ಶ್ರೀ ಕ್ಷೇತ್ರ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮಹಾನವಮಿ ಹಾಗೂ ಲಕ್ಷ್ಮಿ ಪೂಜೆ ಪ್ರಯುಕ್ತ ವಿಶೇಷ ಪೂಜಾ ಸಂಪನ್ನ.

posted in: Events | 0

ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗುತ್ತಿದೆ. ನವರಾತ್ರಿಯ ಒಂಭತ್ತನೆಯ ದಿನವಾದ ಮಹಾನವಮಿಯಂದು ಆರಾಧ್ಯ ದೈವ ಶ್ರೀ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ಸಮರ್ಪಿಸಲಾಯಿತು. ಲಕ್ಷ್ಮಿಪೂಜೆಯು ನಡೆಯಿತು.

ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ
ಇಂದಿನ ವಿಶೇಷ ಪೂಜೆಯು ‘ಶುಂಭಾಸುರಮರ್ದಿನಿ’ಯ ಸ್ವರೂಪದಲ್ಲಿ ನೆರವೇರಿತು. ಗರ್ಭಗುಡಿಯಲ್ಲಿ ದೇವಿಯು ಧರಿಸಿದ ದಿವ್ಯ ವಸ್ತ್ರಾಭೂಷಣಗಳು ಹಾಗೂ ಮಿನುಗುವ ಸಿಂಹಾಸನದ ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು.
ನವದುರ್ಗಾ ಪೂಜೆಯ ಅಂಗವಾಗಿ ಪಂಡಿತರು ಮತ್ತು ಅರ್ಚಕರು ದೇವಿಯ ದಿವ್ಯ ನಾಮಾವಳಿಗಳನ್ನು ಪಠಿಸುತ್ತಾ ವಿಶೇಷ ಅರ್ಚನೆಗೈದರು. ಸಕಲ ಜೀವಕೋಟಿಗೂ ಜ್ಞಾನ, ರಕ್ಷಣೆ ಮತ್ತು ಶಕ್ತಿಯನ್ನು ನೀಡುವ ತಾಯಿಯ ಈ ರೂಪವು ಭಕ್ತರಲ್ಲಿ ಅಪಾರ ಭಕ್ತಿಯನ್ನು ಜಾಗೃತಗೊಳಿಸಿತು.

ಪೂಜ್ಯ ಉಭಯ ಶ್ರೀಗಳ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಸಮಸ್ತ ಲೋಕಕ್ಕೆ ಐಶ್ವರ್ಯ, ಧಾನ್ಯ, ಸೌಭಾಗ್ಯ ಹಾಗೂ ಸಮೃದ್ಧಿಯನ್ನು ಕರುಣಿಸುವ ಜಗನ್ಮಾತೆ ಮಹಾಲಕ್ಷ್ಮೀಯನ್ನು ಆರಾಧಿಸಲಾಯಿತು. ಪೂಜೆಯು ಭಕ್ತರ ಪಾಲಿಗೊಂದು ಅಪರೂಪದ ಆಧ್ಯಾತ್ಮಿಕ ಅನುಭೂತಿಯನ್ನು ನೀಡಿತು. ತಾಯಿಯ ಕೃಪಾಕಟಾಕ್ಷದಿಂದ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ, ರೈತರ ಬೆಳೆಗಳು ಸಮೃದ್ಧವಾಗಿ ಬೆಳೆಯಲಿ ಮತ್ತು ಪ್ರತಿಯೊಬ್ಬರ ಇಷ್ಟಾರ್ಥಗಳು ಸಿದ್ಧಿಸಲಿ ಎಂಬ ಸಂಕಲ್ಪದಿಂದ ದೇವಿಯನ್ನು ಅರ್ಚಿಸಿ, ಪೂಜಿಸಿದರು

ಪೂಜ್ಯ ಉಭಯ ಶ್ರೀಗಳ ಸಮ್ಮುಖದಲ್ಲಿ ನಡೆದ ಪೂಜೆಯು ಭಕ್ತರಿಗೆ ಧನ್ಯತಾ ಭಾವವನ್ನು ತಂದುಕೊಟ್ಟಿದೆ. ನವರಾತ್ರಿಯ ಕೊನೆಯ ಘಟ್ಟದ ಈ ಮಂಗಳಕರ ಸಂದರ್ಭದಲ್ಲಿ ನೂರಾರು ಭಕ್ತರು ಶ್ರೀ ರಾಜರಾಜೇಶ್ವರಿ ದೇವಿಯ ದರ್ಶನ ಪಡೆದು, ಮಹಾಸ್ವಾಮಿಗಳ ಆಶೀರ್ವಾದವನ್ನು ಪಡೆದು ಕೃತಾರ್ಥರಾದರು.
ಈ ಮಹಾನವಮಿಯ ದಿವ್ಯ ಪೂಜೆಯು ಭಕ್ತರ ಬಾಳಿಗೆ ನವಚೈತನ್ಯವನ್ನು, ಆರೋಗ್ಯ-ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.