ವಿವೇಕಭ್ರಷ್ಟರಿಗೆ ಪತನಗಳು ಖಚಿತ

posted in: Gurubodhe | 0

ವಿವೇಕ ಎಂದರೆ ವಿವೇಚನಾ ಶಕ್ತಿ, ಅಂದರೆ ಸ್ಫುಟವಾಗಿ ಬಿಡಿಸಿಕೊಳ್ಳುವ ಸಾಮರ್ಥ್ಯ. ಧರ್ಮ-ಅಧರ್ಮಗಳು, ಕಾರ್ಯ-ಅಕಾರ್ಯಗಳು ಮತ್ತು ಬಂಧ-ಮೋಕ್ಷಗಳು ಒಂದಕ್ಕೊಂದು ಮಿಶ್ರಣಗೊಂಡು ಗೋಚರವಾಗುತ್ತವೆ. ಆಗ ಅವುಗಳನ್ನು ಬಿಡಿಸಿ ತಿಳಿದುಕೊಳ್ಳುವುದರ ಜೊತೆಗೆ ಧರ್ಮವನ್ನೇ, ಕಾರ್ಯವನ್ನೇ ಮತ್ತು ಮೋಕ್ಷವನ್ನೇ ಅನುಸರಿಸಿಕೊಂಡು ಹೋಗುವ ಸಾಮರ್ಥ್ಯವನ್ನು ವಿವೇಕವೆಂದು ಕರೆಯುತ್ತಾರೆ. ಅಂದರೆ ಕೇವಲ ಬಿಡಿಸಿಕೊಳ್ಳುವುದಕ್ಕಷ್ಟೇ ವಿವೇಕ ಶಬ್ದದ ಅರ್ಥವು ಸೀಮಿತವಾಗದೇ ಬಿಡಿಸಿಕೊಂಡದ್ದರಲ್ಲಿ ಶ್ರೇಷ್ಠವಾದದ್ದನ್ನೇ ನಿಷ್ಠೆಯಿಂದ ಅನುಸರಿಸಿಕೊಂಡು ಹೋಗುವ ಸಾಮರ್ಥ್ಯದವರೆಗೂ ವಿವೇಕಶಬ್ದದ ಅರ್ಥದ ವ್ಯಾಪ್ತಿ ಇರುತ್ತದೆ. ಈ ವಿವೇಕಶಕ್ತಿ ಕಡಿಮೆಯಾದರೆ ಅಥವಾ ಕೈತಪ್ಪಿ ಹೋದರೆ ಪತನವಾಗುವುದು ನಿಶ್ಚಿತ. ವಿವೇಕ ಶಕ್ತಿಯು ಕೈತಪ್ಪಿ ಹೋಗದಂತೆ ನೋಡಿಕೊಂಡವರೇ ಮಹಾತ್ಮರಾಗುತ್ತಾರೆ
ವಿವೇಕಶಕ್ತಿಯು ಕೈತಪ್ಪಿ ಹೋದರೆ ಏನಾಗುತ್ತದೆ ಎಂಬುದನ್ನು ಭರ್ತ್ರ ಹರಿಯು ಒಂದು ಸುಭಾಷಿತದಲ್ಲಿ ಹೇಳುತ್ತಾನೆ-“ಶಿರಃ ಶಾರ್ವಂ ಸ್ವರ್ಗಾತ್ ಪತತಿಶಿರಸಃ ತತ್ ಕ್ಷಿತಿಧರಂ | ಮಹೀಧ್ರಾದುತ್ತುಙಂ ದವನಿಮವನೇಶ್ಚಾಪಿ ಜಲಧಿಮ್ || ಅಧೋಽಧೋ ಗಂಗೇಯಂ ಪದಮುಪಗತಾ ಸ್ತೋಕಮಥವಾ | ವಿವೇಚನಾಭ್ರಷ್ಟಾನಾಂ ಭವತಿ ವಿನಿಪಾತಃ ಶತಮುಖಃ ||” ಗಂಗೆಯನ್ನು ಇಲ್ಲಿ ಉದಾಹರಿಸಲಾಗಿದೆ. ವಿಷ್ಣುಲೋಕದಿಂದ ಹೊರಟಗಂಗೆಯು ಶಿವನ ತಲೆಯ ಮೇಲೆ ಬಂದು ಬಿದ್ದಳು ಅಲ್ಲಿಂದ ಹಿಮಾಲಯದ ಮೇಲೆ ಬಿದ್ದಳು. ಹಿಮಾಲಯದ ಉತ್ತುಂಗ ಶಿಖರದಿಂದ ಸಾವಿರಾರು ಕಿಲೋಮೀಟರುಗಳಷ್ಟು ಕೆಳಗೆ ಭೂಮಿಗೆ ಬಂದಳು. ಆ ಭೂಮಿಯಲ್ಲಿ ತಗ್ಗಿನಲ್ಲಿ ಇಳಿದು ಇಳಿದು ಅತ್ಯಂತ ಕೆಳಗೆ ಸಮುದ್ರವನ್ನು ಸೇರಿದಳು.
ಇದೇ ರೀತಿ ವಿವೇಕಶಕ್ತಿಯನ್ನು ಕಳೆದುಕೊಂಡವರಿಗೆ ನೂರಾರು ರೀತಿಯಲ್ಲಿ ಪತನಗಳಾಗುತ್ತವೆ. ಪತನ ಎಂದರೆ ಬೀಳುವಿಕೆ. ಶಕ್ತಿ ಕಳೆದು ಕೊಂಡವರು ಬೀಳುತ್ತಾರೆ. ಅವರ ಬುದ್ಧಿ ಶಕ್ತಿ, ಇಂದ್ರಿಯಗಳ ಶಕ್ತಿ, ಶರೀರದ ಶಕ್ತಿ ಮುಂತಾದ ಶಕ್ತಿಗಳು ಹ್ರಾಸಗೊಳ್ಳುವುದರಿಂದ ಪತನಗಳಾಗುತ್ತವೆ.
ಶ್ರೀ ಶಂಕರ ಭಗವ್ಪಾದರು ಶ್ರೀ ಲಕ್ಷ್ಮೀ ನೃಸಿಂಹ ಕರುಣಾರಸ ಸ್ತೋತ್ರದಲ್ಲಿ ಹೇಳಿದ ಶ್ಲೋಕ ಸ್ಮರಣೀಯ “ಅಂಧಸ್ಯ ಮೇ ಹೃತವಿವೇಕಮಹಾಧನಸ್ಯ ಚೋರೈಃ ಮಹಾ ಬಲಿಭಿರಿಂದ್ರಿಯನಾಮಧೇಯೈಃ| ಮೋಹಾಂಧಕಾರೆ ವಿನಿಪಾತಿತಸ್ಯ ಲಕ್ಷ್ಮೀ ನರಸಿಂಹ ಮಮ ದೇಹಿ ಕರಾವಲಂಬಮ್ ||” ನನ್ನ ಮಹಾಸಂಪತ್ತಾಗಿರುವ ವಿವೇಕವನ್ನು ಇಂದ್ರಿಯಗಳೆAಬ ಪ್ರಬಲ ಕಳ್ಳರು ಅಪಹರಿಸಿ ಕೊಂಡು ಹೋಗಿದ್ದಾರೆ. ಇದರಿಂದ ಮೋಹವೆಂಬ ಕತ್ತಲೆಯುಳ್ಳ ಬಾವಿಯಲ್ಲಿ ಬಿದ್ದುಹೋಗಿದ್ದೇನೆ. ಪ್ರಭೋ ಲಕ್ಷ್ಮೀ ನೃಸಿಂಹ! ನನ್ನನ್ನು ಕೈ ಹಿಡಿದು ನೀನೇ ಮೇಲಕ್ಕೆ ಎತ್ತಬೇಕು.
ಇಂದ್ರಿಯ ಭೋಗಗಳ ತೀವ್ರ ಆಕರ್ಷಣೆಗೆ ಒಳಗಾದರೆ ವಿವೇಕಶಕ್ತಿ ಮತ್ತು ಬುದ್ಧಿಶಕ್ತಿಯೇ ಮುಂತಾದ ಶಕ್ತಿಗಳು ಹ್ರಾಸಗೊಳ್ಳುತ್ತವೆ. ಆದ್ದರಿಂದ ಇಂದ್ರಿಯಗಳೆಂಬ ಪ್ರಬಲ ಕಳ್ಳರ ಕೈಗೆ ಸಿಗದಂತೆ ವಿವೇಕಶಕ್ತಿಯನ್ನು ಕಾಪಾಡಿಕೊಳ್ಳಬೇಕು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ