ಮೋಹ,ಭಯಗಳಿಗೆ ವಿಚಲಿತರಾಗಬಾರದು

posted in: Gurubodhe | 0

ಧೈರ್ಯದಿಂದ ಪ್ರಯತ್ನದಲ್ಲಿ ಮುನ್ನುಗ್ಗುವವನಿಗೆ ಹೆಚ್ಚಿನ ಫಲ ದೊರೆಯುತ್ತದೆ. ಪ್ರಯತ್ನದ ಮಧ್ಯದಲ್ಲಿ ಬರುವ ವಿಘ್ನಗಳಿಗೆ ಮತ್ತು ತೋರಿಕೆಯ ಮೋಹಗಳಿಗೆ ಎದೆಗುಂದದೆ ಮುಂದೆ ಸಾಗುತ್ತಿರಬೇಕು.
ಇದಕ್ಕೊಂದು ಸುಭಾಷಿತ “ರತ್ನೈರ್ಮಹಾಬ್ಧೇಸ್ತುತುಷುರ್ನ ದೇವಾಃ | ನ ಭೇಜಿರೇ ಭೀಮವಿಷೇಣ ಭೀತಿಮ್ || ಸುಧಾಂ ವಿನಾ ನ ಪ್ರಯಯುರ್ವಿರಾಮಮ್ | ನ ನಿಶ್ಚಿತಾರ್ಥಾದ್ವಿರಮಂತಿ ಧೀರಾಃ ||” ಸಮುದ್ರ ಮಥನಕಾಲದಲ್ಲಿ ದೇವತೆಗಳು ಮತ್ತು ಅಸುರರು ಮಂದರ ಪರ್ವತವನ್ನು ಕಡಗೋಲಾಗಿ ಮಾಡಿಕೊಂಡು ಸಮುದ್ರವನ್ನು ಮಥನ ಮಾಡುತ್ತಿದ್ದರು. ಅಮೃತವನ್ನು ಪಡೆಯುವುದು ಅವರ ಉದ್ದೇಶ. ಆದರೆ ಮೊದಲು ಅಮೃತ ಬರಲಿಲ್ಲ. ಭಯಂಕರವಾದ ವಿಷ ಹೊರಬಂದಿತು. ವಿಷಯವನ್ನು ಕಂಡು ಹೆದರಿ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. (ವಿಷಯವನ್ನು ಶಿವನು ಕುಡಿಯುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದನೆಂಬ ಕಥೆ ಇದೆ. ಆದರೆ ಪ್ರಕೃತದಲ್ಲಿ ಅದನ್ನು ಹೇಳಲಿಲ್ಲ). ಮಥನವನ್ನು ಮುಂದುವರಿಸಿದರು. ಆಮೇಲೆ ಅನೇಕ ರತ್ನಗಳು ಹೊರಬಂದವು. ಐರಾವತ ಎಂಬ ಆನೆ, ಉಚ್ಚೈಂ ಶ್ರವಸ್ಸು ಎಂಬ ಕುದುರೆ ಮುಂತಾದ ಅನೇಕ ರತ್ನಗಳು ಹೊರಬಂದವು. ದೇವತೆಗಳು ಇದಕ್ಕೆ ಸಂತುಷ್ಟರಾಗಲಿಲ್ಲ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಅಮೃತಸಿಗುವವರೆಗೆ ವಿರಮಿಸದೇ ಪ್ರಯತ್ನಿಸಿದರು. ಹೀಗೆ ಭಯ ಮತ್ತೆ ಮೋಹಗಳಿಗೆ ಒಳಗಾಗದೇ ನಿರಂತರ ಪ್ರಯತ್ನಿಸಿದ್ದರಿಂದ ಕಟ್ಟಕಡೆಯಲ್ಲಿ ಅಮೃತವನ್ನು ಪಡೆದರು.
ಇದೇ ರೀತಿಯಲ್ಲಿ ಧೀರನಾದವರು ತಾವು ನಿಶ್ಚಯಿಸಿಕೊಂಡು ಹೊರಟಿರುವ ಸದುದ್ದೇಶವು ಈಡೇರುವವರೆಗೂ ವಿರಮಿಸುವುದಿಲ್ಲ. ತಾವಿಟ್ಟುಕೊಂಡ ಉದ್ದೇಶದಲ್ಲಿ ಏನಾದರೂ ತಪ್ಪಿದ್ದರೆ ಅದನ್ನು ತಿದ್ದಿಕೊಂಡು ಪ್ರಯತ್ನವನ್ನು ಪರಿಷ್ಕರಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಯತ್ನಿಸುವಾಗ ಕೆಲವೊಮ್ಮೆ ವಿಷದಂತಹ ಭಯಂಕರ ಅನುಭವ ಎದುರಾಗಬಹುದು. ಅದಕ್ಕೆ ಅವರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಮತ್ತೆ ಕೆಲವೊಮ್ಮೆ ಮೋಹಕವಾದ ತೋರಿಕೆಯ ಫಲಗಳು ಬರಬಹುದು. ಅದರ ಮೋಹಕ್ಕೆ ಒಳಗಾಗಿ ತಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ತಮ್ಮ ಪರಮ ಉದ್ದೇಶವನ್ನು ಪಡೆಯುವವರೆಗೂ ವಿರಮಿಸದೇ, ಧೃತಿಗೆಡದೆ, ಉದ್ಯಮಶೀಲರಾಗಿ ಮುಂದುವರೆಯುತ್ತಾರೆ. ಹೀಗೆ ಮುಂದುವರೆದಿದ್ದರಿಂದಲೇ ಕೊನೆಯಲ್ಲಿ ದೊಡ್ಡಫಲವನ್ನು ಪಡೆದುಕೊಳ್ಳುತ್ತಾರೆ.
ಭಗವದ್ಗೀತೆಯಲ್ಲಿ ಬರುವ ಶ್ಲೋಕವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. “ಯತ್ತದಗ್ರೇ ವಿಷಮಿವ ಪರಿಣಾಮೇ ಅಮೃತೋಪಮಮ್ | ತತ್ಸುಖಂ ಸಾತ್ವಿ ಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ||” ಆರಂಭದಲ್ಲಿ ವಿಷದಂತಹ ಕಹಿ ಅನುಭವವನ್ನುಂಟುಮಾಡುವ, ಕೊನೆಯಲ್ಲಿ ಅಮೃತದಂತಹ ಆನಂದವನ್ನುಂಟುಮಾಡುವ, ಪ್ರಯತ್ನಗಳು ಬಹಳಮುಖ್ಯ. ಅಂತಹ ಪ್ರಯತ್ನಗಳಿಂದ ಸಿಗುವ ಸುಖವು ಸಾತ್ವಿಕ ಸುಖವಾಗಿರುತ್ತದೆ. ಅಂತರಾತ್ಮನ ಮತ್ತು ಬುದ್ಧಿಯ ಪ್ರಸನ್ನತೆಯಿಂದ ಇಂತಹ ಸುಖಾನುಭವ ಉಂಟಾಗುತ್ತದೆ. (ಆತ್ಮನನ್ನು ಕುರಿತಾದ ಬುದ್ಧಿ ಎಂಬ ಅರ್ಥವೂ ಇದೆ). ಆದರೆ ಆರಂಭದಲ್ಲಿ ಬರುವ ವಿಷದಂತಹ ಕಹಿ ಅನುಭವಕ್ಕೆ ಧೃತಿಗೆಡದೆ ಮುಂದುವರಿಯುತ್ತಾ ಇರಬೇಕು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ