢಿ, ಶಾಸ್ತç ಸಂಪ್ರದಾಯ ಅಥವಾ ಹವ್ಯಾಸವಾಗಿ ಮೈಗೂಡಿಸಿಕೊಂಡಿದ್ದರೆ ಅದೇ ಕೊನೆಗೆ ಅವಲಂಬನೆಯಾಗುತ್ತದೆ. ಆದ್ದರಿಂದ ಸಾಮಾಜಿಕ ಸಭ್ಯತೆಯ ದೃಷ್ಟಿಯಿಂದಾಗಲಿ, ಹಿರಿಯರ ಮಾತಿಗೆ ಒಳಗಾಗುವ ಅನಿವಾರ್ಯತೆಯಿಂದಾಗಲಿ ಅಥವಾ ಕಾಟಾಚಾರಕ್ಕಾಗಲಿ ಒಳ್ಳೆಯ ಹವ್ಯಾಸ ಚಿಕ್ಕ ವಯಸ್ಸಿನಲ್ಲಿ ಚೆನ್ನಾಗಿ ರೂಢಿ ಆಗುವಂತೆ ಮಾಡಿಕೊಳ್ಳಬೇಕು.
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ