ರಾಹುವು ನುಂಗಿದರೂ ಬದಲಾಗದ ಸೂರ್ಯಚಂದ್ರರು

posted in: Gurubodhe | 0

ಲೋಕದಲ್ಲಿ ಹೆಚ್ಚು ತೇಜಸ್ವಿಯಾಗಿರುವ, ಪ್ರಭಾವಶಾಲಿಯಾಗಿರುವ ವ್ಯಕ್ತಿಗಳಿಗೆ ಅಡೆತಡೆಗಳು ಅನೇಕಸಲ ಬರುತ್ತವೆ, ಬಹುಶಃ ಉಳಿದವರಿಗಿಂತ ಹೆಚ್ಚು ಬರುತ್ತವೆ. ಆದರೂ ಅವರು ಸಹಿಸಿಕೊಂಡು ತಾಳ್ಮೆಯಿಂದ ಆ ಅಡೆತಡೆಗಳನ್ನು ದಾಟುತ್ತಾರೆ.
ಇದಕ್ಕೊಂದು ಸುಂದರ ದೃಷ್ಟಾಂತದ ಮೂಲಕ ವಿವರಣೆಯನ್ನು ಕೊಡುತ್ತಾನೆ. “ಸಂತ್ಯನ್ಯೇಽಪಿ ಬೃಹಸ್ಪತಿಪ್ರಭೃತಯಃ ಸಂಭಾವಿತಾಃ ಪಂಚಷಾಃ | ತಾನ್ಪçತ್ಯೇಷ ವಿಶೇಷ ವಿಕ್ರಮರುಚೀ ರಾಹುರ್ನವೈರಾಯತೇ || ದ್ವಾವೇವ ಗ್ರಸತೇ ದಿವಾಕರನಿಶಾ ಪ್ರಾಣೇಶ್ವರೌ ಭಾಸ್ವರೌ | ಭ್ರಾತಃ ಪರ್ವಣಿಪಶ್ಯ ದಾನವಪತಿಃ ಶೀರ್ಷಾವಶೇಷಾಕೃತಿಃ ||” ಗ್ರಹಮಂಡಲದಲ್ಲಿ ಸೂರ್ಯ-ಚಂದ್ರರಿರುವಂತೆ ಬೃಹಸ್ಪತಿ, ಬುಧ, ಶುಕ್ರ, ಶನಿ, ಮಂಗಳ ಎಂಬ ಐದು ಗ್ರಹಗಳಿವೆ. ಇವರೆಲ್ಲರೂ ತಮ್ಮ ತಮ್ಮ ಮಹಿಮೆಗಳಿಂದ ಕೂಡಿದವರೇ ಆಗಿದ್ದಾರೆ. ಆದರೆ ರಾಹುವು ಈ ಐವರನ್ನು ದ್ವೇಶಿಸುವುದಿಲ್ಲ. ದೊಡ್ಡವರನ್ನು ಆಕ್ರಮಿಸಿ ತಾನು ಗೆಲ್ಲಬೇಕೆಂಬುದು ಈ ರಾಹುವಿಗೆ ಇದೆ. ಯಾಕೆಂದರೆ ಅವನೊಬ್ಬ ರಾಕ್ಷಸ. ಸಮುದ್ರ ಮಥನದಿಂದ ಹುಟ್ಟಿದ ಅಮೃತವನ್ನು ಕದ್ದು ತಿನ್ನಲು ಅವನು ಮುಂದಾದಾಗ ಭಗವಂತನ ಚಕ್ರಾಯುಧದಿಂದ ಕತ್ತರಿಸಲ್ಪಟ್ಟಾಗ ಉಳಿದಿರುವ ತಲೆಯ ಭಾಗವೇ ಈ ರಾಹು. ಅಸುರನಾದ್ದರಿಂದ ದೇವತೆಗಳಿಗೆ ತೊಂದರೆಕೊಡಬೇಕೆಂಬ ಬುದ್ಧಿ ಅವನಿಗೆ ಆಗಾಗ ಬರುತ್ತಿರುತ್ತದೆ. ಆದರೂ ಗುರುಶುಕ್ರಾದಿಗಳನ್ನು ಆತ ಆಕ್ರಮಿಸುವುದಿಲ್ಲ.
ಆದರೆ ಹಗಲಿನ ಒಡೆಯನಾದ ಸೂರ್ಯ ಮತ್ತು ರಾತ್ರಿಯ ಒಡೆಯನಾದ ಚಂದ್ರನನ್ನು ನುಂಗುವವನಂತೆ ಆಕ್ರಮಿಸುತ್ತಾನೆ. ಯಾಕೆಂದರೆ ಇವರಿಬ್ಬರೂ ಹೆಚ್ಚು ಪ್ರಕಾಶವುಳ್ಳವರು. ಗ್ರಹಣಕಾಲದಲ್ಲಿ ರಾಹುವು ಸೂರ್ಯ ಚಂದ್ರರನ್ನು ಆಚ್ಛಾದಿಸುತ್ತಾನೆ. (ಗ್ರಹಣದ ವಸ್ತುಸ್ಥಿತಿಯನ್ನು ಪ್ರಾಚೀನ ಖಗೋಳಶಾಸ್ತç ಜೌತಿಷವು ವೈಜ್ಞಾನಿಕವಾಗಿ ನಿರೂಪಿಸಿದೆ. ರಾಹುಕೇತುಗಳೆಂದರೆ ನೆರಳು. ಸೂರ್ಯ ಚಂದ್ರರ ಮೇಲೆ ಗ್ರಹಣವು ಹೇಗೆ ಮತ್ತು ಯಾವಾಗ ಆಗುತ್ತದೆ ಎಂಬುದನ್ನು ದೃಗ್ಗಣಿತದ ಮೂಲಕ ನಿಖರವಾಗಿ ಕಂಡುಹಿಡಿದಿದ್ದಾರೆ. ಆದರೆ ಕಥೆಗಳ ರೂಪದಲ್ಲಿ ಹೇಳುವಾಗ ಅವನನ್ನು ರಾಕ್ಷಸ ಎಂಬುದಾಗಿ ಮತ್ತು ನುಂಗುತ್ತಾರೆ ಎಂಬುದಾಗಿ ಹೇಳುವ ರೂಢಿ ಇದೆ.) ಈ ರಾಹುವಿಗೆ ಹೆಚ್ಚು ಪ್ರಭಾವ ಉಳ್ಳವರು ಮೊದಲು ಗೋಚರವಾಗುತ್ತಾರೆ. ಆದ್ದರಿಂದಲೇ ಅವರನ್ನೇ ನುಂಗುತ್ತಾನೆ. “ಅಣ್ಣಾ, ನೋಡು, ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಈ ರಾಕ್ಷಸ ಶ್ರೇಷ್ಠನು ಸೂರ್ಯ ಚಂದ್ರರನ್ನು ನುಂಗುತ್ತಾನೆ ! ಬರೀ ತಲೆ ಒಂದೇ ಇದ್ದರೂ ಇವನೆಷ್ಟು ಪರಾಕ್ರಮಿ!” ಎನ್ನುತ್ತಾನೆ ಕವಿ.
ಹೀಗೆ ರಾಹುವಿನ ಆಕ್ರಮಣಕ್ಕೆ ಒಳಗಾದರೂ ಸೂರ್ಯ ಚಂದ್ರರು ತಮ್ಮ ಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ, ತಮ್ಮ ತೇಜಸ್ಸನ್ನು ಕಳೆದುಕೊಳ್ಳುವುದಿಲ್ಲ. ತಾಳ್ಮೆಯಿಂದ ಇರುವ ಮೂಲಕ ರಾಹುವಿನ ಆಕ್ರಮಣವನ್ನು ಎದುರಿಸುತ್ತಾರೆ, ಬಿಡುಗಡೆ ಹೊಂದುತ್ತಾರೆ. ಹಾಗೆಯೇ ತೇಜಸ್ವಿಗಳಾದ, ಪ್ರಭಾವಶಾಲಿಗಳಾದ ವ್ಯಕ್ತಿಗಳು ಅಡೆತಡೆಗಳು, ಕಷ್ಟ ಪರಿಸ್ಥಿತಿಗಳು ಬಂದರೂ ಕೂಡ ಸಹನೆಯಿಂದ ಇರುವ ಮೂಲಕ ಎದುರಿಸುತ್ತಾರೆ. ಕಾಲ ಬಂದಾಗ ತಾನಾಗಿಯೇ ಅಡೆತಡೆಗಳು ನಿವಾರಣೆ ಆಗುತ್ತವೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ