ಸದ್ಗುಣಗಳೇ ಭೂಷಣ – ದುರ್ಗುಣಗಳೇ ಕಳಂಕ

posted in: Gurubodhe | 0

ಮನುಷ್ಯನಿಗೆ ಅಂಟಿಕೊಂಡಿರುವ ದುರ್ಗುಣಗಳು ಪ್ರಬಲವಾಗಿದ್ದರೆ ಒಂದೊಂದೇ ದುರ್ಗುಣ ಏನೆಲ್ಲ ಅನರ್ಥವನ್ನುಂಟುಮಾಡುತ್ತದೆ! ಹಾಗೆಯೇ ಸದ್ಗುಣಗಳಲ್ಲಿ ಒಂದೊಂದು ಸದ್ಗುಣವೇ ಏನೆಲ್ಲ ಸಾರ್ಥಕತೆಯನ್ನುಂಟುಮಾಡುತ್ತದೆ ! ಈ ಸುಂದರ ವಿಷಯವನ್ನು ಭರ್ತ್ರಹರಿ ಒಂದು ಸುಭಾಷಿತದಲ್ಲಿ ಅಚ್ಚುಕಟ್ಟಾಗಿ ವರ್ಣಿಸಿದ್ದಾನೆ. “ಲೋಭಾಶ್ಚೇದಗುಣೇನ ಕಿಂ ಪಿಶುನತಾ ಯದ್ಯಸ್ತಿ ಕಿಂ ಪಾತಕೈಃ | ಸತ್ಯಂ ಚೇತ್ತಪಸಾ ಚ ಕಿಂ ಶುಚಿ ಮನೋ ಯದ್ಯಸ್ತಿ ತೀರ್ಥೇನ ಕಿಮ್ || ಸೌಜನ್ಯಂ ಯದಿ ಕಿಂ ಗುಣೈಃ ಸುಮಹಿಮಾ ಯದ್ಯಸ್ತಿ ಕಿಂ ಮಂಡನೈಃ | ಸದ್ವಿದ್ಯಾ ಯದಿ ಕಿಂ ಧನೈರಪಯಶೋ ಯದ್ಯಸ್ತಿ ಕಿಂ ಮೃತ್ಯುನಾ ||”
ಲೋಭವೆಂಬ ಒಂದು ದುರ್ಗುಣ ಇದ್ದರೆ ಮತ್ತೆ ಬೇರೆ ಯಾವ ದುರ್ಗುಣ ಇರಬೇಕೆಂದಿಲ್ಲ. ಅದೊಂದೇ ದುರ್ಗುಣವೇ ಎಲ್ಲಾ ಅನರ್ಥಗಳನ್ನೂ ಉಂಟುಮಾಡಬಲ್ಲದು. ಉಳಿದೆಲ್ಲ ಸದ್ಗುಣಗಳೇ ತುಂಬಿದ್ದರೂ ಲೋಭವೆಂಬ ಒಂದೇ ದುರ್ಗುಣ ಆ ಎಲ್ಲ ಸದ್ಗುಣಗಳನ್ನು ನಾಶಮಾಡಬಲ್ಲದು. ಇದನ್ನೇ ಶ್ರೀ ಶಂಕರ ಭಗವತ್ಪಾದರು “ಪ್ರಶ್ನೋತ್ತರರತ್ನಮಾಲಿಕಾ” ಗ್ರಂಥದಲ್ಲಿ ಹೇಳಿದ್ದಾರೆ. “ಕಃ ಸರ್ವ ಗುಣ ವಿನಾಶೀ? ಲೊಭಃ” ಹಣದ ಹಪಹಪಿಕೆ ಹತ್ತಿದರೆ ಎಲ್ಲಾ ಉದಾತ್ತ ಚಿಂತನೆಗಳು ಕೈಬಿಟ್ಟು ಹೋಗುತ್ತವೆ.
“ಪಿಶುನತಾ” ಎಂದರೆ ಚಾಡಿ ಹೇಳುವಿಕೆ. ಇದರಿಂದ ಯಾವ ಯಾವ ಅನರ್ಥಗಳು ಮುಂದೆ ಆಗಬಹುದೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಶ್ರೀರಾಮನ ಯುವರಾಜ ಪಟ್ಟಾಭಿಷೇಕ ಕೈ ಬಿಟ್ಟು ಹೋಗಿ ಕಾಡಿಗೆ ಹೋಗುವಂಥ ಪರಿಸ್ಥಿತಿ ಬಂದದ್ದು ಪಿಶುನತಾದಿಂದಲೇ. ಆದ್ದರಿಂದ ಪಿಶುನತಾದಿಂದುಂಟಾಗುವ ಪಾಪಗಳ ಪಟ್ಟಿಯನ್ನು ನಿರ್ದಿಷ್ಟಗೊಳಿಸಲು ಸಾಧ್ಯವಿಲ್ಲ. ಮೂಲತಃ ಪಿಶುನತಾವೇ ಮಂಥರೆಯಂತಹ ನೀಚ ಬುದ್ಧಿಯುಳ್ಳವರು ಮಾಡುವ ಕೆಲಸ. ಆದ್ದರಿಂದ ಚಾಡಿ ಹೇಳುವಿಕೆ ಒಂದಿದ್ದರೆ ಮಹಾಪಾತಕಗಳು ಎಲ್ಲವೂ ಇದ್ದಂತೆಯೇ.
ಸತ್ಯದ ನಿಷ್ಠೆ ದೃಢವಾಗಿದ್ದರೆ ಬೇರೆ ಯಾವ ತಪಸ್ಸುಗಳಿಲ್ಲದಿದ್ದರೂ ಜೀವಾತ್ಮನು ಉನ್ನತಿಗೆ ಎರಬಲ್ಲನು. ಸತ್ಯ ನಿಷ್ಠೆ ಒಂದಿಲ್ಲದಿದ್ದರೆ ಉಳಿದ ತಪಸ್ಸುಗಳು ದುರ್ಬಲವಾಗುವುದು ನಿಶ್ಚಿತ. ಒಂದು ಸತ್ಯನಿಷ್ಠೆಗಾಗಿ ಹರಿಶ್ಚಂದ್ರನು ಮಾಡಿರುವ ತ್ಯಾಗ ತಪಸ್ಸುಗಳಿಗೆ ಲೆಕ್ಕವುಂಟೆ? ಆದ್ದರಿಂದ ಸತ್ಯನಿಷ್ಠೆಯೇ ದೊಡ್ಡ ತಪಸ್ಸು. ಮನಸ್ಸು-ಮಾತುಗಳು ವಾಸ್ತವಿಕತೆಗೆ ಅನುಗುಣವಾಗಿಯೇ ಇರುವಂತೆ ಸತತ ಎಚ್ಚರಿಕೆಯಿಂದ ನೋಡಿಕೊಳ್ಳುವಿಕೆಯೇ ಸತ್ಯನಿಷ್ಠೆಯ ಮರ್ಮ, ಅದೇ ತಪಸ್ಸು.
ಮನಸ್ಸು ಅಂತರಾಳದಲ್ಲಿ ಪರಿಶುದ್ಧವಾಗಿದ್ದರೆ ತೀರ್ಥಕ್ಷೇತ್ರಗಳ ಅವಶ್ಯಕತೆಯಿಲ್ಲ. ಯಾಕೆಂದರೆ ಮನಸ್ಸಿನ ಅಂತರಾಳದ ಶುದ್ಧಿಗೋಸ್ಕರವೇ ತೀರ್ಥಕ್ಷೇತ್ರಗಳ ಸಂದರ್ಶನ ಮಾಡುವುದಿರುತ್ತದೆ. ಸೌಜನ್ಯವಿದ್ದರೆ ಸೈನ್ಯಬಲವೇಕೆ? ಸಮ್ರಾಟ್ ಅಶೋಕ ಚಕ್ರವರ್ತಿಯು ಕಳಿಂಗಯುದ್ಧದ ನಂತರ ಸಂಪೂರ್ಣವಾಗಿ ಯುದ್ಧವನ್ನು ತ್ಯಜಿಸಿದ್ದ. ಆದರೆ ಅವನ ಸೌಜನ್ಯದಿಂದ ಆಕಾಲದ ಯಾವ ಬೇರೆ ರಾಜರೂ ಅವನ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡವ ಆಲೋಚನೆ ಮಾಡಲಿಲ್ಲ.
ತನ್ನಲ್ಲಿ ಸದ್ಗುಣಗಳ ಸಂಪತ್ತಿದ್ದರೆ ಹೊರಗಿನ ಆಭರಣಗಳಿಂದ ಆಗಬೇಕಾದದ್ದಿಲ್ಲ. ಗಾಂಧೀಜಿಯವರು ಯಾವ ಆಭರಣ ಧರಿಸುತ್ತಿರಲಿಲ್ಲ. ಒಳ್ಳೆಯ ಬಟ್ಟೆಯನ್ನೂ ಧರಿಸುತ್ತಿರಲಿಲ್ಲ. ಆದರೂ ಎಲ್ಲರ ಆದರಕ್ಕೆ ಅವರು ಪಾತ್ರರಾಗಿದ್ದರು, ಈಗಲೂ ಪಾತ್ರರಾಗಿದ್ದಾರೆ.
ಸದ್ವಿದ್ಯೆ ಇದ್ದರೆ ಬೇರೆ ಯಾವ ಹಣವನ್ನು ಸಂಪಾದಿಸುವುದಕ್ಕಾಗಿ ಶ್ರಮಿಸಬೇಕಿಲ್ಲ. “ವಿದ್ಯಾನಾಮ ನರಸ್ಯ ರೂಪಂ ಅಧಿಕಂ ಪ್ರಚ್ಛನ್ನ ಗುಪ್ತಂ ಧನಂ” ವಿದ್ಯಾವಂತನು ಎಲ್ಲಾ ಕಡೆ ಗೌರವಿಸಲ್ಪಡುವುದರಿಂದ ಅವನಿಗೆ ಹಣಕ್ಕಾಗಿ ಶ್ರಮಿಸುವ ಅಗತ್ಯವಿರುವುದಿಲ್ಲ.
ಅಪಕೀರ್ತಿ-ಮಿಥ್ಯಾಪವಾದ ಬಂದುಬಿಟ್ಟರೆ ಅದಕ್ಕಿಂತ ಮಿಗಿಲಾದ ಮರಣವಿಲ್ಲ. “ಸಂಭಾವಿತಸ್ಯ ಚ ಅಕೀರ್ತಿಃ ಮರಣಾದತಿರಿಚ್ಯತೇ” ಒಳ್ಳೆಯ ಗುಣವುಳ್ಳವನು ಎಂಬುದಾಗಿ ಪರಿಗಣಿಸಲ್ಪಟ್ಟ ವ್ಯಕ್ತಿಗೆ ಅಪಕೀರ್ತಿಯೂ ಮರಣಕ್ಕಿಂತ ಮಿಗಿಲಾದ ನೋವನ್ನುಂಟುಮಾಡಬಲ್ಲದು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ