ದುರ್ಜನರಿಗೆ ಸದ್ಗುಣಗಳು ದುರ್ಗುಣವಾಗಿ ಕಾಣುತ್ತದೆ

posted in: Gurubodhe | 0

ಸಜ್ಜನರಲ್ಲಿ ಇರುವ ಅನೇಕ ಸದ್ಗುಣಗಳು ದುರ್ಜನರಿಗೆ ದುರ್ಗುಣವಾಗಿಯೇ ಕಾಣುತ್ತದೆ. ಆ ಕಾರಣದಿಂದಲೇ ಕೆಲವೊಮ್ಮೆ ಸಜ್ಜನರು ಟೀಕೆಗೆ ಒಳಗಾಗಬೇಕಾಗಿಬರುತ್ತದೆ.
ಇದಕ್ಕೆ ಒಂದಷ್ಟು ಉದಾಹರಣೆಗಳನ್ನು ಸುಭಾಷಿತಕಾರ ಕೊಡುತ್ತಾನೆ. “ಜಾಡ್ಯಂ ಹ್ರೀಮತಿ ಗಣ್ಯತೇ ವ್ರತಶುಚೌ ದಂಭಃ ಶುಚೌ ಕೈತವಂ || ಶೂರೇ ನಿರ್ಘುಣತಾ ಮುನೌ ವಿಮತಿತಾ ದೈನ್ಯಂ ಪ್ರಿಯಾಲಾಪಿನಿ | ತೇಜಸ್ವಿನ್ಯವಲಿಪ್ತತಾ ಮುಖರತಾ ವಕ್ತರ್ಯಶಕ್ತಿಃ ಸ್ಥಿರೇ | ತತ್ಕೋ ನಾಮ ಗುಣೋ ಭವೇತ್ ಸ ಗುಣಿನಾಂ ಯೋ ದುರ್ಜನೈರ್ನಾಂಕಿತಃ ||”
ಕೆಲವರು ಸಂಕೋಚ ಸ್ವಭಾವವುಳ್ಳವರಿರುತ್ತಾರೆ. ಅನವಶ್ಯಕವಾಗಿ ಮಾತನಾಡದೇ, ಕೆಲವೊಮ್ಮೆ ಮುನ್ನುಗ್ಗಿಬಂದು ಕೆಲಸ ಮಾಡದೇ ಹಿಂದಿರುತ್ತಾರೆ. ಸಂದರ್ಭಬಂದಾಗ ಸರಿಯಾಗಿಯೇ ಮಾತನಾಡುತ್ತಾರೆ ಮತ್ತು ಸರಿಯಾಗಿ ಕೆಲಸಮಾಡುತ್ತಾರೆ. ಆದರೆ ಅವರ ಈ ಸಂಕೋಚಗುಣ ಒಳ್ಳೆಯದಾಗಿದ್ದರೂ ದುರ್ಜನರಿಗೆ ಅದು ಜಾಡ್ಯ ಎಂಬುದಾಗಿ ತೋರುತ್ತದೆ. ಕೆಲವೊಮ್ಮೆ ಅವನನ್ನು ದಡ್ಡ ಎಂಬುದಾಗಿ ಭಾವಿಸುತ್ತಾರೆ. ಕೆಲವರು ನಿಷ್ಠೆಯಿಂದ ವ್ರತಗಳನ್ನು ಪಾಲಿಸುತ್ತಿರುತ್ತಾರೆ. ಉಪವಾಸ ವ್ರತ, ಮೌನವ್ರತ ಮುಂತಾದ ವ್ರತಗಳನ್ನು ನಿಷ್ಠೆಯಿಂದ ಪಾಲಿಸುತ್ತಿರುತ್ತಾರೆ. ದುರ್ಜನರಿಗೆ ಅದೊಂದು ಡಾಂಭಿಕತನ ಎಂಬುದಾಗಿ ಅನಿಸುತ್ತದೆ. ಕೆಲವರು ಯಾವಾಗಲೂ ಶುಚಿಯಾಗಿ ಇರುವುದನ್ನು ಬಯಸುತ್ತಾರೆ. ಅದಕ್ಕಾಗಿ ಸ್ನಾನ, ಪಾದ್ಯ, ಆಚಮನ ಮುಂತಾದ ನಿಯಮಗಳನ್ನು ಹಾಕಿಕೊಂಡು ಇರುತ್ತಾರೆ. ಅಂತವರ ಮಡಿವಂತಿಕೆಯನ್ನು ನೋಡಿ ದುರ್ಜನರು ಕಪಟತನ ಎಂಬುದಾಗಿ ಭಾವಿಸುತ್ತಾರೆ.
ಒಬ್ಬ ಶೂರನು ಯುದ್ಧದಲ್ಲಿ ಪರಾಕ್ರಮವನ್ನು ಮೆರೆದು ಶತ್ರುಗಳನ್ನು ಸಂಹಾರ ಮಾಡಿದರೆ ದುರ್ಜನರು ಅವನು ನಿರ್ದಯನೆಂಬುದಾಗಿ ಭಾವಿಸುತ್ತಾರೆ. ಕೆಲವರು ಅನೇಕ ಸಂದರ್ಭಗಳಲ್ಲಿ ಮೌನದಿಂದ ಇರುತ್ತಾರೆ. ಈ ಮೌನವನ್ನು ದುರ್ಜನರು ಬುದ್ಧಿ ಹೀನತೆ ಎಂಬುದಾಗಿ ಅರ್ಥೈಸುತ್ತಾರೆ. ಅಂದರೆ ಮಾತನಾಡುವ ಬುದ್ಧಿವಂತಿಕೆ ಇಲ್ಲದ್ದರಿಂದ ಆ ಕೊರತೆಯನ್ನು ಮುಚ್ಚಿಕೊಳ್ಳಲು ಮೌನದಿಂದ ಇರುತ್ತಾರೆ ಎಂದು ಭಾವಿಸುತ್ತಾರೆ. ವಿನಯ ಪೂರ್ವಕವಾದ ಮೃದುವಾದ ಮಾತನಾಡುವವರ ಸ್ವಭಾವವನ್ನು ದೈನ್ಯವೆಂದು ದುರ್ಜನರು ವ್ಯಾಖ್ಯಾನಿಸುತ್ತಾರೆ. ದಿಟ್ಟವಾಗಿ ಮಾತನಾಡಿದರೆ ಅವನನ್ನು ಗರ್ವಿಷ್ಠನೆಂದು ಭಾವಿಸುತ್ತಾರೆ. ಹೇಳಬೇಕಾದ ವಿಷಯಗಳನ್ನು ಸ್ಪಷ್ಟೀಕರಿಸುವ ಉದ್ದೇಶದಿಂದ ವಿವರವಾಗಿ ಹೇಳಲು ಹೊರಟರೆ ವಾಚಾಳಿತನವೆಂದು ಹೇಳುತ್ತಾರೆ. ತನ್ನನ್ನು ಟೀಕಿಸುವವನನ್ನು ಕುರಿತು ಮನಸ್ಸಿನಲ್ಲಿ ವಿಚಲಿತನಾಗದೆ ಕುಳಿತುಕೊಳ್ಳುವುದನ್ನು ಅಧ್ಯಾತ್ಮ ಶಾಸ್ತçವು ಪ್ರಶಂಸಿಸುತ್ತದೆ. “ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನಕೇನಚಿತ್” ಆದರೆ ದುರ್ಜನರು ಅವನನ್ನು ಪ್ರತಿಕ್ರಿಯಿಸುವ ಶಕ್ತಿ ಇಲ್ಲದವನು ಎಂದು ವ್ಯಾಖ್ಯಾನಿಸುತ್ತಾರೆ.
ದುರ್ಜನರ ದೃಷ್ಟಿಯೇ ಹೀಗೆ. ಅವರು ತಪ್ಪಾಗಿ ಭಾವಿಸದ ಒಂದೇ ಒಂದು ಸದ್ಗುಣ ಈ ಜಗತ್ತಿನಲ್ಲಿ ಇರಲಾರದು.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ